ಕೈಮಗ್ಗ ನೇಕಾರರನ್ನು ಉಳಿಸಿ ಆಂದೋಲನದಡಿ ಪ್ರತಿಭಟನೆ
ಹೊಳೆನರಸೀಪುರ: ಕೈಮಗ್ಗ ನೇಕಾರಿಕೆಯಲ್ಲಿ ಸರ್ಕಾರಗಳು ಯಾಂತ್ರೀಕರಣವನ್ನು ಪ್ರೋತ್ಸಾಹಿಸುವುದನ್ನು ಕೂಡಲೇ ನಿಲ್ಲಿಸಿ ಬೀದಿಗೆ ಬೀಳುತ್ತಿರುವ ಗ್ರಾಮೀಣ ಕೈಮಗ್ಗ ನೇಕಾರರನ್ನು ಉಳಿಸುವಂತೆ ಆಗ್ರಹಿಸಿ ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟದ ತಾಲೂಕಿನ ನೇಕಾರ ಸಮುದಾಯದ ಬಂಧುಗಳು ಕೈಮಗ್ಗ ಉಳಿಸಿ ರಾಷ್ಟ್ರೀಯ ಆಂದೋಲನದ ಅಂಗವಾಗಿ ಶುಕ್ರವಾರ ಇಲ್ಲಿನ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಪ್ರಪಂಚದ ಮತ್ತಾವ ದೇಶದಲ್ಲೂ ಇಲ್ಲದಷ್ಟು ಸಮೃದ್ಧವಾದ, ವಿಸ್ತಾರವಾದ ಹಾಗೂ ವೈವಿದ್ಯಮಯವಾದ ನೇಕಾರಿಕೆಯ ಪರಂಪರೆಯನ್ನು ಹೊಂದಿರುವ ಭಾರತದಲ್ಲಿ ವಿವಿಧ ಸರ್ಕಾರಗಳು ಇತ್ತೀಚಿನ ವರ್ಷಗಳಲ್ಲಿ ನೇಕಾರಿಕೆಯಲ್ಲಿ ಯಾಂತ್ರೀಕರಣಕ್ಕೆ ಪ್ರೋತ್ಸಾಹ ನೀಡುತ್ತಿವೆ. ಗ್ರಾಮೀಣ ನೇಕಾರಿಕೆಯನ್ನು ನಶಿಸುವ ಹಂತಕ್ಕೆ ತಂದೊಡ್ಡಿವೆ ಎಂದು ತಾಲೂಕಿನ ನೇಕಾರರು ಸರ್ಕಾರದ ನೀತಿಯನ್ನು ಖಂಡಿಸಿದರು.
ಬದುಕು ಮೂರಾಬಟ್ಟೆ: ನಾನಾ ಸರ್ಕಾರಗಳು ಕೈಮಗ್ಗ ಮೀಸಲಾತಿ ನಿಯಮವನ್ನು ಗಾಳಿಗೆ ತೂರಿ ನೇಕಾರಿಕೆ ಕ್ಷೇತ್ರದಲ್ಲಿ ವಿದ್ಯುತ್ ಮಗ್ಗಗಳನ್ನು ಅಳವಡಿಸಲು ಪ್ರೋತ್ಸಾಹ ನೀಡುತ್ತಿರುವ ಕ್ರಮದಿಂದಾಗಿ ಗ್ರಾಮೀಣ ನೇಕಾರರು ಬೀದಿಗೆ ಬೀಳುತ್ತಿದ್ದಾರೆ ಎಂದು ನೇಕಾರರು ಅಲವತ್ತುಕೊಂಡರು. ನೇಕಾರಿಕೆಯಲ್ಲಿನ ಯಾಂತ್ರೀಕರಣದಿಂದಾಗಿ ದೇಶದ ಮಾರುಕಟ್ಟೆಗೆ ಶೇ.70ರಷ್ಟು ಪ್ರಮಾಣದಲ್ಲಿ ವಿದ್ಯುತ್ ಮಗ್ಗಗಳ ಕಲಬೆರಕೆ ಬಟ್ಟೆಗಳು ದಾಳಿಯಿಡುತ್ತಿರುವುದಾಗಿ ಹೇಳಿದ ಅವರು, ಇದರಿಂದಾಗಿ ಗ್ರಾಮೀಣ ನೇಕಾರರ ಬಟ್ಟೆಗಳಿಗೆ ಮಾರುಕಟ್ಟೆ ಇಲ್ಲದಂತಾಗಿ ಇದನ್ನೇ ನಂಬಿದ ಜನರ ಬದುಕು ಮೂರಾಬಟ್ಟೆಯಾಗಿದೆ ಎಂದರು.
ಪಾದಯಾತ್ರೆ: ಈ ನಿಟ್ಟಿನಲ್ಲಿ ಕೈಮಗ್ಗವನ್ನು ಮತ್ತು ಗ್ರಾಮೀಣ ನೇಕಾರರನ್ನು ಉಳಿಸುವಂತೆ ಆಗ್ರಹಿಸಿ ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟವು ಪ್ರಸಕ್ತ ಜ. 1ರಿಂದ ರಾಷ್ಟ್ರೀಯ ಕೈಮಗ್ಗ ಸತ್ಯಾಗ್ರಹಕ್ಕೆ ಕರೆ ನೀಡಿದ್ದು, ರಾಜ್ಯದಲ್ಲಿನ ಎಲ್ಲಾ ನೇಕಾರರು, ಕೈಮಗ್ಗ ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರು, ಪರಿಸರವಾದಿಗಳು, ಸಾಹಿತಿಗಳು ಹಾಗೂ ಕಲಾವಿದರು ಜ.15ರವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ ಎಂದರು.
ಉಪವಾಸ ಸತ್ಯಾಗ್ರಹ: ಈಗಲೂ ಸರ್ಕಾರ ಕೈಮಗ್ಗದ ಕ್ಷೇತ್ರದಲ್ಲಿ ಯಾಂತ್ರೀಕರಣವನ್ನು ಪ್ರೋತ್ಸಾಹಿಸುವುದನ್ನು ಕೈಬಿಟ್ಟು ನೇಕಾರರನ್ನು ಉಳಿಸುವಂತೆ ಆಗ್ರಹಿಸಿದ್ದು, ಇದಕ್ಕೆ ಸೂಕ್ತ ಪ್ರತಿಕ್ರಿಯೆ ದೊರೆಯದಿದ್ದಲ್ಲಿ ಜ. 30ರಿಂದ ದೇಸೀ ಚರಕ ಸಂಸ್ಥೆಯ ಕಾರ್ಯಕರ್ತರು, ಕನ್ನಡದ ಲೇಖಕರು, ರಂಗಕರ್ಮಿಗಳೂ ಆದ ಪ್ರಸನ್ನ ಅವರ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿರುವುದಾಗಿ ತಿಳಿಸಿದರು.
ಒತ್ತಾಯ: ರಾಜ್ಯ ಸರ್ಕಾರ ಕೂಡಲೇ ಕೈಮಗ್ಗ ಉದ್ದಿಮೆಯ ಯಾಂತ್ರೀಕರಣ ಪ್ರಕ್ರಿಯೆಯನ್ನು ನಿಲ್ಲಿಸಬೇಕು, ಕೈಮಗ್ಗ ನೇಕಾರಿಕೆ ಕ್ಷೇತ್ರದಲ್ಲಿ ವಿದ್ಯುತ್ ಮಗ್ಗಗಳನ್ನು ಅಳವಡಿಸುವ ಕಾರ್ಯಕ್ರಮವನ್ನು ಕೈಬಿಡಬೇಕು, ಕೈಮಗ್ಗ ಪದಾರ್ಥಗಳ ಮೀಸಲಾತಿ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು, ಕೈಮಗ್ಗ ನೇಕಾರಿಕೆ ಕ್ಷೇತ್ರಗಳಲ್ಲಿ ತಪ್ಪಾಗಿ ಅಳವಡಿಸಲಾಗಿರುವ ವಿದ್ಯುತ್ ಮಗ್ಗಗಳಿಂದಾಗಿ ವಿದ್ಯುತ್ ಮಗ್ಗಗಳ ಕಾರ್ಮಿಕರು ಬೀದಿ ಪಾಲಾಗುವುದನ್ನು ತಪ್ಪಿಸಿ, ಕೈಮಗ್ಗಕ್ಕೆ ಮೀಸಲಿರದ ಇತರೆ ಬಟ್ಟೆಗಳ ನೇಯ್ಗೆಯನ್ನು ಮಾಡಲಿಕ್ಕೆ ವಿದ್ಯುತ್ ಕಾರ್ಮಿಕರಿಗೆ ನೂಲು ಒದಗಿಸಿ ಮತ್ತು ಅಂತಹ ಬಟ್ಟೆಗಳನ್ನು ವಿದ್ಯುತ್ ಮಗ್ಗಗಳ ಅಬಿವೃದ್ಧಿ ನಿಗಮದ ಮೂಲಕ ಖರೀದಿಸುವುದು, ನೆನೆಗುದಿಗೆ ಬಿದ್ದಿರುವ ವಿವಿಧ ಕೈಮಗ್ಗ ಯೋಜನೆಗಳು ಗ್ರಾಮೀಣ ಫಲಾನುಭವಿಗಳನ್ನು ತಲುಪುವಂತೆ ಸರ್ಕಾರಿ ವ್ಯವಸ್ಥೆಯನ್ನು ರೂಪಿಸುವಂತೆ ಈ ಸಂದರ್ಭದಲ್ಲಿ ತಾಲೂಕಿನ ನೇಕಾರ ಬಂಧುಗಳು ಸರ್ಕಾರವನ್ನು ಒತ್ತಾಯಿಸಿದರು.