ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಗರಕ್ಕೆ ಎರಡು ಪ್ರತಿಭಟನೆ ಬಿಸಿ

Vishwanath S
Updated On : 19 Jan 2014, 1:16 am

ಕ.ಪ್ರ.ವಾರ್ತೆ ,  ಹಾಸನ ,  ಜ.18
ನಾನಾ ಬೇಡಿಕೆಗಳಿಗೆ ಆಗ್ರಹಿಸಿ ನಗರದಲ್ಲಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಾಹಿತ್ಯ ಪರಿಷತ್, ಸಮತಾ ಸೈನಿಕ ದಳ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.
ಕನ್ನಡ ವಿರೋಧಿ ನಿತ್ಯಾನಂದಸ್ವಾಮಿ ಕನ್ನಡವನ್ನು ನಿಂದಿಸಿದ್ದನ್ನು ಖಂಡಿಸಿ ಹಾಗೂ ಆತನನ್ನು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ನಿತ್ಯಾನಂದ ಸ್ವಾಮಿಯ ಅನಧಿಕೃತ ಆಸ್ತಿಯನ್ನು ಸರ್ಕಾರವೇ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಇದೇ ವೇಳೆ ಪ್ರತಿಭಟನಾಕಾರರು ಆಗ್ರಹಿಸಿದರು.
ಡಿಸಿಗೆ ಮನವಿ: ನಗರದ ಹೇಮಾವತಿ ಪ್ರತಿಮೆ ಬಳಿಂದ ಮೆರವಣಿಗೆ ಹೊರಟ ಪ್ರತಿಭಟನಾಕರರು ನಗರದ  ನರಸಿಂಹರಾಜ ವೃತ್ತದಲ್ಲಿ ನಿತ್ಯಾನಂದನ ಪ್ರತಿಕೃತಿ ದಹಿಸಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ಪ್ರತಿಭಟನಾಕಾರರು, ನಿತ್ಯಾನಂದ ಕಳಿಂಕತ ಸ್ವಾಮಿ, ವೇಷಧರಿಸಿ ನಮ್ಮ ರಾಜ್ಯದಲ್ಲಿ ತಿಂದು, ಉಂಡು, ಆಸ್ತಿಪಾಸ್ತಿ ಎಲ್ಲವನ್ನೂ ಮಾಡಿ. ಕನ್ನಡದ ಹಾಗೂ ಕನ್ನಡಿಗರನ್ನು ನಿಂದಿಸಲು ಹೊರಟಿದ್ದಾನೆ. ಇಂತಹ ಢೋಂಗಿ, ಕಳಂಕಿತ ಸ್ವಾಮಿಯನ್ನು ರಾಜ್ಯದಿಂದ ಗಡಿಪಾರು ಮಾಡಿ, ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಎಚ್ಚರಿಕೆ: ಈತ ಮಾಡಿರುವ ಅನಧಿಕೃತವಾಗಿ ಸಂಪಾದಿಸಿದ ಆಸ್ತಿಯನ್ನು ಕೂಡಲೇ ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳದಿದ್ದರೆ ಕರವೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಡಿಡಿಪಿಐ, ಬಿಇಓ ಅಮಾನತಿಗೆ ಆಗ್ರಹ: ಚನ್ನರಾಯಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ನಂತರ ಮಾತನಾಡಿದ ಅವರು, ಚನ್ನರಾಯಪಟ್ಟಣ ತಾಲೂಕು ಹಿರೀಸಾವೆ ಗ್ರಾಮದ 15 ಗುಂಟೆ ಜಾಗವು ಸರ್ಕಾರಿ ಶಾಲೆಯ ಜಾಗವಾಗಿದ್ದು, ಈ  ಜಾಗವನ್ನು  ಪಕ್ಕದ ಜಮೀನಿನವರು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟ್ಟಡವನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕರವೇ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಪ್ರೀತಂ, ಉಪಾಧ್ಯಕ್ಷ ಸೀತಾರಾಂ, ಹರೀಶ್‌ಗೌಡ, ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್, ನಗರಾಧ್ಯಕ್ಷ ಶಿವು, ಜಿಲ್ಲಾ ವಕ್ತಾರ ದೊಡ್ಡಮಗ್ಗೆ ರಾಜೇಂದ್ರ, ಸಂಘಟನಾ ಕಾರ್ಯದರ್ಶಿ ರೆಹಮಾನ್ ಖಾನ್, ಜಿಲ್ಲಾ ಉಪಾಧ್ಯಕ್ಷ ಬಳಗಟ್ಟೆ ಲೋಕೇಶ, ಜಿಲ್ಲಾ ರೈತ ಘಟಕದ ಬೋರೇಗೌಡ, ಜಿಲ್ಲಾ ಉಪಾಧ್ಯಕ್ಷ ಯೋಗೇಶ್ ಹಾಗೂ ಇತರರು ಪಾಲ್ಗೊಂಡಿದ್ದರು.
ಮೂರು ವರ್ಷಗಳಿಂದ ಕರ್ನಾಟಕ ರಕ್ಷಣಾ ವೇದಿಕೆ, ಡಾ.ಜಿ. ಪರಮೇಶ್ವರ್ ಯುವಕ ಸಂಘ, ಛಲವಾಡಿ ಮಹಾಮಂಡಲ ಸಂಘಗಳು ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಇದಕ್ಕೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಗಮನಕ್ಕೂ ತಂದಿದ್ದರೂ ಏನೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಚನ್ನರಾಯಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಗಮನಕ್ಕೆ  ಹಲವಾರು ಬಾರಿ ತರಲಾಗಿದೆ. ಆದರೆ ಅವರು ಯಾವುದೇ ಕ್ರಮ ಕೈಗೊಳ್ಳದೆ ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು 4-5 ದಿನಗಳಲ್ಲಿ ಶಾಲೆ ಒತ್ತುವರಿ ಜಾಗವನ್ನು ಬಿಡಿಸದ ಪಕ್ಷದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.  
ಈ ಪ್ರತಿಭಟನೆಯ ನೇತೃತ್ವವನ್ನು ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ವಹಿಸಿದ್ದರು.
ದಲಿತನ ಹತ್ಯೆಗೆ ಖಂಡನೆ, ಟೈರಿಗೆ ಬೆಂಕಿ
ಯಾದಗಿರಿ ಜಿಲ್ಲೆಯ ಷಹಾಪುರ ತಾಲೂಕಿನ ಕನ್ನಾಕೊಳೂರು ಗ್ರಾಮದ ದಲಿತನ ಹತ್ಯೆ ಖಂಡಿಸಿ ಶನಿವಾರ ನಗರದಲ್ಲಿ  ದಲಿತ ಸಾಹಿತ್ಯ ಪರಿಷತ್, ಸಮತಾ ಸೈನಿಕ ದಳ, ಪಿಯುಸಿಎಲ್ ಮತ್ತು ಅಂಬೇಡ್ಕರ್ ಯುವಕ ಸಂಘ ಹಾಗೂ ನಾನಾ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ನಗರದ ಎನ್.ಆರ್. ವೃತ್ತದಲ್ಲಿ ಬೈಕ್ ಗಳಳ ಟೈರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಕೆಲಕಾಲ ಧರಣಿ ನಡೆಸಿ, ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನಾಕರರು ಮಾತನಾಡಿ, ಕನ್ಯಾಕೊಳ್ಳೂರು ಗ್ರಾಮದ ಚೌಡೇಶ್ವರಿ ದೇವಾಲಯದಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತಿದ್ದು, ಈ ಸಂಬಂಧ ಎಲ್ಲ ಜಾತಿಯ ಜನರೂ  ಸೇರಿ ದೇವಾಲಯದ ಕಾರ್ಯದಲ್ಲಿ ತೊಡಗಿದ್ದಾಗ ದಲಿತ ಸಮುದಾಯದ ಜನರೂ ಕೂಡ  ತಮ್ಮ ಗ್ರಾಮ ದೇವತೆಯ ಜಾತ್ರೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದ ಸಂದರ್ಭ ಇದಕ್ಕೆ ಸವರ್ಣೀಯರು ಅಡ್ಡಿಪಡಿಸಿದ ವೇಳೆ ಘರ್ಷಣೆ ನಡೆದು ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವುದನ್ನು ಖಂಡಿಸಿದರು. ಇದೊಂದು ಘೋರ ಕೃತ್ಯವಾಗಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು. ಬರ್ಬರ ಹತ್ಯೆಯನ್ನು ದಲಿತ ಸಂಘಟನೆಗಳು ಖಂಡಿಸುತ್ತವೆ. ತಕ್ಷಣವೇ ಕೊಲೆಗಾರರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯ ನೇತೃತ್ವವನ್ನು ಸಮತಾ ಸೈನಿಕದಳದ ಜಿಲ್ಲಾಧ್ಯಕ್ಷ ಆರ್‌ಪಿಐ  ಸತೀಶ್,  ದಸಾಪ ಜಿಲ್ಲಾಧ್ಯಕ್ಷ ಹೆತ್ತೂರು ನಾಗರಾಜ್,  ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ಸ್ಟೀವನ್ ಪ್ರಕಾಶ್, ನಿಟ್ಟೂರು ಸ್ವಾಮಿ, ಆಡುವಳ್ಳಿ ಹೇಮಂತ್, ವೇಣುಕುಮಾರ್, ನಿಟ್ಟೂರು ತೋಟೇಶ್ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement