ಬಾಗೂರು ಗ್ರಾಪಂ ಅಧ್ಯಕ್ಷರಾಗಿ ಉಮಾದೇವಿ
ಬಾಗೂರು (ಚನ್ನರಾಯಪಟ್ಟಣ ತಾ.): ಬಾಗೂರುಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಉಮಾದೇವಿ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಮ್ಮ ಅವರು ಶನಿವಾರ ಅವಿರೋಧವಾಗಿ ಅಯ್ಕೆಯಾದರು. ಒಪ್ಪಂದದಂತೆ ನೀಲಮ್ಮ ಹಾಗೂ ಲೀಲಾವತಿಯವರ ಅಧಿಕಾರಾವಧಿ ಮುಗಿದ ಹಿನ್ನಲೆಯಲ್ಲಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಯಿತು. ಅಧ್ಯಕ್ಷೆ ಬಿಸಿಎಂಎ ಸ್ಥಾನಕ್ಕೂ ಉಪಾಧ್ಯಕ್ಷೆ ಸಾಮಾನ್ಯ ಸ್ಥಾನಕ್ಕೂ ಯಾರು ನಾಮ ಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಕಾರ್ಯನಿರ್ವಣಾಧಿಕಾರಿ ಮೃತ್ಯುಂಜಯರವರು ಉಮಾದೇವಿ ಮತ್ತು ಲಕ್ಷ್ಮಮ್ಮ ಅವರ ಆಯ್ಕೆಯನ್ನು ಪ್ರಕಟಿಸಿದರು.
ಮುದುಡಿಯಲ್ಲಿ ಬಸ್ ನಿಲುಗಡೆಗೆ ಆಗ್ರಹಿಸಿ 27ಕ್ಕೆ ಪ್ರತಿಭಟನೆ
ಹಾಸನ: ಅರಸೀಕೆರೆ ತಾಲೂಕು ಮುದುಡಿ ಗ್ರಾಮದಲ್ಲಿ (ಅಂತರರಾಜ್ಯ ಹೊರತುಪಡಿಸಿ) ಎಲ್ಲ ವೇಗದೂತ ಬಸ್ಗಳ ನಿಲುಗಡೆಗಾಗಿ ಆಗ್ರಹಿಸಿ ಜ. 27ರಂದು ರಸ್ತೆತಡೆ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮುದುಡಿ ಗ್ರಾಮ ಪಂಚಾಯ್ತಿ ಗ್ರಾಮಸ್ಥರು ತಿಳಿಸಿದ್ದಾರೆ. ಕೆಎಸ್ಆರ್ಟಿಸಿ ಬೆಂಗಳೂರು ಕೇಂದ್ರ ಕಚೇರಿ ವ್ಯಾಪ್ತಿಗೆ ಬರುವ ದಾವಣಗೆರೆ ವಿಭಾಗೀಯ ನಿಯಂತ್ರಣಕ್ಕೆ ಒಳಪಟ್ಟ ಹಾಗೂ ವಾಯುವ್ಯ ಮತ್ತು ಈಶಾನ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಮತ್ತು ಗುಲ್ಬರ್ಗ ಕೇಂದ್ರ ಕಚೇರಿಗೆ ಸಂಬಂಧಪಟ್ಟ ಎಲ್ಲ ವಿಭಾಗೀಯ ಮಟ್ಟದ ವೇಗದೂತ ಬಸ್ಗಳನ್ನು ಗ್ರಾಮ ಪಂಚಾಯ್ತಿ ಕೇಂದ್ರವಾದ ಮುದುಡಿಯಲ್ಲಿ ನಿಲುಗಡೆ ಮಾಡಲು ಆದೇಶಿಬೇಕೆಂದು ಕೋರಿದ್ದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರಾದ ಜಯದೇವಪ್ಪ, ರಂಗಸ್ವಾಮಿ, ಗಂಗಾಧರ, ಕರೀಗಾಡ, ಕರವೇ ತಾ. ಉಪಾಧ್ಯಕ್ಷ ಗಂಗಾಧರನಾಯಕ್, ಅಧ್ಯಕ್ಷ ಹೇಮಂತ ಕುಮಾರ್ ಇನ್ನಿತರರು ಆಗ್ರಹಿಸಿದ್ದಾರೆ.
ಇಂದು ಆದಿಜಾಂಬವ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ಹೊಳೆನರಸೀಪುರ: ಶ್ರೀ ಆದಿಜಾಂಬವ ನೌಕರ ಮಹಾಸಭಾ ತಾಲೂಕು ಸಮಿತಿ ವತಿಯಿಂದ 2014ನೇ ಸಾಲಿನ ಪ್ರತಿಭಾ ಪುರಸ್ಕಾರ, ಮಹಾಶಿವಶರಣ ಹರಳಯ್ಯನವರ ಕ್ಯಾಲೆಂಡರ್ ಬಿಡುಗಡೆ ಮತ್ತು ಸಮುದಾಯದ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭವನ್ನು ಜ.19ರಂದು ಬೆಳಗ್ಗೆ 11ಕ್ಕೆ ಪಟ್ಟಣದ ಕೋಟೆ ಬೀದಿಯ ಶ್ರೀ ರಾಘವೇಂದ್ರ ಮಠದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮವವನ್ನು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್.ಡಿ. ರೇವಣ್ಣ ಉದ್ಘಾಟಿಸಿ ಕ್ಯಾಲೆಂಡರ್ ಬಿಡುಗಡೆ ಮಾಡುವರು. ಆದಿಜಾಂಬವ ನೌಕರ ಮಹಾಸಭಾ ತಾಲೂಕು ಅಧ್ಯಕ್ಷ ಕರಿಯಪ್ಪ, ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಎಚ್.ಆರ್.ರಘುರಾಮ್, ಸದಸ್ಯರಾದ ಎಚ್.ಎಸ್.ಸ್ವಾಮಿ, ಶ್ರೀಧರ್,ಎ.ಎಸ್.ಪಿ. ವಿನಾಯಕಪಾಟೀಲ್, ತಾಪಂ ಸದಸ್ಯ ಸಿ.ಆರ್.ಮಂಜುನಾಥ್, ತಾಲೂಕು ಕಸಾಪ ಅಧ್ಯಕ್ಷ ಪುಟ್ಟಸ್ವಾಮಪ್ಪ, ಮಾಜಿ ಸದಸ್ಯ ಬಾ.ರಾ.ಸುಬ್ಬರಾಯ, ಮಾದಿಗ ದಂಡೋರ ಸಮಿತಿಯ ಮೈಸೂರು ವಿಭಾಗೀಯ ಹಾಗೂ ಹಾಸನ ಜಿಲ್ಲಾಧ್ಯಕ್ಷ ಟಿ.ಆರ್. ವಿಜಯಕುಮಾರ್, ತಾಲೂಕು ಸಮಿತಿ ಅಧ್ಯಕ್ಷ ಕೆ.ಎಂ.ನಾಗರಾಜು ಇತರರು ಭಾಗವಹಿಸುವರು. ಹೆಚ್ಚಿನ ಮಾಹಿತಿಗಾಗಿ 9964141816 - 8867300200 ಸಂಪರ್ಕಿಸಬಹುದು.
ಸಚಿವ ಆಂಜನೇಯ ವಿರುದ್ಧ ಕ್ರಮಕ್ಕೆ ಆಗ್ರಹ
ಹಾಸನ: ವಿಧಾನಸೌಧ ಕಟ್ಟಡದ ಗೋಡೆ ಒಡೆದಿರುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.
ಕೆಂಗಲ್ ಹನುಮಂತಯ್ಯ ಅವರ ನಿಸ್ವಾರ್ಥ ಸೇವೆಯಿಂದ ನಿರ್ಮಾಣಗೊಂಡ ವಿಧಾನಸೌಧ ಕಟ್ಟಡ, ಭಾರತ ದೇಶದ ಶಾಸನ ಸಭೆಗಳ ಕಟ್ಟಡಗಳಲ್ಲೇ ಮಾದರಿ ಕಟ್ಟಡವಾಗಿದ್ದು, ವಿಶ್ವ ವಿಖ್ಯಾತಿ ಪಡೆದಿದೆ. ಇಂತಹ ಸುಂದರ ಕಟ್ಟಡವನ್ನು ವಿನಾಕಾರಣ ಸ್ವಾರ್ಥಕ್ಕಾಗಿ ವಿರೂಪಗೊಳಿಸಿ, ಇದರ ಭದ್ರತೆಗೆ ಧಕ್ಕೆ ತಂದಿರುವುದು ಖಂಡನೀಯ ಎಂದರು. ಕೋಣೆ ವಿಶಾಲ ಮಾಡುವ ಬದಲು, ಮನಸು ವಿಶಾಲ ಮಾಡಿಕೊಂಡು ಜನಸೇವೆ ಮಾಡಲಿ ಎಂದು ಅವರು ಆಗ್ರಹಿಸಿದರು. ಮುಂದೆ ಇಂತಹ ಘಟನೆಗಳು ಮರುಕಳಿಸುವುದರಲ್ಲಿ ಅನುಮಾನವಿಲ್ಲ. ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಸೂಕ್ತ ಕಾನೂನು ರೂಪಿಸಬೇಕೆಂದು ಪಟೇಲ್ ಶಿವರಾಂ ಒತ್ತಾಯಿಸಿದ್ದಾರೆ.
ಬಸವ ಶಾಂತಿ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ
ಹಾಸನ: ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ವತಿಯಿಂದ 2014ರ ಬಸವಶಾಂತಿ ರಾಜ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ವಿಜಾಪುರ ನಗರದ ಕಂದಗಲ್ ಶ್ರೀ ಹಣಮಂತರಾಯ ರಂಗಮಂದಿರಯಲ್ಲಿ ಫೆ. 10ರಿಂದ 13 ರವರೆಗೆ ನಡೆಯುವ ಶ್ರೀ ಬಸವ ಸಂಸ್ಕೃತಿ ಉತ್ಸವದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಮಂಡಳಿಯ ಹಾಸಿಂಪೀರ ವಾಲಿಕಾರ ತಿಳಿಸಿದ್ದಾರೆ. ಕಲೆ, ಸಾಹಿತ್ಯ, ಸಂಗೀತ, ಭರತನಾಟ್ಯ, ಜಾನಪದ, ಭಾವಗೀತೆ, ನೃತ್ಯ, ಸಂಶೋಧನೆ, ವಿಜ್ಞಾನ, ಶಿಕ್ಷಣ, ಯೋಗಾಸನ, ಕ್ರೀಡೆ, ಹೋರಾಟಗಾರರು, ಮಾನವ ಹಕ್ಕುಗಳ ಚಿಂತಕರು, ಬಸವ ಧರ್ಮದ ಪ್ರಚಾರಕರು, ಸರ್ವಧರ್ಮದ ಚಿಂತಕರು, ದಾನಿಗಳು, ದಾಸೋಹಿಗಳು, ಸಮಾಜ ಸೇವಕರು, ಮಕ್ಕಳ ಮತ್ತು ಮಹಿಳೆಯ ಪರ ಹೋರಾಟಗಾರರು ಅರ್ಜಿ ಸಲ್ಲಿಸಲು ಕೋರಿದ್ದಾರೆ. ಅರ್ಜಿ ಸಲ್ಲಿಸಲು ಜ.31 ಕೊನೆ ದಿನ. ಅರ್ಜಿಯನ್ನು ಹಾಸಿಂಪೀರ ವಾಲಿಕಾರ, ಕನಕದಾಸ ಬಡಾವಣೆ, ಜಿಲ್ಲಾ ಪಂಚಾಯ್ತಿ ರಸ್ತೆ, ವಿಜಾಪುರ- 586101 ಇಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ವಿಜಯಕುಮಾರ ಘಾಟಗೆ ಅವರ ಮೊ. 9343001718, ಹಾಸಿಂಪೀರ ವಾಲಿಕಾರ ಅವರ ಮೊ. 9448035775 ಸಂಪರ್ಕಿಸಬಹುದು.
ಆಮ್ ಆದ್ಮಿ ಸಭೆಯಲ್ಲಿ ಬೆಲೆ ಏರಿಕೆಗೆ ಆಕ್ರೋಶ
ಹಾಸನ: ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಆಮ್ ಆದ್ಮಿ ಪಾರ್ಟಿ ಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸಲಾಯಿತು. ಭ್ರಷ್ಟ ವ್ಯವಸ್ಥೆ, ನೆಲ, ಜಲ, ನೈಸರ್ಗಿಕ ಸಂಪತ್ತು ಲೂಟಿ, ದೇಶದ ಆರ್ಥಿಕ ಭದ್ರತೆಯನ್ನು ದುರ್ಬಲಗೊಳಿಸಿ, ಬಹುಕೋಟಿ ಹಗರಣಗಳು, ಸರ್ಕಾರಿ ಸವಲತ್ತುಗಳ ದುರುಪಯೋಗ, ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ಸತತ ಬೆಲೆ ಏರಿಕೆಯಿಂದ ಜನ ಸಾಮಾನ್ಯರ ತೊಂದರೆ ಸೇರಿದಂತೆ ಹತ್ತು ಹಲವಾರು ಸಮಸ್ಯೆ ಬಗ್ಗೆ ಚರ್ಚಿಸಿದರು. ಬದಲಾವಣೆಯನ್ನು ತರುವ ಗುರಿಯನ್ನು ಆಮ್ ಆದ್ಮಿ ಪಾರ್ಟಿ ಹೊಂದಿದೆ ಎಂದು ಸಭೆಯಲ್ಲಿ ಇದ್ದ ಮುಖಂಡರು ಹೇಳಿದರು. ಸಭೆಯಲ್ಲಿ ಅಕ್ಮಲ್ ಅಹಮದ್, ವೈದ್ಯ ಗುರುರಾಜ್ ಹೆಬ್ಬಾರ್, ವಕೀಲ ಸಂತೋಷ್ ಮಹಾನ್, ಸುರೇಶ್ ಗುರೂಜಿ, ಆರ್.ಪಿ. ವೆಂಕಟೇಶ್ ಮೂರ್ತಿ, ಮಂಜುನಾಥ್ ದತ್ತ, ಹೆತ್ತೂರ್ ನಾಗರಾಜ್ ಇತರರಿದ್ದರು.
ಶಾಲೆ ತೊರೆದು ದುಡಿಯುತ್ತಿದ್ದ ಬಾಲ ಕಾರ್ಮಿಕರ ರಕ್ಷಣೆ
ಹೊಳೆನರಸೀಪುರ: ಓದುವ ಮಕ್ಕಳನ್ನು ಕಟ್ಟಡದ ಕೆಲಸದಲ್ಲಿ ತೊಡಗಿಸಿರುವ ಪ್ರಕರಣವನ್ನು ಪತ್ತೆಹಚ್ಚಿದ ಮಾನವ ಹಕ್ಕುಗಳ ಸಮಿತಿಯ ತಾಲೂಕು ಘಟಕದ ಪದಾಧಿಕಾರಿಗಳು ಮೂವರು ಬಾಲ ಕಾರ್ಮಿಕರನ್ನು ರಕ್ಷಿಸಿ ಕಾರ್ಮಿಕ ಇಲಾಖೆಗೆ ಒಪ್ಪಿಸಿದರು. ಪಟ್ಟಣದ ಪೇಟೆ ಬೀದಿಯಲ್ಲಿ ನವೀಕರಣಗೊಳ್ಳುತ್ತಿದ್ದ ಕಟ್ಟಡವೊಂದರಲ್ಲಿ ಮೂವರು ಬಾಲಕರನ್ನು ಬಳಸಿಕೊಂಡು ಕೆಲಸ ಮಾಡಿಸುತ್ತಿರುವ ಪ್ರಕರಣವನ್ನು ಪತ್ತೆ ಮಾಡಿದ ಮಾನವ ಹಕ್ಕುಗಳ ತಾಲೂಕು ಸಮಿತಿಯ ಅಧ್ಯಕ್ಷ ಜಿ.ಬಿ.ಕುಮಾರ್ ಹಾಗೂ ಉಪಾಧ್ಯಕ್ಷ ಎ.ಎಸ್. ರವಿಕುಮಾರ್ ಅವರು ಮೂವರು ಬಾಲ ಕಾರ್ಮಿಕರನ್ನು ರಕ್ಷಿಸಿದ್ದಾರೆ. ಬಾಲಕರಾದ ಮಹೇಶ (13), ಅಭಿಷೇಕ (15) ಹಾಗೂ ಮೆಣಗನಹಳ್ಳಿಯ ದರ್ಶನ್ (11) ಕಾರ್ಮಿಕ ಇಲಾಖೆಯ ಅಧಿಕಾರಿ ಮಂಗಳಗೌರಿ ತಮ್ಮ ಸುಪರ್ದಿಗೆ ಪಡೆದರು. ಬಾಲ ಕಾರ್ಮಿಕರನ್ನು ಕೆಲಸಕ್ಕೆ ಹಚ್ಚಿದ್ದ ಗುತ್ತಿಗೆದಾರ ಹಾಗೂ ಕಟ್ಟಡದ ಮಾಲೀಕರ ವಿರುದ್ಧ ಕಾನೂನಿನ ಅನ್ವಯ ಶಿಸ್ತುಕ್ರಮ ಜರುಗಿಸಲಿರುವುದಾಗಿ ತಿಳಿಸಿದರು.
ಜಾವಗಲ್ ಶಾಲೆ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ
ಜಾವಗಲ್: ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಹೊಂದುವಂತೆ ತಾಲೂಕು ಪಂಚಾಯ್ತಿ ಸದಸ್ಯೆ ಲಕ್ಷ್ಮೀ ರವಿಶಂಕರ್ ಕರೆ ನೀಡಿದರು. ಜಾವಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ 8ನೇ ತರಗತಿ ವಿದ್ಯಾರ್ಥಿಗಳಿಗೆ ಶುಕ್ರವಾರ ಸೈಕಲ್ ವಿತರಿಸಿ ಮಾತನಾಡಿದ ಅವರು, ಸರ್ಕಾರವು ಶೈಕ್ಷಣಿಕ ಪ್ರಗತಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಯಶಸ್ಸಿಗೆ ಶ್ರಮಿಸಬೇಕೆಂದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಸಕ್ತ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳ ಕೃತಿ ಸಂಪುಟ (ಪ್ರತಿ ವಿದ್ಯಾರ್ಥಿಯ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳ ಸಂಗ್ರಹ.) ಪ್ರಾರಂಭಿಸಿದ್ದು, ಮುಂದಿನ ವರ್ಷದಿಂದ 8 ಹಾಗೂ 9ನೇ ತರಗತಿಗಳ ವಿದ್ಯಾರ್ಥಿಗಳಿಗೂ ಈ ಕಾರ್ಯಕ್ರಮ ವಿಸ್ತರಿಸಲಾಗುವುದು. ಶಿಕ್ಷಕರಾದ ಚಂದ್ರೇಗೌಡ, ಮರುಳಸಿದ್ದಪ್ಪ, ಶಿವಲಿಂಗಮೂರ್ತಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಕವಿತ ಮಂಜುನಾಥ್, ಎಸ್ ಡಿಎಂಸಿ ಅಧ್ಯಕ್ಷ ಜೆ.ವಿ.ರುದ್ರೇಶ್, ಸದಸ್ಯರಾದ ಇಸ್ಮಾಯಿಲ್ ಇದ್ದರು.
ವಸತಿ ಮನೆ ನಿರ್ಮಾಣಕ್ಕೆ ಕಾರ್ಯಾದೇಶ ವಿತರಣೆ
ಹಾಸನ: ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಶಾಂತಿಗ್ರಾಮ ಹಾಗೂ ದುದ್ದ ಹೋಬಳಿ ಗ್ರಾಮಗಳ 530 ಫಲಾನುಭವಿಗಳಿಗೆ ಬಸವ ವಸತಿ ಹಾಗೂ ಇಂದಿರಾ ಆವಾಸ್ ಯೋಜನೆಯಡಿಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಶನಿವಾರ ಮಾಜಿ ಸಚಿವರು ಹಾಗೂ ಹೊಳೆನರಸೀಪುರ ಕ್ಷೇತ್ರದ ಶಾಸಕ ಹೆಚ್.ಡಿ. ರೇವಣ್ಣ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರಗಳನ್ನು ವಿತರಣೆ ಮಾಡಿದರು.
ಸೂಚನೆ: ಈ ಬಾರಿಯ ಅಧಿಕಾರಾವಧಿಯಲ್ಲಿ ಇದುವರೆಗೆ 11 ಸಾವಿರ ಮನೆಗಳ ನಿರ್ಮಾಣದ ಕಾರ್ಯಾದೇಶ ನೀಡಿದಂತಾಗಿದೆ. ಇನ್ನು ಅರ್ಹ ಫಲಾನುಭವಿಗಳಿಗೆ ಇದರ ಪ್ರಯೋಜನವನ್ನು ಒದಗಿಸಲು ಶ್ರಮಿಸಲಾಗುವುದು ಎಂದರು. ಅಧಿಕಾರಿಗಳು ಫಲಾನುಭವಿಗಳಿಗೆ ಸಕಾಲಕ್ಕೆ ಈ ಯೋಜನೆಯಡಿಯಲ್ಲಿ ದೊರೆಯುವ ಸೌಲಭ್ಯಗಳನ್ನು ಕಲ್ಪಿಸುವಂತೆ ಸೂಚಿಸಿದರು.
ಸಮಾರಂಭದಲ್ಲಿ ದುದ್ದ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ಲಕ್ಷ್ಮಣಗೌಡ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶಿವಪ್ಪ ಹಾಗೂ ಇತರ ಅಧಿಕಾರಿಗಳು ಇದ್ದರು.
ಪಲ್ಸ್ ಪೋಲಿಯೊ ಅರಿವು ಮೂಡಿಸಲು ಜಾಥಾ
ಅರಸೀಕೆರೆ: ಭಾನುವಾರ ದೇಶಾದ್ಯಂತ ಪಲ್ಸ್ ಪೊಲಿಯೋ ನೀಡುವ ಉದ್ದೇಶ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಿತ್ತಿಪತ್ರ ಹಾಗೂ ಬ್ಯಾನರ್ ಹಿಡಿದು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಥಾ ನಡೆಸಿ ಗಮನ ಸೆಳೆದರು. ಜಾಥಾದಲ್ಲಿ ಪಾಲ್ಗೊಂಡಿದ್ದ ರೆಡ್ಕ್ರಾಸ್ ಅಧ್ಯಕ್ಷ ಫಿಸಿಯೋ ಮಧು ಹಾಗೂ ರೋಟರಿ ಮಾಜಿ ಅಧ್ಯಕ್ಷ ಯೋಗೀಶಚಾರ್ ಮಾತನಾಡಿ, ಪೊಲಿಯೋ ಮುಕ್ತ ಭಾರತದ ಕನಸು ನಮ್ಮೆಲ್ಲರ ಆಶಯವಾಗಿದೆ. ಆದ್ದರಿಂದ, ಭಾನುವಾರ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪಲ್ಸ್ ಪೊಲಿಯೋ ಲಸಿಕೆ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬಸ್ ನಿಲ್ದಾಣ, ಆಸ್ಪತ್ರೆ, ರೇಲ್ವೆ ನಿಲ್ದಾಣ ಸೇರಿದಂತೆ ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ ಪೋಷಕರು ಮಕ್ಕಳಿಗೆ ಲಸಿಕೆ ಹಾಕಿಸಬಹುದಾಗಿದೆ ಎಂದರು. ಮೆರವಣಿಗೆಯಲ್ಲಿ ಬಸವರಾಜೇಂದ್ರ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ನರ್ಸಿಂಗ್ ಪ್ರಶಿಕ್ಷಣಾರ್ಥಿಗಳು ಇದ್ದರು.
ಇಂದು ಜಿಜಿವಿಎಸ್ ಸಮ್ಮೇಳನ
ಹಾಸನ: ಜಿಲ್ಲೆಯ ಜಲಸಂಪನ್ಮೂಲ ರಕ್ಷಿಸಲು, ಆನೆ ಮತ್ತಿತರ ಕಾಡಪ್ರಾಣಿಗಳಿಗೆ ಸೂಕ್ತ ಆಹಾರ ಸೌಲಭ್ಯ ಒದಗಿಸಿ, ಜನರ ಹಿತ ಕಾಯಲು, ಹಾಸನ ನಗರ ಮತ್ತು ಎಲ್ಲ ತಾಲೂಕು ಕೇಂದ್ರಗಳಲ್ಲೂ ಸುಸಜ್ಜಿತ ವಿಜ್ಞಾನ ಕಾಲೇಜುಗಳನ್ನು ತೆರೆಯಲು ಒತ್ತಾಯಿಸಿ, ಜ.19ರಂದು 5ನೇ ಹಾಸನ ಜಿಲ್ಲಾ ಬಿಜಿವಿಎಸ್ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಬಿಜಿವಿಎಸ್ ಕಾರ್ಯದರ್ಶಿ ಎಚ್.ಎ. ಅಹಮ್ಮದ್ ತಿಳಿಸಿದ್ದಾರೆ.
ರೈನಾ ಸಭಾಂಗಣದಲ್ಲಿ: ಜ.19ರಂದು ಬೆಳಗ್ಗೆ 10ಕ್ಕೆ ನಗರದ ಹೊಸಲೈನ್ ರಸ್ತೆ, ಉತ್ತರ ಬಡಾವಣೆಯಲ್ಲಿರುವ ಎಸ್.ಜಿ.ಆರ್. ಶಾಲಾ ಆವರಣದಲ್ಲಿರುವ ಶಿಕ್ಷಣ ಹಕ್ಕು ಹರಿಕಾರ ಡಾ. ವಿನೋದ್ ರೈನಾ ಸಭಾಂಗಣ, ರಾಷ್ಟ್ರಕವಿ ಡಾ.ಜಿ.ಎಸ್.ಎಸ್. ವೇದಿಕೆಯಲ್ಲಿ ಸಮ್ಮೇಳನ ನಡೆಯಲಿದೆ ಎಂದು ತಿಳಿಸಿದ್ದಾರೆ.
ಪ್ರಸ್ತಾವನೆ: ಸಮ್ಮೇಳನವನ್ನು ರಾಜ್ಯ ಬಿಜಿವಿಎಸ್ ಕಾರ್ಯದರ್ಶಿ ಎಸ್. ವಜ್ರಮುನಿ ಉದ್ಘಾಟಿಸುವರು. ಸಮ್ಮೇಳನದ ಅಧ್ಯಕ್ಷತೆಯನ್ನು ಬಿಜಿವಿಎಸ್ ಜಿಲ್ಲಾಧ್ಯಕ್ಷ ಡಿ. ಅಂತೋಣಿಸ್ವಾಮಿ ವಹಿಸಿಕೊಳ್ಳಲಿದ್ದಾರೆ. ಕಾರ್ಯದರ್ಶಿ ಅಹಮದ್ ಪ್ರಸ್ತಾವನೆ ಸಲ್ಲಿಸಲಿದ್ದಾರೆ. ರಾಜ್ಯ ಪ್ರತಿನಿಧಿ ಪ್ರಮೀಳ ನಿರೀಕ್ಷಕಿಯಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
' ಹಾಸನ ಲೋಕಸಭೆ ಕ್ಷೇತ್ರದಲ್ಲಿಬಿಜೆಪಿ ಗೆಲವು ಖಚಿತ'
ಬೇಲೂರು: ಬಹುತೇಕ ನವ ಮತದಾರರು ಸೇರಿದಂತೆ ದೇಶದ ಯುವ ಜನಾಂಗ ನರೇಂದ್ರಮೋದಿಯವರ ನಾಯಕತ್ವಕ್ಕೆ ಬೆಂಬಲ ನೀಡುವ ಹಿನ್ನೆಲೆಯಲ್ಲಿ ಹಾಸನ ಲೋಕಸಭೆ ಬಿಜೆಪಿಗೆ ಒಲಿಯುತ್ತದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರೇಣುಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಬಿಎಲ್ಎ 2 ಕಾರ್ಯಕರ್ತರ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಬಿಎಲ್ಎ 2 ಚುನಾವಣೆ ಆಯೋಗ ರಾಷ್ಟ್ರೀಯ ಪಕ್ಷಗಳಿಗೆ ಶಾಸನ ಬದ್ಧವಾಗಿ ನೀಡುವ ಈ ಹುದ್ದೆಯನ್ನು ಕಾರ್ಯಕರ್ತರು ಸದುಪಯೋಗ ಮಾಡಿಕೊಂಡು, ನವ ಮತದಾರರನ್ನು ಸೇರ್ಪಡಿಸಿಬೇಕು ಎಂದರು.
ಕಬ್ಬಿಣ ನೀಡಿ: ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜಾವಗಲ್ ಚಂದ್ರಶೇಖರ್ ಮಾತನಾಡಿ, ಬಿಎಲ್ಎ 2, 'ಮನೆ- ಮನೆಗೆ ಬಿಜೆಪಿ'... ಕಾರ್ಯಕ್ರಮಗಳ ಜೊತೆಯಲ್ಲಿ ಪ್ರತಿ ಗ್ರಾಪಂನಿಂದ ರೈತರು ಉಪಯೋಗಿಸಿ ಬಿಟ್ಟ ಕಬ್ಬಿಣವನ್ನು ಗುಜರಾತ್ ರಾಜ್ಯಕ್ಕೆ ಕಳಿಸಬೇಕು ಎಂದು ನವಿಲೆ ಕೃಷ್ಣಪ್ಪ ಮನವಿ ಮಾಡಿದರು.
21ರಂದು ರಾಷ್ಟ್ರೀಯ ವಿಚಾರ ಸಂಕಿರಣ
ಬೇಲೂರು: ವಲಸೆ ಕನ್ನಡಿಗರು ಎಂಬ ವಿಷಯಾಧಾರಿತ ಯುಜಿಸಿ ಪ್ರಾಯೋಜಿತ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಬೇಲೂರಿನ ವೈಡಿಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜ. 21ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಜಯಣ್ಣಗೌಡ ತಿಳಿಸಿದ್ದಾರೆ.
ವಲಸೆ ಕನ್ನಡಿಗರ ಭಾಷಿಕ ಬಿಕ್ಕಟ್ಟುಗಳು, ಅನ್ಯ ಸಂಸ್ಕೃತಿಯೊಂದಿಗೆ ವಲಸೆ ಕನ್ನಡಗರ ಹೊಸಹುಟ್ಟು, ವಲಸೆ ಕನ್ನಡಿಗರ ಹೊಸ ಕನಸುಗಳು, ವಲಸೆ ಕನ್ನಡಿಗರ ಆರ್ಥಿಕ ಸಮಸ್ಯೆಗಳು, ಸ್ಥಳೀಯ ಸಂದರ್ಭಗಳು ಮತ್ತು ವಲಸೆ ಕನ್ನಡಿಗರು, ವಲಸೆ ಕನ್ನಡಿಗರ ರಾಜಕೀಯ ಬಿಕ್ಕಟ್ಟು, ಕನ್ನಡಿಗರ ವಲಸೆಗೆ ಕಾರಣ ಅಂಶಗಳು, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ವಲಸೆ ಕನ್ನಡಿಗರ ಕೊಡುಗೆ ಈ ವಿಚಾರಗಳು ಕಮ್ಮಟದಲ್ಲಿ ಚರ್ಚೆಯಾಗುತ್ತವೆ ಎಂದರು. ಕನ್ನಡ ಭಾಷೆಯ ಪ್ರಾಚೀನತೆ ಸುಮಾರು 2 ಸಾವಿರ ವರ್ಷಗಳಿಂತ ಹಿಂದಿನದು. ಕನ್ನಡ ಭಾಷೆಯ ಬಳಕೆ ಸುಮಾರಾಗಿ 1ನೇ ಶತಮಾನಕ್ಕಿಂತಲೂ ಆರಂಭಗೊಂಡಿದೆ ಎಂದರು.
ವೈಡಿಡಿ ಪ್ರಥಮ ದರ್ಜೆ ಕಾಲೇಜು ಪ್ರಾಶುಂಪಾಲ ಪ್ರೊ.ಡಿ.ಎಸ್. ರಾಜು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಮತದಾನದ ಮಹತ್ವದ ಬಗ್ಗೆ ಚರ್ಚಾಸ್ಪರ್ಧೆ
ಹಾಸನ: ಮತದಾನ ನಮಗೆ ಸಂವಿಧಾನ ಬದ್ಧವಾಗಿ ನೀಡಿರುವ ಪ್ರಬಲವಾದ ಹಕ್ಕು. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಯಾಗಿಸಲು ಮತ್ತು ಆ ಮೂಲಕ ದೇಶವನ್ನು ಇನ್ನಷ್ಟು ಪ್ರತಿಯ ಹಾದಿಯಲ್ಲಿ ಸಾಗಲು ಅನುಕೂಲಕಾರಿ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ಅಧ್ಯಕ್ಷ ಉಪೇಂದ್ರ ಪ್ರತಾಪ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಜ. 25ರಂದು ನಡೆಯುವ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿಯು ಕೆನರಾ ಬ್ಯಾಂಕ್ ಉದ್ಯೋಗ ತರಬೇತಿ ಸಂಸ್ಥೆಯ ಸಹಕಾರದೊಂದಿಗೆ ಕಾಪ್ಸೆಟ್ ಸಭಾಂಗಣದಲ್ಲಿ ಲಿಂಗ ಅಲ್ಪಸಂಖ್ಯಾತರಿಗಾಗಿ ಏರ್ಪಡಿಸಿದ್ದ ಮತದಾನದ ಮಹತ್ವ ಕುರಿತು ಆಯೋಜಿಸಲಾಗಿದ್ದ ಚರ್ಚಾಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇದೇ ವೇಳೆ ಲಿಂಗ ಅಲ್ಪಸಂಖ್ಯಾತರು ಮತದಾನದ ಮಹತ್ವದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಿಪಡಿಸಿದರು. ಜತೆಗೆ ತಮಗೆ ಎದುರಾಗುತ್ತಿರುವ ಕೆಲವು ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಉಪ ವಿಭಾಗಾಧಿಕಾರಿ ಶರತ್ ಇದ್ದರು.
ಕೇಂದ್ರ, ರಾಜ್ಯದಿಂದ ಯೋಜನೆಗಳು ಜಾರಿ
ಹಾಸನ: ಕೇಂದ್ರ ಸರ್ಕಾರ ಮಹತ್ತರವಾದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇತ್ತೀಚೆಗೆ ರಾಜ್ಯ ಸರ್ಕಾರವೂ ಕೂಡ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್ ತಿಳಿಸಿದರು. ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಾ ಹಾಗೂ ಸರ್ಕಾರದ ಸವಲತ್ತುಗಳನ್ನು ಸಾರ್ವಜನಿಕರಿಗೆ ತಿಳಿಯಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಾಗುವುದು. ಅಲ್ಲದೇ, ಕಾಂಗ್ರೆಸ್ ್ಬಲಪಡಿಸುವತ್ತ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಹಗಲಿರುಳು ಶ್ರಮಿಸುವುದಾಗಿ ತಿಳಿಸಿದರು. ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಲು ಮತ ನೀಡಿದ ಎಲ್ಲ ಬೂತ್ ಪದಾಧಿಕಾರಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.
'ಮನೆ ಕಳೆದುಕೊಂಡವರಿಗೆ ಸೂರು ಸೌಲಭ್ಯ ಕಲ್ಪಿಸಿ'
ಹಾಸನ: ಬೇಲೂರು ತಾಲೂಕು ಹಳೇಬೀಡು ಹೋಬಳಿ ನಂಜಾಪುರ ಗ್ರಾಮದಲ್ಲಿ ಬೆಂಕಿ ಅವಘಡದಲ್ಲಿ ಬೆಂಕಿ ಆಹುತಿಯಿಂದ ಮನೆಗಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಮೂಲಭೂತ ಸೌಲಭ್ಯ ಮತ್ತು ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಮಾದಿಗ ದಂಡೋರ ಆಗ್ರಹಿಸಿದೆ. ಗ್ರಾಮಕ್ಕೆ ಜಿಲ್ಲಾಡಳಿತ ಭೇಟಿ ನೀಡಿ, ಮೂಲಭೂತ ಅವಶ್ಯಕತೆಗಳನ್ನು ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಗಂಜಿಕೇಂದ್ರ ತೆರೆದಿರುವುದನ್ನು ಬಿಟ್ಟರೆ, ಯಾವ ಸೌಲಭ್ಯಗಳನ್ನೂ ಒದಗಿಸಿಕೊಟ್ಟಿಲ್ಲ ಎಂದು ದಂಡೋರದ ಜಿಲ್ಲಾಧ್ಯಕ್ಷ ಟಿ.ಆರ್. ವಿಜಯಕುಮಾರ್ ದೂರಿದ್ದಾರೆ. ಮನವಿ: ಜಿಲ್ಲಾಡಳಿತ ವಸತಿಗಳನ್ನು ನೀವೇ ನಿರ್ಮಿಸಿಕೊಳ್ಳಬೇಕೆಂದು ಹೇಳಿರುವುದು ಆ ಕುಟುಂಬಗಳು ಆಘಾತಕ್ಕೆ ಒಳಗಾಗಿವೆ. ಎಲ್ಲವನ್ನೂ ಕಳೆದುಕೊಂಡಿರುವ ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಳ್ಳಲು ಅಸಾಧ್ಯವಾಗಿದೆ. ಆದ್ದರಿಂದ, ಸರ್ಕಾರವೇ ಮನೆಗಳನ್ನು ನಿರ್ಮಿಸಲು ಸಂಬಂಧಿಸಿದವರಿಗೆ ಆದೇಶಿಸಬೇಕೆಂದು ಮನವಿ ಮಾಡಿದ್ದಾರೆ.