ಮಲ್ಲಿಕಾರ್ಜುನ ಬಂಡೆಗೆ ಶ್ರದ್ಧಾಂಜಲಿ ಸಭೆ
ಅರಸೀಕೆರೆ: ದಿಟ್ಟ ಧೀರ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಅವರ ಮರಣದಿಂದ ರಾಜ್ಯ ಪೊಲೀಸ್ ಇಲಾಖೆಯ ಮಣಿ ಮಕುಟದ ಅನರ್ಘ್ಯ ರತ್ನವೊಂದು ಕಳಚಿ ಬಿದ್ದಂತಾಗಿದೆ ಎಂದು ವಕೀಲ ಹಾಗೂ ಜಿಲ್ಲಾ ಬಿ.ಜೆ.ಪಿ. ವಕ್ತಾರ ಎನ್.ಡಿ. ಪ್ರಸಾದ್ ವಿಷಾದಿಸಿದರು.
ವಿಶಿಷ್ಟ ಸ್ಥಾನಮಾನ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕುಖ್ಯಾತ ರೌಡಿ ಮುನ್ನಾ ಎನ್ಕೌಂಟರ್ನಲ್ಲಿ ಬಂದೂಕಿನ ಗುಂಡೇಟಿಗೆ ಬಲಿಯಾದ ಪಿ.ಎಸ್.ಐ. ಮಲ್ಲಿಕಾರ್ಜುನ ಬಂಡೆ ನೆನಪಿನಲ್ಲಿ ಭಗತ್ ಸೇನೆ ಶುಕ್ರವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಬಂಡೆ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಅವರು, ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇಂತಹ ಅನೇಕ ಖಡಕ್ ಅಧಿಕಾರಿಗಳು ಇರುವುದರಿಂದಲೇ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ಪೊಲೀಸ್ಗೆ ವಿಶಿಷ್ಟ ಸ್ಥಾನಮಾನ ಸಿಗಲು ಸಾಧ್ಯವಾಗಿದೆ ಎಂದರು.
ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ಅಯ್ಯನಗೌಡ, ಭಗತ್ ಸೇನೆ ಮುಖಂಡ ಅಜಿತ್ ಸೀತಾರಾಂ, ವಿಶ್ವ ಹಿಂದೂ ಪರಿಷತ್ ಮುಖಂಡರಾದ ಅರುಣ್ ಕುಮಾರ್, ಕಟ್ಟೆಹಳ್ಳಿ ನವೀನ್, ಮಣಿ, ಮಲ್ಲೇಶ್, ಮಣಿಕಂಠ, ಕರವೇ ಅಧ್ಯಕ್ಷ ಹೇಮಂತ್ ಕುಮಾರ್, ನಮೋ ಬ್ರಿಗೇಡ್ ಮುಖ್ಯಸ್ಥರಾದ ಶಿವರಾಜಕುಮಾರ್, ಚೇತನ್ ಮೆಹ್ತಾ, ಪ್ರಜ್ವಲ್ ಕಶ್ಯಪ್, ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ಮನೋಜ್ ಹಾಗೂ ಇತರರು ಶ್ರದ್ಧಾಂಜಲಿ ಸಭೆಯಲ್ಲಿ ಇದ್ದರು.
ಕಾರು ಮಗುಚಿ ಇಬ್ಬರು ಸಾವು, ಒಬ್ಬನಿಗೆ ಗಾಯ
ಅರಸೀಕೆರೆ: ಅತಿ ವೇಗದಿಂದ ಬರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದ ಪರಿಣಾಮ ಸ್ಥಳದಲ್ಲೇ ಒಬ್ಬ ವ್ಯಕ್ತಿ ಮೃತಪಟ್ಟರೆ ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮತ್ತೋರ್ವ ತೀವ್ರವಾಗಿ ಗಾಯಗೊಂಡಿದ್ದು ಆತನನ್ನು ಪ್ರಥಮ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿರುವ ಘಟನೆ ತಾಲೂಕಿನ ಬೆಳಗುಂಬ ಗೇಟ್ ಬಳಿ ಶನಿವಾರ ಬೆಳಗ್ಗೆ ಸಂಭವಿಸಿದೆ. ಬೆಂಗಳೂರಿನ ಮೈಸೂರು ರಸ್ತೆ ಹೊಸಗುಡ್ಡದಹಳ್ಳಿ ನಿವಾಸಿ ಚಂದ್ರಶೇಖರ್ ಸ್ಥಳದಲ್ಲೇ ಮರಣ ಹೊಂದಿದರೆ, ಬಸವೇಶ್ವರ ನಗರದ ನಿವಾಸಿ ಪ್ರದೀಪ್ ಆಸ್ಪತ್ರೆಯಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಪ್ರವೀಣ್ ತೀವ್ರವಾಗಿ ಗಾಯಗೊಂಡಿದ್ದು ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಇವರು ಬೆಂಗಳೂರಿನಿಂದ ಕೆಮ್ಮಣ್ಣುಗುಂಡಿಗೆ ತನ್ನ ಸ್ನೇಹಿತರಾದ ರಘು, ಅಶೋಕ್, ಚಂದ್ರಶೇಖರ್, ದಾನ, ಚಾಲಕ ಸುನಿಲ್ ಸ್ನೇಹಿತರೊಂದಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ತಾಲ್ಲೂಕಿನ ಬೆಳಗುಂಬ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಒಪೆರಾ ಕಾರ್ ಉರುಳಿಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಸುದ್ಧಿ ತಿಳಿದ ತಕ್ಷಣ ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಗಂಗಾಧರಯ್ಯ, ಸಬ್ ಇನ್ಸ್ಪೆಕ್ಟರ್ ಸುನಿಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.
ಉಪನ್ಯಾಸಕರ ಸಮಸ್ಯೆ: 27ರಂದು ಧರಣಿ
ಚನ್ನರಾಯಪಟ್ಟಣ: ಅತಿಥಿ ಉಪನ್ಯಾಸಕರ ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಜ. 27ರಂದು ಮುಖ್ಯ ಮಂತ್ರಿ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಿ. ರಾಜಶೇಖರ ಮೂರ್ತಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 350 ಪ್ರಥಮ ದರ್ಜೆ ಕಾಲೇಜುಗಳಲ್ಲಿ 10650 ಮಂದಿ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಅವರುಗಳಿಗೆ ಅನುಕೂಲ ಕಲ್ಪಿಸಲು ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ಅವರಿಗೆ ಆದ್ಯತೆ ನೀಡುವಂತೆ ಒತ್ತಾಯಿಸಿ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.
ಗೌರವಧನ ಹೆಚ್ಚಿಸಿ: ರಾಜ್ಯದಲ್ಲಿ ಅತಿಥಿ ಉಪನ್ಯಾಸಕರುಗಳಿಗೆ ನೀಡುತ್ತಿರುವ 8 ಸಾವಿರ ರು. ಗೌರವ ಧನವನ್ನು ಹೆಚ್ಚಳ ಮಾಡಿ ಕೇರಳ ಹಾಗೂ ತಮಿಳುನಾಡಿನಲ್ಲಿ ನೀಡುತ್ತಿರುವ 25ಸಾವಿರ ನೀಡಬೇಕೆಂದು ಆಗ್ರಹಿಸಿದರು. ಜಿಲ್ಲಾಧ್ಯಕ್ಷ ಶಾವಿಲ್ ಹಮಿದ್, ಖಜಾಂಜಿ ವಾಸು, ವಸಂತಕುಮಾರ್, ರಾಘವೇಂದ್ರ ಇದ್ದರು.
ಇಂದು ಪಲ್ಸ್ ಪೋಲಿಯೊ ಕಾರ್ಯಕ್ರಮ
ಹಾಸನ: ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಸನಾಂಬ ವೈದ್ಯಕೀಯ ಮಹಾವಿದ್ಯಾಲಯ, ಶ್ರೀಚಾಮರಾಜೇಂದ್ರ ಆಸ್ಪತ್ರೆ ಹಾಗೂ ನಗರಸಭೆ ಆಶ್ರಯದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವನ್ನು ನಗರದ ಸಿದ್ದಯ್ಯನಗರದ ಅಂಗನವಾಡಿ ಕೇಂದ್ರದಲ್ಲಿ ಜ. 19ರಂದು ಬೆಳಗ್ಗೆ 8ಕ್ಕೆ ಹಮ್ಮಿಕೊಳ್ಳಲಾಗಿದೆ. ಶಾಸಕ ಎಚ್.ಎಸ್. ಪ್ರಕಾಶ್ ಉದ್ಘಾಟಿಸುವರು. ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಅಧ್ಯಕ್ಷತೆ ವಹಿಸುವರು. ಎಂಎಲ್ಸಿ ಪಟೇಲ್ ಶಿವರಾಂ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾ ರಾಮಣ್ಣ, ಜಿಲ್ಲಾಧಿಕಾರಿ ಅನ್ಬುಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್, ಜಿಪಂ ಸಿಇಓ ಉಪೇಂದ್ರ ಪ್ರತಾಪ್ ಸಿಂಗ್, ತಹಸೀಲ್ದಾರ್ ಮಂಜುನಾಥ್ ಇತರರು ಭಾಗವಹಿಸಲಿದ್ದಾರೆ.
ಮಕ್ಕಳಿಗೆ ಶಾಸಕರಿಂದ ಸೈಕಲ್ ವಿತರಣೆ
ಹಾಸನ: ನಗರದ ಚಿಪ್ಪಿನ ಕಟ್ಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶನಿವಾರ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಶಾಸಕ ಎಚ್.ಎಸ್. ಪ್ರಕಾಶ್ ಉಚಿತ ಸೈಕಲ್ ವಿತರಿಸಿದರು.
8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ 63 ಮತ್ತು ವಿದ್ಯಾರ್ಥಿಗಳಿಗೆ 56 ಸೇರಿದಂತೆ ಒಟ್ಟು 119 ಸೈಕಲ್ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಕ್ಷೇತ್ರ ಶಿಕ್ಷಣಾಧಿಕಾರಿ ರವಿಕುಮಾರ್, ಉಪನ್ಯಾಸಕರಾದ ರಮೇಶ್ ಇತರರು ಇದ್ದರು. ಸ್ವಾಗತವನ್ನು ಶಾಲೆಯ ಮುಖ್ಯ ಶಿಕ್ಷಕ ತಿಮ್ಮೇಗೌಡ ನಡೆಸಿಕೊಟ್ಟರು.
ಸೌಹಾರ್ದ ಕೂಟ
ಹಾಸನ: ಬ್ರಾಹ್ಮಣಸಭಾ ವತಿಯಿಂದ ವಿಪ್ರಸ್ನೇಹ ಸೌಹಾರ್ದ ಕೂಟವನ್ನು ಜ.19ರಂದು ಬೆಳಗ್ಗೆ 10ಕ್ಕೆ ನಗರದ ಶೃಂಗೇರಿ ಶಂಕರಮಠದಲ್ಲಿ ಆಯೋಜಿಸಲಾಗಿದೆ. ತರಬೇತುದಾರ ಚೇತನ್ ರಾವ್ ಉದ್ಘಾಟಿಸುವರು. ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷ ಸಿ.ಎ. ಕೃಷ್ಣಸ್ವಾಮಿ ಅಧ್ಯಕ್ಷತೆ ವಹಿಸುವರು. ಕಿರುತೆರೆ ಕಲಾವಿದೆ ಮಾಳವಿಕ, ಶೃಂಗೇರಿ ಶ್ರೀ ಶಂಕರಮಠದ ಧರ್ಮಾಧಿಕಾರಿ ಎಂ.ಎ.ಶ್ರೀಕಂಠಯ್ಯ ಭಾಗವಹಿಸುವರು.
ಇಂದು ಬಾಯಿಫುಲೆ ಜನ್ಮದಿನಾಚರಣೆ
ಹಾಸನ: ದಲಿತ ಸಾಹಿತ್ಯ ಪರಿಷ, ಸಮತಾ ಸೈನಿಕ ದಳ, ನಾಗಭೂಮಿ ವಿವಿಧೋದ್ದೇಶ ಅಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಮಾತೆ ಸಾವಿತ್ರಿ ಬಾಯಿ ಫುಲೆಯವರ ಜನ್ಮದಿನಾಚರಣೆ ಮತ್ತು ವಿಚಾರ ಸಂಕಿರಣವನ್ನು ಜ.19ರಂದು ಬೆಳಗ್ಗೆ 10.30ಕ್ಕೆ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ದಸಂಸ ಇಂದಿರಾ ಕೃಷ್ಣಪ್ಪ ಉದ್ಘಾಟಿಸುವರು. ದಸಾಪ ಅಧ್ಯಕ್ಷ ಹೆತ್ತೂರು ನಾಗರಾಜ್ ಅಧ್ಯಕ್ಷತೆ ವಹಿಸುವರು. ಪತ್ರಕರ್ತೆ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡುವರು. ಸಾಹಿತಿ ಸಮತಾ ದೇಶಮಾನೆ ಉಪನ್ಯಾಸ ನೀಡುವರು. ಒಡನಾಡಿ ಸಂಸ್ಥೆಯ ಪರಶುರಾವ್, ಎಎಸ್ಪಿ ಜೆ.ಕೆ. ರಶ್ಮಿ, ಸಾಹಿತಿ ಬಾನುಮುಷ್ತಾಕ್ ಇತರರು ಭಾಗವಹಿಸುವರು.
ಸ್ಕೌಟ್ಸ್ನಿಂದ ರಕ್ತದಾನ ಶಿಬಿರ
ಹಾಸನ: ನಗರದ ಸರ್ಕಾರಿ ಆಸ್ಪತ್ರೆ ಬಳಿ ಇರುವ ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಶನಿವಾರ ಬೆಳಗ್ಗೆ ರಕ್ತದಾನ ಶಿಬಿರ ನಡೆಯಿತು. ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್, ಎಮ್.ಟಿ.ಎಸ್.ಎಸ್. ಯೂತ್ ಗ್ರೂಪ್ಸ್ ಇವರ ಸಂಯುಕ್ತಾಶ್ರಾಯದಲ್ಲಿ ನಡೆದಿದ್ದ ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಸಿ.ಎಸ್. ಶಿವಸ್ವಾಮಿ, ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ನ ಮುಖ್ಯ ಆಯುಕ್ತ ವೈ.ಎಸ್. ಶಿವರುದ್ರಪ್ಪ, ಜಿಲ್ಲಾ ಕಾರ್ಯದರ್ಶಿ ಮುತ್ತೇಗೌಡ, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಮ್. ಶಿವಣ್ಣ, ಆಯುಕ್ತ ಪ್ರಕಾಶ್ ಎಸ್. ಯಾಜೇ, ಜಿಲ್ಲಾ ಸಂಘಟಕ ಎಸ್.ಪಿ. ದೇವರಾಜ್, ಗಿರೀಶ್ ಇತರರು ಪಾಲ್ಗೊಂಡಿದ್ದರು.
ಗಣೇಶ್ ಆಯ್ಕೆ
ಅರಕಲಗೂಡು: ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಬಾಣದಹಳ್ಳಿ ಗಣೇಶ್ ಆಯ್ಕೆಯಾಗಿದ್ದಾರೆ.ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗಣೇಶ್ ಬಹುಮತ ಪಡೆದು ಚುನಾಯಿತರಾದರು.