ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಏತ ನೀರಾವರಿ ಮುಖೇನ ಕುಡಿವ ನೀರು ಕಲ್ಪಿಸಿ

Vishwanath S
Updated On : 20 Jan 2014, 12:14 pm

ಚನ್ನರಾಯಪಟ್ಟಣ: ತಾಲೂಕಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಪ್ರಾರಂಭವಾಗಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಜುಟ್ಟನಹಳ್ಳಿ, ಹಿರೀಸಾವೆ ಹಾಗೂ ಕಾಚೇನಹಳ್ಳಿ ಏತ ನೀರಾವರಿ ಮುಖೇನ ಜನತೆಗೆ ಕುಡಿಯುವ ನೀರು ನೀಡಬೇಕೆಂದು ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಸರ್ಕಾರಕ್ಕೆ ಆಗ್ರಹಿಸಿದರು.
  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಕಾಚೇನಹಳ್ಳಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿ 20 ವರ್ಷ ಕಳೆದರೂ ರಾಜಕೀಯ ವೈಷಮ್ಯದಿಂದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಹಿರೀಸಾವೆ ಹಾಗೂ ಜುಟ್ಟನಹಳ್ಳಿ ಏತ ನೀರಾವರಿ ಕಾಮಗಾರಿಗೆ ತಾಂತ್ರಿಕ ಒಪ್ಪಿಗೆ ಸಿಕ್ಕಿದ್ದರೂ ಕಾಮಗಾರಿ ಪ್ರಾರಂಭವಾಗಿಲ್ಲದ ಕಾರಣ ಜನತೆ ಕುಡಿಯಲು ನೀರಿಲ್ಲದೆ ಹಾಹಾಕಾರದಿಂದ ಜೀವನ ಸಾಗಿಸಬೇಕಾಗಿದೆ ಎಂದು ತಿಳಿಸಿದರು.
 ಸರ್ಕಾರ ನದಿಯಿಂದ ಕುಡಿಯುವ ನೀರು ನೀಡಲು ಮುಂದಾಗದಿದ್ದರೆ ಕೃಷಿ ಪಂಪ್‌ಸೆಟ್‌ಗಳಿರಲಿ, ಕುಡಿಯುವ ನೀರಿಗಾಗಿ ಕೊರೆಸಿರುವ ಬೋರ್‌ವೆಲ್‌ಗಳಲ್ಲಿ ನೀರಿಲ್ಲದೆ ನೀರಿಗಾಗಿ ಜನತೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
 ನುಗ್ಗೇಹಳ್ಳಿ ಏತ ನೀರಾವರಿ ಕಾಮಗಾರಿ ನಡೆಯುತ್ತಿದ್ದು, ಅದರಂತೆ ಬಾಗೂರು ನವಿಲೆ ಏತ ನೀರಾವರಿ ಯೋಜನೆಯಡಿಯಲ್ಲಿ ನೀರೆತ್ತುವ ಕಾರ್ಯ ನಡೆಯುತ್ತಿದ್ದರೂ ಸಮರ್ಪಕವಾಗಿ ನೀರು ನೀಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ನೀರಾವರಿ ಸಚಿವರ ಜತೆ ಚರ್ಚಿಸಲಾಗಿದೆ ಎಂದು ಸಿ.ಎಸ್. ಪುಟ್ಟೇಗೌಡ ಹೇಳಿದರು.
 ನೆನೆಗುದಿಗೆ ಬಿದ್ದಿರುವ ಹಿರೀಸಾವೆ ಹಾಗೂ ಜುಟ್ಟನಹಳ್ಳಿ ಏತ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿ ಆ ಭಾಗದ ಜನತೆ ಜತೆ ತೆರಳಿ ನೀರಾವರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಇದರ ಜತೆಗೆ ಸ್ಥಳ ಪರಿಶೀಲನೆಗಾಗಿ ಸಚಿವರು ಭೇಟಿ ನೀಡಬೇಕೆಂದು ಒತ್ತಾಯಿಸಲಾಗಿದೆ ಎಂದರು.
ಪ್ರತ್ಯೇಕ ಖಾತೆ ಅಗತ್ಯ: ಕುಡಿಯುವ ನೀರಿಗಾಗಿ ರಾಜ್ಯದ ಕೆಲವೆಡೆಗಳಲ್ಲಿ ಹಾಹಾಕಾರ ಉಂಟಾಗಿರುವ ಹಿನ್ನಲೆಯಲ್ಲಿ ಅದನ್ನು ಬಗೆಹರಿಸಲು ಗ್ರಾಮೀಣಾಭಿವೃದ್ಧಿ ಅಥವಾ ನೀರಾವರಿ ಇಲಾಖೆಯಾಗಲೀ ಬಗೆಹರಿಸಲು ಸಾಧ್ಯವಾಗದ ಕಾರಣ ಕುಡಿಯುವ ನೀರಿಗಾಗಿ ಪ್ರತ್ಯೇಕ ಖಾತೆ ಸೃಷ್ಟಿಸಬೇಕೆಂದು ಒತ್ತಾಯಿಸಿದರು.
 ಶುದ್ಧ ಕುಡಿಯುವ ನೀರು ಸಮಸ್ಯೆ ಬಗೆಹರಿಯುವ ಹಿನ್ನಲೆಯಲ್ಲಿ ಈ ಬಗ್ಗೆ ಪ್ರತ್ಯೇಕ ಖಾತೆಯನ್ನು ರಚಿಸಿದರೆ, ತಂತ್ರಜ್ಞರುಅಧ್ಯಯನ ನಡೆಸಿ ಹಲವು ಯೋಜನೆಗಳನ್ನು ಜಾರಿಗೆ ತಂದು ಜನತೆಗೆ ಕುಡಿಯುವ ನೀರು ನೀಡಲು ಅನುಕೂಲಕರವಾಗುತ್ತದೆ ಎಂದು ತಿಳಿಸಿದರು.
ವಸತಿ ಕಲ್ಪಿಸಲು ತಾರತಮ್ಯ: ತಾಲೂಕಿನ ಬಡಜನತೆಗೆ ಸೂರು ನೀಡಲು ಸರ್ಕಾರ ನೀಡಿರುವ ವಸತಿಗಳನ್ನು ತಮ್ಮ ಹಿಂಬಾಲಕರಿಗೆ ಶಾಸಕ ಸಿ.ಎನ್. ಬಾಲಕೃಷ್ಣ ನೀಡಲು ಮುಂದಾಗಿದ್ದಾರೆ.
 ವಸತಿ ರಹಿತರನ್ನು ಗುರುತಿಸಿ ಗ್ರಾಮ ಪಂಚಾಯಿತಿಗಳು ಪಟ್ಟಿ ಕಳುಹಿಸಿದ್ದರೆ ಅದನ್ನು ಅನುಮೋದನೆ ಮಾಡದೆ ತಮ್ಮ ಹಿಂಬಾಲಕರ ಹೆಸರು ನೀಡಿ ಗ್ರಾಮ ಪಂಚಾಯಿತಿಯಿಂದ ಒಪ್ಪಿಗೆ ನೀಡುವಂತೆ ಒತ್ತಾಯ ತಂದಿರುವುದರಿಂದ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಮನೆಗಳನ್ನು ಬಡವರಿಗೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.
ಉದ್ಯೋಗ ಖಾತ್ರಿ ಗುತ್ತಿಗೆಯಾಗಿದೆ: ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾದ ಉದ್ಯೋಗ ಖಾತ್ರಿ ಯೋಜನೆ ತಾಲೂಕಿನಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಶಾಸಕ ಬಾಲಕೃಷ್ಣ ಹಿಂಬಾಲಕರ ಗುತ್ತಿಗೆ ಕಾರ್ಯಕ್ರಮವಾಗಿದೆ. ಯಾವ ಕೂಲಿಕಾರರಿಗೆ ಇಲ್ಲಿ ಅವಕಾಶವಿಲ್ಲದಾಗಿದೆ ಎಂದು ಅವರುದೂರಿದರು.
ಜೆಸಿಬಿ ಹಾಗೂ ಇತರ ಯಂತ್ರಗಳ ಮುಖೇನ ಶಾಸಕರ ಹಿಂಬಾಲಕರು ಗುತ್ತಿಗೆಯಂತೆ ಕೆಲಸ ಮಾಡುತ್ತಿದ್ದು, ಅಧಿಕಾರಿಗಳು ಇವರ ಜತೆ ಕೈ ಜೋಡಿಸಿದ್ದಾರೆ ಈ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸಿದರು.
 ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಯರಾಂ ಮಾತನಾಡಿ ತಾಲೂಕಿನಲ್ಲಿ ಶಾಸಕ ಬಾಲಕೃಷ್ಣ  ಚೋಳೆನಹಳ್ಳಿಯಲ್ಲಿ ಕಳೆದ 15 ವರ್ಷಗಳಿಂದ ಸಂಘಕ್ಕೆ ಹಾಲು ನೀಡುತ್ತಿರುವವರಿಗೆ ಶೇರು ನೀಡುವುದನ್ನು ಬಿಟ್ಟು ಅವರ ಕುಟುಂಬ ಹಿಂಬಾಲಕರನ್ನು ಮಾತ್ರ ಶೇರುದಾರರಾಗಿಸಿಕೊಂಡು ಅಧ್ಯಕ್ಷರಾಗಿದ್ದಾರೆ ಎಂದು ಆರೋಪಿಸಿದರು.
  ಬೇರೆಯವರು ಹಾಕುವ ಹಾಲನ್ನು ತಾವು ಹಾಕಿದ್ದೇವೆ ಎಂದು ದಾಖಲಾತಿ ಸೃಷ್ಟಿಸಿಕೊಂಡು ಸಂಘದ ಅಧ್ಯಕ್ಷರಾಗಿದ್ದಾರೆ. 480 ಮಂದಿ ಹಾಲು ಹಾಕುತ್ತಿದ್ದು, ಅವರಿಗೆ ಶೇರು ನೀಡದೆ ಕೇವಲ 90 ಮಂದಿ ಶೇರುದಾರರಾಗಿಸಿಕೊಂಡು ಆಯ್ಕೆಯಾಗುತ್ತಿದ್ದಾರೆ. ಈ ಬಗ್ಗೆ ಇಲಾಖೆಗೆ ದೂರು ನೀಡಲಾಗಿದೆ ಎಂದರು.
 ಜಿಪಂ ಮಾಜಿ ಉಪಾಧ್ಯಕ್ಷ ಚಂದ್ರಶೇಖರ್ ಮಾತನಾಡಿ ತಾಲೂಕಿನ ಯಾವ ಗ್ರಾಪಂ ಅಧ್ಯಕ್ಷರು ಸ್ವಇಚ್ಛೆಯಿಂದ ಕಾರ್ಯನಿರ್ವಹಿಸಲು ಬಿಡದೆ ಶಾಸಕ ಬಾಲಕೃಷ್ಣ ಅವರೇ ನಿರ್ವಹಿಸುತ್ತಿರುವುದರಿಂದ ಗ್ರಾಮ ಪಂಚಾಯಿತಿಗಳಲ್ಲಿ ಅವ್ಯವಹಾರದ ದಂದೆ ನಡೆಯುತ್ತಿದೆ ಎಂದು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement