ತಂದೆ ತಾಯಿ ಮರೆತ ಯುವಜನತೆ: ಕೋಡಿಮಠ ಸ್ವಾಮೀಜಿ ವಿಷಾದ
ಚನ್ನರಾಯಪಟ್ಟಣ: ಹಣದ ಆಸೆಗೆ ಬಿದ್ದಿರುವ ಇಂದಿನ ಯುವಜನತೆ ತಮ್ಮ ಕುಟುಂಬದ ಹಿರಿಯರನ್ನು ಮರೆಯುತ್ತಿದ್ದಾರೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ ವಿಷಾದಿಸಿದರು.
ತಾಲೂಕಿನ ಕತ್ತರಿಘಟ್ಟದ ಮೆಳಿಯಮ್ಮ ಆಧ್ಯಾತ್ಮ ಕೇಂದ್ರದಲ್ಲಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಯುವಜನತೆಯಲ್ಲಿ ಹಣದ ಆಸೆ ಹೆಚ್ಚಾಗಿದ್ದು, ತಮ್ಮ ತಂದೆ ತಾಯಿ ಸಂಬಂಧ ಮರೆತು ಕೇವಲ ಹಣ ಸಂಪಾದನೆಯೊಂದೆ ತಮ್ಮ ಮುಖ್ಯ ಗುರಿ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ತಿಳಿಸಿದರು.
ಕುಟುಂಬದ ಆಧಾರ ಸ್ಥಂಭವೆಂದು ನಂಬಿರುವ ತಂದೆ ತಾಯಿಯ ಪ್ರೀತಿ ವಾತ್ಸಲ್ಯ ಕಳೆದುಕೊಳ್ಳುತ್ತಿರುವ ಯುವಕರ ಭವಿಷ್ಯದಲ್ಲಿ ವ್ಯತ್ಯಯವಾಗುತ್ತದೆ.
ಇಂತಹ ಯುವಕರಿಗೆ ಪ್ರೀತಿ ವಿಶ್ವಾಸದಿಂದ ಉತ್ತಮ ಮಾರ್ಗದರ್ಶನ ನೀಡಬೇಕಾಗಿದೆ ಎಂದು ಹೇಳಿದರು. ಸರ್ಕಾರ ಹಾಗೂ ಜನತೆ ಎಲ್ಲದ್ದಕ್ಕೂ ಜಾತಿಯನ್ನು ಮುಂದಿಟ್ಟುಕೊಂಡು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ.
ಜಾತೀಯತೆ ಹೋಗಲಾಡಿಸುವ ಜವಾಬ್ದಾರಿ ಇಂದಿನ ಯುವಜನತೆಯಲ್ಲಿದ್ದು, ಜನತೆ ಎಂದಿಗೂ ಜಾತಿಯತೆಯನ್ನು ಮುಂದಿಡದೆ ಎಲ್ಲರೂ ಸಮಾನತೆ ಎಂದು ಕಂಡಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ತಿಳಿಸಿದರು.
ಜನತೆ ಧಾರ್ಮಿಕತೆಯಲ್ಲಿ ತೊಡಗಿಸಿಕೊಂಡಾಗ ಅವರ ಮನಸ್ಸಿನಲ್ಲಿ ನೆಮ್ಮದಿ ದೊರೆಯುತ್ತದೆ. ಜನತೆ ಧಾರ್ಮಿಕತೆಗೆ ಅಲ್ಪ ಸಮಯವನ್ನು ಮೀಸಲಿಡಬೇಕು ಎಂದರು.
ಬೆಂಗಳೂರಿನ ತಪೋಭೂಮಿಯ ಗುರೂಜಿ ಅಘೋರಿ ಬಾಬಾ, ಮೆಳಿಯಮ್ಮ ಆಧ್ಯಾತ್ಮ ಕೇಂದ್ರದ ಚಂದ್ರಶೇಖರ ಗುರೂಜಿ, ತಾಲೂಕು ಪಂಚಾಯಿತಿ ಸದಸ್ಯ ಬಸವರಾಜು, ಬೆಂಗಳೂರಿನ ಕಿಮ್ಸ್ ಮಾಜಿ ಸಿಂಡಿಕೇಟ್ ಸದಸ್ಯ ಭಗವಾನ್ ಇನ್ನೂ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.