ಪಲ್ಸ್ ಪೋಲಿಯೊ ಯಶಸ್ವಿ
ಕ.ಪ್ರ.ವಾರ್ತೆ , ಹಾಸನ , ಜ.19
ಜಿಲ್ಲಾದ್ಯಂತ ಭಾನುವಾರ ಪಲ್ಸ್ ಪೋಲಿಯೊ ನಡೆಯಿತು. ನಿರೀಕ್ಷೆಯಂತೆ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸಿದರು.
ಹಾಸನ ನಗರ, ಸಕಲೇಶಪುರ, ಅರಕಲಗೂಡು, ಅರಸೀಕೆರೆ, ಬೇಲೂರು, ಚನ್ನರಾಯಪಟ್ಟಣ, ಹೊಳೆನರಸೀಪುರ ಮತ್ತು ಆಲೂರು ತಾಲೂಕುಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕಲಾಯಿತು. ಜಿಲ್ಲೆಯಲ್ಲಿ 1.84, 436 ಮಕ್ಕಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿತ್ತು. ಈಗ 1.52, 232 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಶೇ. 92 ರಷ್ಟು ಲಸಿಕೆ ಹಾಕಲಾಗಿದೆ ಎಂದು ಡಾ. ಎಚ್.ಎಲ್. ಜನಾರ್ದನ್ ತಿಳಿಸಿದ್ದಾರೆ.
ನಗರದ ಬಿ.ಎಂ. ರಸ್ತೆ, ಸಿದ್ದಯ್ಯ ನಗರ ಅಂಗನವಾಡಿ ಕೇಂದ್ರದ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಸನಾಂಬ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಚಾಮರಾಜೇಂದ್ರ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ಮಗುವಿಗೆ ಪೋಲಿಯೊ ಹನಿ ಹಾಕುವುದರ ಮೂಲಕ ಶಾಸಕ ಎಚ್.ಎಸ್. ಪ್ರಕಾಶ್ ಚಾಲನೆ ನೀಡಿದರು.
ಮನು ಕುಲದ ಮಾರಕ ರೋಗ ಪೋಲಿಯೊ ಒಂದೇ ಹಂತದಲ್ಲಿ ನಿರ್ಮೂಲನೆ ಮಾಡಲು ಸಾಧ್ಯವಾಗದು. ಹಂತ, ಹಂತವಾಗಿ ನಿಯಂತ್ರಿಸಬಹುದು. ಮಕ್ಕಳಿಗೆ ಕಾಲ, ಕಾಲಕ್ಕೆ ತಪ್ಪದೆ ಎರಡು ಹನಿ ಪೋಲಿಯೋ ಲಸಿಕೆ ಹಾಕುತ್ತಿರಬೇಕು ಎಂದು ಶಾಸಕರು ಕರೆ ನೀಡಿದರು.
ಪಟೇಲ್ ಶಿವರಾಂ: ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಒಂದೇ ಒಂದು ಪೋಲಿಯೊ ಪ್ರಕರಣ ಕಂಡು ಬಂದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಪೋಲಿಯೊ ಮುಕ್ತ ಜಿಲ್ಲೆ ಎಂದು ಘೋಷಣೆಯನ್ನು ಸರ್ಕಾರ ಮಾಡಲಿದೆ. ಅದಕ್ಕಾಗಿ ಎಲ್ಲರ ಸಹಕಾರದಿಂದ ಪೋಲಿಯೋ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಶ್ರಮವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಅನ್ಬುಕುಮಾರ್: ಜಿಲ್ಲಾಧಿಕಾರಿ ಅನ್ಬುಕುಮಾರ್ ಮಾತನಾಡಿ, 5 ವರ್ಷ ಒಳಪಟ್ಟ ಪ್ರತಿ ಮಕ್ಕಳಿಗೂ ತಪ್ಪದೆ ಪೋಲಿಯೊ ಹಾಕಿಸಲು ಪ್ರಮುಖ ಸ್ಥಳಗಳಾದ ಬಸ್, ರೈಲ್ವೆ ನಿಲ್ದಾಣ, ಸಂತೇ ಮೈದಾನ, ಶಾಲೆಗಳಲ್ಲಿ, ಆಸ್ಪತ್ರೆ ಸೇರಿದಂತೆ ಗ್ರಾಮಾಂತರ ಪ್ರದೇಶದ ಮುಖ್ಯ ಕಚೇರಿಗಳಲ್ಲಿ ಬೂತ್ ನಿರ್ಮಿಸಲಾಗಿದೆ. ಕಾಡು ಪ್ರದೇಶದಲ್ಲಿ ವಾಸವಾಗಿರುವ ಜನರಿಗೂ ಪೋಲಿಯೋ ಹಾಕಲು ಎಲ್ಲಾ ರೀತಿಯ ಸಿದ್ಧತೆ ನಡೆದಿದೆ. ಮನೆ ಮನೆಗೂ ಹೋಗಿ ಪೋಲಿಯೊ ಹಾಕಲಾಗುವುದು. ಮೂರು ದಿವಸಗಳ ಕಾಲ ಪೋಲಿಯೊ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಇದನ್ನು ತಡೆಗಟ್ಟುವಲ್ಲಿ ಪೋಷಕರ ಹಾಗೂ ಸಾರ್ವಜನಿಕರ ಪಾತ್ರ ಪ್ರಮುಖವಾಗಿದೆ. ತಮ್ಮ ಮಕ್ಕಳಿಗೆ ಕಾಲ, ಕಾಲಕ್ಕೆ ತಪ್ಪದೆ ಎರಡು ಹನಿ ಪೋಲಿಯೊ ಲಸಿಕೆ ಹಾಕುತ್ತಿರಬೇಕು. ಸರಿಯಾದ ಪ್ರಮಾಣದಲ್ಲಿ ಎಲ್ಲಾ ಮಕ್ಕಳಿಗೂ ಲಸಿಕೆ ನೀಡದಿದ್ದರೆ ರೋಗ ನಿರೋಧಕ ಶಕ್ತಿ ಕಳೆದುಕೊಂಡ ಮಕ್ಕಳ ಸಂಖ್ಯೆ ಹೆಚ್ಚುತ್ತದೆ. ಹಿಂದೆ ಎಷ್ಟೇ ಸಾರಿ ಪೋಲಿಯೊ ಹನಿ ಹಾಕಿಸಿದ್ದರೂ ಮತ್ತೆ ಹಾಕಿಸುವುದು ಹೆಚ್ಚು ಸೂಕ್ತ ಎಂದು ಅಭಿಪ್ರಾಯಪಟ್ಟರು. ನಗರಸಭೆ ಅಧ್ಯಕ್ಷೆ ಹೆಚ್.ಎನ್. ಶ್ರೀವಿದ್ಯಾ ಆನಂದ್, ಅಪರ ಜಿಲ್ಲಾಧಿಕಾರಿ ಗೋಪಾಲಕೃಷ್ಣ, ಜಿಪಂ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಉಪೇಂದ್ರ ಪ್ರತಾಪಸಿಂಗ್, ತಹಸೀಲ್ದಾರ್, ಜಿಲ್ಲಾ ವಾರ್ತಾಧಿಕಾರಿ ವಿನೋದ್ಚಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಚ್.ಸಿ. ಚಿದಾನಂದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಿ.ಎಲ್. ಶ್ಯಾಮಲದೇವಿ, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಜನಾರ್ದನ್ ಇತರರು ಇದ್ದರು.
ಡಿಸಿ ಚಾಲನೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ರೆಡ್ಕ್ರಾಸ್ ಜಿಲ್ಲಾ ಶಾಖೆ, ಲಯನ್ಸ್ ಹಾಸನಾಂಬ ಮತ್ತು ಯುವ ರೆಡ್ ಕ್ರಾಸ್ ಘಟಕಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ಲಸಿಕೆ ಹಾಕುವ ಕಾರ್ಯಕ್ರಮ ಜಿಲ್ಲಾಧಿಕಾರಿ ಅನ್ಬುಕುಮಾರ್ ಉದ್ಘಾಟಿಸಿದರು.
ನಗರದ ಶ್ರೀನಗರದಲ್ಲಿನ ಶಿಶು ಪಾಲನಾ ಕೇಂದ್ರದಲ್ಲಿ ಮಗುವಿಗೆ ಲಸಿಕೆ ಹಾಕುವ ಮೂಲಕ ಜಿಲ್ಲಾಧಿಕಾರಿ ಆರಂಭಿಸಿದರು. ಶಿಶು ಪಾಲನಾ ಕೇಂದ್ರದ ಬೂತ್ನಲ್ಲಿ 360 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದು, ಮಧ್ಯಾಹ್ನ 12 ಕ್ಕೆ ಸುಮಾರು 300 ಮಕ್ಕಳಿಗೆ ಲಸಿಕೆ ನೀಡಲಾಯಿತು.
ಶಾಸಕ ಎಚ್.ಎಸ್. ಪ್ರಕಾಶ್, ನಗರಸಭಾಧ್ಯಕ್ಷರಾದ ವಿದ್ಯಾ, ಅಪರ ಜಿಲ್ಲಾಧಿಕಾರಿ ಡಾ. ಗೋಪಾಲಕೃಷ್ಣ, ಡಿಎಚ್ಓ ಡಾ. ಶ್ಯಾಮಲಾದೇವಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಂಕರ್, ತಾಲೂಕು ದಂಡಾಧಿಕಾರಿ ಮಂಜುನಾಥ್, ಎಚ್.ಪಿ. ಮೋಹನ್, ಅನುಗನಾಳು ಕೃಷ್ಣಮೂರ್ತಿ, ರಾಜ್ಯ ಸಮಿತಿ ಸದಸ್ಯ ಶಬ್ಬೀರ್ ಅಹಮದ್, ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಎಂ. ಶಿವಣ್ಣ, ವೀರಭದ್ರಪ್ಪ, ಕೃಷ್ಣಪ್ಪ, ಕುಮಾರ್, ಕೆ.ಟಿ. ಜಯಶ್ರೀ, ನಿರ್ಮಲ, ಹಾಸನ ತಾಲೂಕು ಘಟಕಾಧ್ಯಕ್ಷ ಸುರೇಶ್ ಗುರೂಜಿ, ತಾಲೂಕು ಸಮಿತಿ ಸದಸ್ಯ ರಫೀಕ್ ಇತರರು ಭಾಗವಹಿಸಿದ್ದರು.
'ಪೋಲಿಯೊ ಬೇರು ಸಮೇತ ಕಿತ್ತೆಸೆಯೋಣ'
ಅರಸೀಕೆರೆ: ಪೋಲಿಯೋ ಬಹು ದೊಡ್ಡ ಪಿಡುಗಾಗಿದ್ದು ಸಂಘ ಸಂಸ್ಥೆಗಳ ಸಹಕಾರದಿಂದ ಇದನ್ನು ತಹಬದಿಗೆ ತಂದಿದ್ದು ಇದನ್ನು ಬೇರುಸಮೇತ ಕಿತ್ತೆಸೆಯಲು ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸುವ ಮೂಲಕ ಪೋಲಿಯೋ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಸಹಕರಿಸಬೇಕೆಂದು ತಹಸಿಲ್ದಾರ್ ಕೇಶವಮೂರ್ತಿ ಹೇಳಿದರು.
ಪಟ್ಟಣದ ಸರ್ಕಾರಿ ಜೆ.ಸಿ. ಆಸ್ಪತ್ರೆಯಲ್ಲಿ ತಾಲೂಕು ಆರೋಗ್ಯ ಇಲಾಖೆ ಹಾಗೂ ರೋಟರಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ಮೊದಲ ಹಂತದ ಪಲ್ಸ್ ಪೋಲಿಯೊ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯವಂತ ಸಮಾಜ ನಿರ್ಮಾಣ ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿದೆ. ಐದು ವರ್ಷದೊಳಗಿನ ಮಗುವಿಗೆ ಹಾಕಿಸುವ ಎರಡು ಹನಿ ಪೋಲಿಯೋ ಲಸಿಕೆ ಮಕ್ಕಳನ್ನ ಶಾಶ್ವತ ಅಂಗವಿಕಲತೆಯಿಂದ ದೂರವಿರುವಂತೆ ಮಾಡುತ್ತದೆ ಎಂದು ತಿಳಿಸಿದರು. ತಾಲೂಕು ವೈದ್ಯಾಧಿಕಾರಿ ಡಾ.ದಿನೇಶ್ ಮಾತನಾಡಿ ತಾಲೂಕಿನಲ್ಲಿ 29385 ಐದು ವರ್ಷ ಒಳಪಟ್ಟ ಮಕ್ಕಳಿದ್ದು ಬಸ್ ಹಾಗೂ ರೈಲ್ವೆ ನಿಲ್ದಾಣ ಸೇರಿದಂತೆ ಪಟ್ಟಣದಲ್ಲಿ 20 ಹಾಗೂ ತಾಲೂಕಿನ ಗ್ರಾಮಾಂತರ ಭಾಗದಲ್ಲಿ 149 ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲದೇ ಕಾರ್ಯಕ್ರಮದ ಯಶಸ್ಸಿಗೆ ಆರೋಗ್ಯ ಇಲಾಖೆಯ 114 ಸಿಬ್ಬಂದಿ, 228 ಆಶಾ ಕಾರ್ಯಕರ್ತೆಯರು ಹಾಗೂ 488 ಅಂಗನವಾಡಿ ಕಾರ್ಯಕರ್ತೆಯರು ಈ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದರು.
ಆಸ್ಪತ್ರೆ ವೈದ್ಯಾಧಿಕಾರಿ ಡಾ. ಶಾಂತಲ, ಪುರಸಭಾಧ್ಯಕ್ಷ ಮೋಹನ್ಕುಮಾರ್, ಮಾಜಿ ಅಧ್ಯಕ್ಷೆ ಸಿದ್ದಮ್ಮ, ರೋಟರಿ ಅಧ್ಯಕ್ಷ ಪ್ರವೀಣಕುಮಾರ್ ಇತರರಿದ್ದರು.