ಪ್ರತಿಭಟನೆ ನಡುವೆ ಸಮುಚ್ಚಯಕ್ಕೆ ಶಂಕು
ಅರಕಲಗೂಡು: ಯಾವ ಗಳಿಗೆಯಲ್ಲಿ ಏನು ಸಂಭವಿಸುತ್ತದೋ ಎಂಬ ಜನರ ಆತಂಕ,ಪ್ರತಿಭಟನೆಗಳ ನಡುವೆಯೂ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಇಲ್ಲಿನ ಚನ್ನಬಸವೇಶ್ವರ ಸಮುದಾಯಭವನ ವೃತ್ತದಲ್ಲಿ ವಾಣಿಜ್ಯ ಸಮುಚ್ಚಯಕ್ಕೆ ದೊಡ್ಡಮಠದ ಮಲ್ಲಿಕಾರ್ಜುನ ಸ್ವಾಮೀಜಿ ಗುದ್ದಲಿ ಪೂಜೆ ನೆರವೇರಿಸಿದರು.
ಚನ್ನಬಸವೇಶ್ವರ ಸಮುದಾಯ ಭವನದ ಎದುರಿನ ಖಾಲಿ ನಿವೇಶನದಲ್ಲಿ ಪೂರ್ವ ಯೋಜಿತ ಕಾರ್ಯಕ್ರಮದಂತೆ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಆದರೆ ಈ ಸ್ಥಳ ಇಲ್ಲಿನ ಕೆಲ್ಲೂರು ಗ್ರಾಮದ ಗ್ರಾಮ ದೇವತೆ ಉಡಿಸಲಮ್ಮ ದೇವಾಲಯಕ್ಕೆ ಸೇರಿದ್ದೆಂಬ ವಾದ ಆ ಗ್ರಾಮದ ದಲಿತ ಮುಖಂಡರದ್ದು.
ವಾಣಿಜ್ಯ ಸಮುಚ್ಚಯ ನಿರ್ಮಿಸುತ್ತಾರೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಕಳೆದ ನಾಲ್ಕೈದು ದಿನಗಳಿಂದ ಅಲ್ಲಿನ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು.
ತಾಲೂಕು ಆಡಳಿತಕ್ಕೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಸ್ಥಳವನ್ನು ಅಳೆದು ನಿಯಮಬದ್ದವಾಗಿ ಯಾರಿಗೆ ಸೇರಿದ್ದೆಂದು ಶನಿವಾರವೇ ಗೊತ್ತುಪಡಿಸಿದ್ದರು.
ಆದರೆ ಇದನ್ನು ಗ್ರಾಮದ ದಲಿತರು ಒಪ್ಪದೇ ಸಮುಚ್ಚಯ ಶಂಕುಸ್ಥಾಪನೆಗೆ ತಮ್ಮ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.ಶನಿವಾರ ತಡ ರಾತ್ರಿಯವರೆಗೂ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಕಲೇಶಪುರ ಉಪ ವಿಭಾಗಾಧಿಕಾರಿ ಡಾ.ಮಧುಕೇಶ್ವರ್ ಹಾಗೂ ಎರಡೂ ಕಡೆಯವರ ನಡುವೆ ನಡೆಸಿದ ಮಾತುಕತೆ ವಿಫಲವಾಗಿತ್ತು.
ಬಿಗುವಿನ ವಾತಾವರಣ: ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ದೊಡ್ಡಮಠದ ಭಕ್ತರು ಸಿದ್ದತೆ ನಡೆಸಿದ್ದರೆ, ಕೆಲ್ಲೂರು ಗ್ರಾಮಸ್ಥರು ಅದನ್ನು ವಿರೋಧಿಸಿ ವಿವಾದಿತ ಸ್ಥಳದ ಸಮೀಪದಲ್ಲೇ ರಸ್ತೆಗಿಳಿದು, ಬೆಳಿಗ್ಗೆ 9 ರಿಂದಲೇ ಪ್ರತಿಭಟನೆ ನಡೆಸಲು ಮುಂದಾದರು.ಈ ವೇಳೆ ವೃತ್ತ ನಿರೀಕ್ಷಕ ರಾಜು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಮಯ ಕಳೆಯುತ್ತಿದ್ದಂತೆ ವಿವಿದೆಢೆಗಳಿಂದ ಪ್ರತಿಭಟನೆಗೆ ಜನ ಬಂದು ಸೇರುತ್ತಿದ್ದರೆ, ಅತ್ತ ಶಂಕುಸ್ಥಾಪನಾ ಸಮಾರಂಭಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇರಲಾರಂಭಿಸಿದ್ದರೆ ಮತ್ತೊಂದೆಡೆ ಬಿಗುವಿನ ವಾತಾವರಣ ಹೆಚ್ಚುತ್ತಿತ್ತು.
ಸ್ವಾಮೀಜಿ ಪೂಜಾ ಕಾರ್ಯಕ್ಕೆ ಬರುವ ಸಮಯ ಹತ್ತಿರವಾಗುತ್ತಿದ್ದಂತೆಯೇ ಪ್ರತಿಭಟನಾಕಾರರು ಪೂಜಾ ಸ್ಥಳಕ್ಕೆ ನುಗ್ಗಲು ನಡೆಸಿದ ಪ್ರಯತ್ನವನ್ನು ಪೊಲೀಸರು ತಡೆದರು.ಈ ವೇಳೆ ನೂಕು ನುಗ್ಗಲು ಉಂಟಾಯಿತು.ಪ್ರತಿಭಟನಾಕಾರರಲ್ಲಿ ನೂರಾರು ಮಹಿಳೆಯರು ಬಂದು ಸೇರ್ಪಡೆಗೊಂಡಿದ್ದು,ಮಹಿಳಾ ಪೊಲೀಸರ ಸಂಖ್ಯೆ ಮಾತ್ರ ಮೂರು ಆಗಿತ್ತು. ಪೊಲೀಸರಿಗೆ ಇದು ನುಂಗಲಾರದ ತುತ್ತಾಯಿತು.ಆದರೂ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಪೊಲೀಸರು ಹೈರಾಣಾಗಿದ್ದರು.ಆದರೂ ಪೂಜೆ ನಡೆಸುವುದನ್ನು ತಡೆಯುವ ಸಲುವಾಗಿ ಪ್ರತಿಭಟನಾಕಾರರು ಪೂಜಾ ಸ್ಥಳಕ್ಕೆ ಖಾಲಿ ಬಾಟಲು, ಕಲ್ಲುಗಳ ತೂರಾಟ ನಡೆಸಿದರು.
ಪೊಲೀಸರು, ಶಾಸಕರ ವಿರುದ್ಧ ಘೋಷಣೆ: ಅದೇ ಸ್ಥಳಕ್ಕೆ ಕೋಳಿ ಕೊಯ್ದು ತಂದು ಹಾಕಲು ಕೆಲವರು ಯತ್ನಿಸಿದರು.ಆದರೆ ಇದೆಲ್ಲವನ್ನೂ ಪೊಲೀಸರು ತಡೆದರು.ಈ ವೇಳೆ ಸ್ವಾಮೀಜಿ ಸೇರಿದಂತೆ ಪೊಲೀಸರು,ತಹಸೀಲ್ದಾರರು, ಜಿಲ್ಲಾಧಿಕಾರಿ, ಶಾಸಕರ ವಿರುದ್ಧ ಘೋಷಣೆ ಕೂಗಿದರು.
ಇದಾವುದರ ಅರಿವೂ ಇಲ್ಲದಂತೆ ಸ್ಥಳಕ್ಕೆ ಆಗಮಿಸಿದ ಸ್ವಾಮೀಜಿ ಪೂಜಾ ಕೈಂಕರ್ಯ ನೆರವೇರಿಸಿ,ನಂತರ ಧಾರ್ಮಿ ಸಭಾ ಕಾರ್ಯಕ್ರಮದತ್ತ ನಡೆದರು.ಇಷ್ಟಕ್ಕೇ ಸುಮ್ಮನಾಗದ ಪ್ರತಿಭಟನಾಕಾರರು 3-4 ಕಡೆಗಳಲ್ಲಿ ಗುಂಪು ಸೇರಿ ಪ್ರತಿಭಟನೆಗೆ ಮುಂದಾದರು.
ಗುದ್ದಲಿ ಪೂಜೆ ನಡೆಸಿದ ಸ್ಥಳಕ್ಕೆ ತೆರಳಿದ ದಲಿತರು ಅದೇ ಸ್ಥಳದಲ್ಲಿ ಒಲೆ ಹೂಡಿ ಮಾಂಸ ಬೇಯಿಸಲು ಮುಂದಾದರು.ಈ ವೇಳೆ ನೆಡಲಾಗಿದ್ದ ಕಲ್ಲು ಕಿತ್ತು ಹಾಕಲು ಯತ್ನಿಸಿದರಾದರೂ ಪೊಲೀಸರು ಅದಕ್ಕೆ ಅವಕಾಶ ನೀಡದೇ ರಕ್ಷಣೆ ಈ ವೇಳೆ ಬಿಗಿಯಾದ ವಾತಾವರಣ ನಿರ್ಮಾಣಗೊಂಡಿತ್ತು.
ಈ ವೇಳೆ ಸ್ಥಳಕ್ಕೆ ಬಂದ ಉಪ ವಿಭಾಗಾಧಿಕಾರಿ ಡಾ.ಮಧುಕೇಶ್ವರ್,ತಹಸೀಲ್ದಾರ್ ಜಗದೀಶ್ ಪ್ರತಿಭಟನಾ ಕಾರರ ಮನವಿ ಸ್ವೀಕರಿಸಿ,ದಾಖಲಾತಿಗಳ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದೆಂದು ತಿಳಿಸಿದರು.
ದೇವೇಗೌಡರ ಭೇಟಿ: ಮಠದ ಕಾರ್ಯಕ್ರಮಕ್ಕೆಂದು ಬಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ನೇರವಾಗಿ ಪ್ರತಿಭಟನಾಕಾರರ ಬಳಿಗೆ ಬಂದು ಸಮಸ್ಯೆ ಆಲಿಸಿದರು.ನಂತರ ಮಾತನಾಡಿ ತಹಸೀಲ್ದಾರರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಎಲ್ಲರಿಗೂ ಅನುಕೂಲವಾಗುವಂತಹ ಕ್ರಮವನ್ನು ಮಾತುಕತೆ ಮೂಲಕ ಬಗೆಹರಿಸುವುದಾಗಿ ತಿಳಿಸಿ ಕಾರ್ಯಕ್ರಮಕ್ಕೆ ತೆರಳಿದರು.
ಇದೇ ವೇಳೆ ಸಮಾರಂಭಕ್ಕೆ ಬಂದ ಶಾಸಕ ಹೆಚ್.ಡಿ. ರೇವಣ್ಣ ಅವರು ನೇರ ಕಾರ್ಯಕ್ರಮಕ್ಕೆ ತೆರಳಿ ನಂತರ ಪ್ರತಿಭಟನಾಕಾರರು ಮುಂದುವರೆಸಿದ್ದ ಪ್ರತಿಭಟನಾಕಾರರ ಬಳಿಗೆ ಬಂದರು. ಆ ವೇಳೆಗಾಗಲೇ ಶಾಸಕ ಎ.ಮಂಜು ಸಮಸ್ಯೆ ಆಲಿಸುತ್ತಿದ್ದರು.ನಂತರ ರೇವಣ್ಣ ಅವರು ಶಾಸಕ ಎ.ಮಂಜು ಅವರ ಬಳಿಗೆ ಬಂದು ಹಸ್ತಲಾಗವ ನೀಡಿ ಹೊರಡುವುದಾಗಿ ತಿಳಿಸಿ ಹೊರಟರು.
ನಂತರ ದಲಿತ ಮುಖಂಡರೊಂದಿಗೆ ಮಾತನಾಡಿದ ಶಾಸಕ ಎ.ಮಂಜು ಅವರು ಸಣ್ಣ ವಿಷಯವನ್ನು ಅತಿಯಾಗಿ ಬೆಳೆಸುವ ಅಗತ್ಯವಿಲ್ಲ.ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ ಎಂದು ತಿಳಿಸಿ ಸ್ಥಳದಲ್ಲೇ ಇದ್ದ ತಹಸೀಲ್ದಾರ್ ಜಗದೀಶ್ ಅವರಿಗೆ ಸದರಿ ಸ್ಥಳಕ್ಕೆ ಸಂಬಂಧಿಸಿದ ಎಲ್ಲ ಮೂಲ ದಾಖಲಾತಿಗಳನ್ನು ಜನವರಿ 26ರೊಳಗೆ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿ,ಪ್ರತಿಭಟನೆಗೆ ತೆರೆ ಎಳೆಯುವಂತೆ ದಲಿತ ಮುಖಂಡರಲ್ಲಿ ಮನವಿ ಮಾಡಿದರು.ಒಪ್ಪಿದ ಪ್ರತಿಭಟನಾಕಾರರು ಪ್ರತಿಭಟನೆ ಹಿಂದಕ್ಕೆ ಪಡೆದರು.ಪ್ರತಿಭಟನೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಶಶಿ,ಮಂಜುನಾಥ ನೇತೃತ್ವ ವಹಿಸಿದ್ದರು.