ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಾಲಕನಿಗೆ ಇನ್ನೂ ಸಿಗದ ಪರಿಹಾರ

Vishwanath S
Updated On : 20 Jan 2014, 12:15 pm

ಹೊಳೆನರಸೀಪುರ: ನೋವಿನಲ್ಲಿ ಅಮ್ಮಾ ಎಂದು ಕೂಗಲು ಅಮ್ಮ ಇಲ್ಲ, ಅಪ್ಪಾ ಎಂದರೆ ಅಪ್ಪನೂ ಇಲ್ಲ, ಕಡೆಯ ಪಕ್ಷ ಏನಾದರೂ ಹೇಳಿಕೊಳ್ಳಲು ಇದ್ದ ಅಣ್ಣ ಮತ್ತು ಅಕ್ಕ ಕೂಡಾ ಬದುಕಿಲ್ಲ. ನಾಲ್ಕು ದಿನದೊಳಗೆ ತನ್ನ ಕುಟುಂಬದ ನಾಲ್ವರನ್ನೂ ಕಳೆದುಕೊಂಡು ತಾನು ಬದುಕುಳಿದರೂ ನೋವಿಲ್ಲದೇ ಜೀವನ ನಡೆಸುವ ಸ್ಥಿತಿಯಲ್ಲಿ ಈ ಬಾಲಕ ಇಲ್ಲ.
ಇದು ಪಟ್ಟಣದ ದಲಿತ ಕುಟುಂಬವೊಂದರ ನಾಲ್ವರು ಅಡುಗೆ ಅನಿಲ ಸೋರಿಕೆಯಿಂದ ಉಂಟಾದ ಬೆಂಕಿ ಅವಗಡದಲ್ಲಿ ಅಸುನೀಗಿ ಬದುಕುಳಿದಿರುವ ಬಾಲಕನ ಸ್ಥಿತಿ.        
ಕಳೆದ ಆರು ತಿಂಗಳ ಹಿಂದೆ ಸಂಭವಿಸಿದ ಅಡುಗೆ ಅನಿಲ ಸೋರಿಕೆ ದುರಂತದಲ್ಲಿ ಪಟ್ಟಣದ ಒಂದೇ ಕುಟುಂಬದ ಐವರೂ ಗಾಯಗೊಂಡು ಚಿಂತಾಜನಕ ಸ್ಥಿತಿ ತಲುಪಿ, ಇವರಲ್ಲಿ ನಾಲ್ವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.
ಎಂಥವರ ಮನ ಕರಗಿಸುವಂತಿದೆ:  ನಾಲ್ಕೇ ದಿನದಲ್ಲಿ ತಂದೆ ತಾಯಿ ಅಣ್ಣ ಮತ್ತು ಅಕ್ಕನನ್ನು ಕಳೆದುಕೊಂಡು ತೀವ್ರವಾಗಿ ಗಾಯಗೊಂಡು ಬದುಕುಳಿದು, ಜೀವನ್ಮರಣದ ನಡುವೆ ಹೋರಾಡುತ್ತಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಂತೂ ಬದುಕುಳಿದಿರುವ ಬಾಲಕ ರವಿ ಸುಟ್ಟ ಗಾಯಗಳಿಂದ ಈಗಲೂ ನೋವಿನ ನಡುವೆಯೇ ಕಂಡ ಕಂಡವರ ಸಹಾಯ ಹಸ್ತಕ್ಕಾಗಿ ಜಾತಕ ಪಕ್ಷಿಯಂತೆ ಕಾದು ಕುಳಿತಿರುವ ಸ್ಥಿತಿ ಎಂಥವರ ಮನವನ್ನೂ ಕರಗಿಸುವಂತಿದೆ.
ಇಲ್ಲಿನ ಅಂಬೇಡ್ಕರ್ ನಗರದ ಬಳಿಯಲ್ಲಿನ ಜನತಾ ಕಾಲೋನಿಯಲ್ಲಿ ವಾಸವಿದ್ದ ಸ್ವಾಮಿ ಎಂಬಾತ ಊರೂರು ತಿರುಗಿ ಸೈಕಲ್‌ನಲ್ಲಿ ಐಸ್‌ಕ್ಯಾಂಡಿ ಮಾರುವ ಕಾಯಕ ಮಾಡುತ್ತಿದ್ದ ಬಡವ. ಈತನಿಗೆ ಪತ್ನಿ ಹಾಗೂ ಮೂವರು ಮಕ್ಕಳು. ಇವರು ವಾಸವಿದ್ದ ಪುಟ್ಟ ಮನೆಯಲ್ಲಿ ಬೆಳಗಿನ ಜಾವದಲ್ಲಿ ಮೂತ್ರ ವಿಸರ್ಜನೆಗೆಂದು ಎದ್ದ ಮೂರ್ತಿ ಮನೆಯಲ್ಲಿ ವಿದ್ಯುತ್ ಇಲ್ಲದ ಕಾರಣದಿಂದಾಗಿ ದೀಪವನ್ನು ಹೊತ್ತಿಸಲು ಬೆಂಕಿಕಡ್ಡಿ ಗೀರಿದ ಕೂಡಲೇ, ಮನೆಯಲ್ಲಿದ್ದ ಅಡುಗೆ ಅನಿಲ ಸಿಲೆಂಡರಿನಿಂದ ಅನಿಲವು ಸೋರಿಕೆಯಾಗಿದ್ದ ಕಾರಣ ದಿಢೀರ್ ಸ್ಫೋಟ ಸಂಭವಿಸಿದ್ದಲ್ಲದೇ, ಬೆಂಕಿಯೂ ಹೊತ್ತಿಕೊಂಡ ಕೂಡಲೇ ಪಕ್ಕದಲ್ಲಿಯೇ ಮಲಗಿದ್ದ ಕುಟುಂಬದ ಎಲ್ಲಾ ಸದಸ್ಯರೂ ತೀವ್ರವಾಗಿ ಗಾಯಗೊಂಡಿದ್ದರು.
ಸ್ಫೋಟದ ಶಬ್ಧಕ್ಕೆ ಅಕ್ಕ ಪ್ಕಕದ ಮನೆಯವರು ಎದ್ದು ಓಡಿ ಬಂದು ನೋಡಿ, ಅಗ್ನಿಶಾಮಕ ಠಾಣೆಗೆ ಕರೆ ಮಾಡಿ, ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಐವರನ್ನೂ ಕೂಡಲೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದರು.
ಗೋಡೆಗೆ ಮೆತ್ತಿಕೊಂಡ ಮಾಂಸ: ಮನೆಯಲ್ಲಿನ ಕಿರಿದಾದ ಸ್ಥಳದಲ್ಲೇ ಇದ್ದ ಅಡುಗೆ ಅನಿಲ ಸಿಲೆಂಡರ್ ಹಾಗೂ ಸ್ಟೌವ್‌ನಿಂದ ಅನಿಲ ಸೋರಿಕೆಯುಂಟಾದ ಕಾರಣದಿಂದಾಗಿ ಉಂಟಾದ ದುರಂತದ ತೀವ್ರತೆಗೆ ಕೆಲವರ ದೇಹದಿಂದ ಸಿಡಿದ ಮಾಂಸದ ತುಂಡುಗಳು ಅಕ್ಕ ಪಕ್ಕದ ಗೋಡೆಗಳಿಗೆ ಅಂಟಿಕೊಂಡಿತ್ತು. ಮನೆಯ ಮೇಲ್ಛಾವಣಿ ಹಾಗೂ ಗೋಡೆಗಳಿಗೂ ಹಾನಿಯಾಗಿತ್ತು. ಅಲ್ಲದೇ ಮನೆಯಲ್ಲಿದ್ದ ಟಿ.ವಿ ಮತ್ತು ಗೃಹೋಪಯೋಗಿ ವಸ್ತುಗಳೂ ಕೂಡ ಘಟನೆಯಲ್ಲಿ ಸಂಪೂರ್ಣ ಹಾನಿಗೊಳಗಾಗಿದ್ದವು.
ದುರಂತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಐವರನ್ನೂ ಹೆಚ್ಚಿನ ಚಿಕಿತ್ಸೆಯ ಕಾರಣದಿಂದ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಮನೆಯ ಯಜಮಾನ ಸ್ವಾಮಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು. ಎರಡು ದಿನಗಳ ನಂತರ ಈತನ ಮಕ್ಕಳಾದ ಹರ್ಷಿತ್ ಹಾಗೂ ರಕ್ಷಿತ ಕೂಡ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇವರ ಅಂತ್ಯಕ್ರಿಯೆಯನ್ನು ನೆರೆಹೊರೆಯವರು ಬಂಧು-ಬಳಗದವರೊಡಗೂಡಿ ಮುಗಿಸುವಷ್ಟರಲ್ಲಿ ಮಾರನೇ ದಿನ ಮುಂಜಾವಿನ ಹೊತ್ತಿಗೆ ಮೂರ್ತಿ ಪತ್ನಿ ಲಕ್ಷ್ಮಮ್ಮ ಕೂಡ ಇಹಲೋಕ ತ್ಯಜಿಸಿದ್ದರು. ಆದರೆ ಮೂರ್ತಿ ಮೂರನೇ ಮಗನಾದ ರವಿ ಶೇ.45ರಷ್ಟು ಸುಟ್ಟ ಗಾಯಗಳಿಂದ ಬೆಂದು, ಅಂತೂ ಬದುಕುಳಿದಿದ್ದಾನೆ.
ಮೊದಲೇ ಬಡ ಕುಟುಂಬ, ಅಂದಿನದನ್ನು ಅಂದಿಗೇ ದುಡಿದು ತಿನ್ನಬೇಕಾದ ಸ್ಥಿತಿಯಲ್ಲಿದ್ದ ಈ ಕುಟುಂಬ ಆಕಸ್ಮಿಕವಾಗಿ ನಡೆದ ದುರಂತದಿಂದ ನಾಲ್ವರು ಸತ್ತು, ಉಳಿದ ಒಬ್ಬ ಬಾಲಕ ಬದುಕಿದ್ದೂ ಸತ್ತವನಂತೆ ಬದುಕಬೇಕಾದ ಸ್ಥಿತಿ ಇದೆ.
ಸುದೈವವಶಾತ್ ಬದುಕುಳಿದಿರುವ ಬಾಲಕ ರವಿಯ ಚಿಕ್ಕಪ್ಪ ಶಿವು ಕೂಡಾ ಗಾರೆ ಕೆಲಸ ಮಾಡಿ ಬದುಕು ಸಾಗಿಸುವ, ಆ ಮೂಲಕ ಹೆಂಡತಿ ಹಾಗೂ ಮೂರು ಹೆಣ್ಣು ಮಕ್ಕಳನ್ನು ಸಾಕಬೇಕಾದ ಅನಿವಾರ್ಯತೆಯ ನಡುವೆಯೂ ಘಟನೆಯಿಂದ ಬದುಕುಳಿದ ರವಿಯ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸತತವಾಗಿ ಮೂರು ತಿಂಗಳ ಕಾಲ ಕಂಡ ಕಂಡವರ ಕಾಲು ಹಿಡಿದು 3.5 ಲಕ್ಷಕ್ಕೂ ಅಧಿಕ ಹಣ ಸಾಲ ಮಾಡಿ ಅಣ್ಣನ ಮಗ ರವಿಯನ್ನು ಬದುಕಿಸಿಕೊಳ್ಳುವಲ್ಲಿ ಶಿವು ದಂಪತಿ ಯಶಸ್ವಿಯಾದರು.
ಮುದುರಿರುವ ನರ: ಆದರೆ ಚಿಕಿತ್ಸೆಯ ನಂತರ ಶೇ.45ರಷ್ಟು ಸುಟ್ಟ ಗಾಯಗಳಾಗಿರುವ ರವಿಯ ಬಲಗೈ ಬೆಂಕಿ ಅನಾಹುತದಿಂದಾಗಿ ಸೆಟೆದುಕೊಂಡಿದೆಯಲ್ಲದೇ, ಕಾಲು ಹಾಗೂ ದೇಹದ ಹಲವು ಭಾಗದ ನರಗಳೆಲ್ಲವೂ ಮುದುರಿಹೋಗಿವೆ. ಸುಟ್ಟ ಗಾಯಗಳ ನಡುವೆಯೇ ಬದುಕುಳಿದಿರುವ ರವಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದೆ. ಆದರೆ ಅದಕ್ಕಾಗಿ ಇನ್ನೂ ಸುಮಾರು 3-4ಲಕ್ಷರೂಗಳಿಗೂ ಅಧಿಕ ಹಣದ ಅವಶ್ಯಕತೆ ಇದೆ. ಆದರೆ ಗಾರೆ ಕೂಲಿ ಮಾಡಿ ಬದುಕುತ್ತಿರುವ ರವಿಯ ಚಿಕ್ಕಪ್ಪ ಶಿವುಗೆ ಈಗಾಗಲೇ ಮಾಡಿಕೊಂಡಿರುವ ಸಾಲವನ್ನು ತೀರಿಸಲು ದಾರಿ ಕಾಣದೇ ವಿಷ ಕುಡಿಯಬೇಕು ಎನ್ನುವ ಸ್ಥಿತಿ ತಲುಪಿದ್ದಾನೆ.  
ಬೆಂಕಿ ಅವಗಢದ ಘಟನೆ ನಡೆದ ಸಂದರ್ಭದಲ್ಲಿ ವಿಷಯ ತಿಳಿದು ಕೆಲ ಜನನಾಯಕರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಶಾಸಕ ಎಚ್.ಡಿ.ರೇವಣ್ಣ ಕೂಡಾ ಸ್ಥಳಕ್ಕೆ ಭೇಟಿ ನೀಡಿ ಅವಘಡದ ಕುರಿತಂತೆ ದಿಗ್ಭಮೆ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪ್ರತಿಯೊಬ್ಬರೂ ಈ ಕುಟುಂಬದ ಸ್ಥಿತಿಯನ್ನು ಕಂಡು ಕೇಳಿ ಮಮ್ಮಲ ಮರುಗುತ್ತಿದ್ದಾರೆ. ಅಲ್ಲದೇ ಕೆಲವು ಪಕ್ಷಗಳ ಮುಖಂಡರು ತಮ್ಮ ಪಕ್ಷದ ವತಿಯಿಂದ ಕೈಲಾದ ಸಹಕಾರಗಳನ್ನು ನೀಡುವುದಲ್ಲದೇ, ಹಾನಿಗೊಳಗಾಗಿರುವ ಮನೆಯ ಬದಲಿಗೆ ಸರ್ಕಾರದ ಅನುದಾನದಲ್ಲಿ ಮನೆ ನಿರ್ಮಿಸಿಕೊಳ್ಳಲು ಸಹಾಯ ನೀಡುವುದಾಗಿ ತಿಳಿಸಿದ್ದಾರೆ. ಇನ್ನೂ ಕೆಲವರು ಸರ್ಕಾರದ ವತಿಯಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಶಾಸಕ ಎಚ್.ಡಿ.ರೇವಣ್ಣ ಈ ವಿಷಯ ಪ್ರಸ್ತಾಪಿಸಿ ಪರಿಹಾರ ನೀಡುವಂತೆ ಒತ್ತಾಯಿಸಿದ ಸಂದರ್ಭದಲ್ಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ  ಸೂಕ್ತ ಪರಿಹಾರ ನೀಡುವುದಾಗಿ ನೀಡಿದ ಭರವಸೆ ಭರವಸೆಯಾಗಿಯೇ ಉಳಿದಿದೆ.
ಸ್ಥಳೀಯವಾಗಿ ಕೆಲವು ವ್ಯಕ್ತಿಗಳು, ಸಂಘ-ಸಂಸ್ಥೆಗಳು ಹಾಗೂ ಪತ್ರಿಕೆಗಳು ಸಾರ್ವಜನಿಕರಿಂದ ದೇಣಿಗೆ ಸ್ವೀಕರಿಸಿ ದುರಂತದಿಂದ ಬದುಕುಳಿದಿರುವ ಬಾಲಕನ ಚಿಕಿತ್ಸೆಗಾಗಿ ಅಲ್ಪ-ಸ್ವಲ್ಪ ಹಣವನ್ನು ನೀಡಿವೆ. ಆದರೆ ಸರ್ಕಾರ ಈ ಕೂಡಲೇ ಮಾನವೀಯತೆಯ ನೆಲೆಯಲ್ಲಾದರೂ ಬದುಕುಳಿದಿರುವ ಬಾಲಕನ ನೆರವಿಗೆ ಸಹಾಯ ಹಸ್ತ ಚಾಚಬೇಕಾದ ಅವಶ್ಯಕತೆ ಇದೆ.



-ಎಚ್.ಡಿ.ಗುರುಪ್ರಸಾದ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement