ಮೆಕ್ಕೆಜೋಳ ಖರೀದಿ ಭರಾಟೆ ಜೋರು
ಕನ್ನಡಪ್ರಭ ವಾರ್ತೆ ಬೇಲೂರು ಜ. 19
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಂದ ಮುಸುಕಿನಜೋಳ ಖರೀದಿ ಭಾರಿ ಪ್ರಮಾಣದಲ್ಲಿ ಹೆಚ್ಚಿದ್ದು, ಅಧಿಕಾರಿಗಳು ಮಾತ್ರ ವರ್ತಕರು ತಂದ ಜೋಳಕ್ಕೆ ಮೊದಲ ಆದ್ಯತೆ ನೀಡುತ್ತಾರೆ ಎಂದು ರೈತರು ಆರೋಪಿಸಿದ್ದಾರೆ.
ಸರ್ಕಾರ ಕನಿಷ್ಟ ಬೆಂಬಲ ಬೆಲೆಯಲ್ಲಿ ರೈತರಿಂದ ಮುಸುಕಿನ ಜೋಳವನ್ನು 1310 ರು.ಗೆ ಖರೀದಿ ಮಾಡುತ್ತಿದ್ದು, ಸಣ್ಣ ರೈತರಿಂದ ಎಕರೆಗೆ 25 ಕ್ವಿಂಟಲ್‌ನಂತೆ 5 ಎಕರೆಗೆ ಮಿತಿ ಇದೆ. ಆದರೆ ಈ ಅವಕಾಶವನ್ನು ದುರುಪಯೋಗ ಮಾಡಿಕೊಂಡ ಬಹುತೇಕ ವರ್ತಕರು ಜೋಳದ ಬೆಳೆಯನ್ನು ಬೆಳೆಯದ ರೈತರ ಪಹಣಿ, ಹಿಡುವಳಿ ಪತ್ರ ಪಡೆದು ಗ್ರಾಮಲೆಕ್ಕಿಗ ಅಧಿಕಾರಿಯಿಂದ ಪ್ರಮಾಣ ಪತ್ರ 1310 ರು.ಗೆ ಎಪಿಎಂಸಿ ಖರೀದಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ಆದರೆ ರೈತರು ತಂದ ಮುಸುಕಿನಜೋಳವನ್ನು ವಾರದ ನಂತರ ತನ್ನಿ ಎನ್ನುತ್ತಾರೆ. ಈ ದಿಸೆಯಲ್ಲಿ ರೈತರು ಹಗಲಿರುಳು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೆಲ ರೈತರು ಪತ್ರಿಕೆಯೊಂದಿಗೆ ಅಳಲು ತೊಡಿಕೊಂಡರು.
ಅಲ್ಲದೆ ದಿನ ಒಂದಕ್ಕೆ 2000 ರು.ನಂತೆ 50 ಕೆಜಿ ಚೀಲ ಪಡೆಯುತ್ತಿದ್ದು, ಅದರಲ್ಲಿ ಬಹುತೇಕ ವರ್ತಕರಿಗೆ ಸೇರಿದ ಜೋಳವಿದೆ. ವರ್ತಕರು ರೈತರ ಹೊಲ ಗದ್ದೆ ಬಳಿ ಬಂದು 1000 ರು.ಗೆ ಪಡೆಯುತ್ತಾರೆ ಹಾಗೂ ಎಪಿಎಂಸಿ ಬಗ್ಗೆ ನಿರ್ಲಕ್ಷ್ಯದ ಮಾತುಗಳನ್ನು ಆಡಿ ರೈತರಿಂದ ಜೋಳ ಖರೀದಿ ಮಾಡುವ ಹುನ್ನಾರ ಮಾಡುತ್ತಿದ್ದಾರೆ ಎಂದು ದೂರಿದರು.
ಕೃಷಿ ಅಧಿಕಾರಿ ನಟರಾಜ್ ಮಾತನಾಡಿ, ನಾವು ಸರಿಯಾದ ರೀತಿಯಲ್ಲಿ ಪ್ರಮಾಣ ಪತ್ರ ಹೊಂದಿದ ರೈತರಿಂದ ಮಾತ್ರ ಮುಸುಕಿನ ಜೋಳ ಖರೀದಿ ಮಾಡುತ್ತಿದ್ದು, ಯಾವ ಪ್ರಮಾಣ ಪತ್ರವಿಲ್ಲದ ರೈತರಿಂದ ಜೋಳವನ್ನು ಪಡೆಯುತ್ತಿಲ್ಲ, ಉತ್ತಮವಾಗಿರುವ ಜೋಳವನ್ನು ಪಡೆಯುತ್ತಿದ್ದು, ದಿನ ಒಂದಕ್ಕೆ 2000 ಸಾವಿರ 50 ಕೆಜಿ ಚೀಲ ಪಡೆಯಲಾಗಿದೆ ಎಂದರು.
ಮುಂದಿನ ಫೆಬ್ರವರಿ 18ರ ತನಕ ರೈತರಿಗೆ ಜೋಳ ತರಲು ಅವಕಾಶ ನೀಡಲಾಗಿದೆ. ಅಲ್ಲದೆ ಇಲ್ಲಿಯ ತನಕ 35 ಸಾವಿರ ಬ್ಯಾಗ್, ಅಂದರೆ 18 ಸಾವಿರ ಕ್ವಿಂಟಲ್ ಖರೀದಿ ಮಾಡಿದ್ದು, ಸುಮಾರು 2.50 ಕೋಟಿ ವಹಿವಾಟು ನಡೆದಿದೆ. ವರ್ತಕರ ಯಾವ ಲಿಂಕ್ ಇಲ್ಲ ಎಂದು ಸ್ಪಷ್ಟಪಡಿಸಿದರು.