ಸರ್ಕಾರದಿಂದ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಕಡೆಗಣನೆ: ರಾಜಶೇಖರಮೂರ್ತಿ
ಹಾಸನ: ರಾಜ್ಯ ಸರ್ಕಾರ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ಕಡೆಗಣಿಸಿದೆ ಎಂದು ಡಿವೈಎಸ್ಐ ರಾಜ್ಯ ಕಾರ್ಯದರ್ಶಿ ಬಿ. ರಾಜಶೇಖರಮೂರ್ತಿ ಆರೋಪಿಸಿದರು.
ಚನ್ನರಾಯಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 350 ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ 10650 ಅತಿಥಿ ಉಪನ್ಯಾಸಕರಿದ್ದು ಅವರಿಗೆ ವೇತನ ನೀಡಿಲ್ಲ. ಸರ್ಕಾರ ಸಮಸ್ಯೆ ಬಗೆಹರಿಸುತ್ತದೆ ಎಂಬ ನಂಬಿಕೆ ಹುಸಿಯಾಗಿದೆ 10-15 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯ ಮಾಡುತ್ತಿದ್ದವರ ಸ್ಥಿತಿ ಕಷ್ಟವಾಗಿದೆ ಎಂದು ಹೇಳಿದರು.ಆಂಧ್ರಪ್ರದೇಶ, ತಮಿಳುನಾಡು, ಕೇರಳ, ತ್ರಿಪುರ ಮತ್ತು ಗುಜರಾತ್ ರಾಜ್ಯಗಳಲ್ಲಿ ಯುಜಿಸಿ ನಿಯಮದ ಪ್ರಕಾರ ಅತಿಥಿ ಉಪನ್ಯಾಸಕರ ನೇಮಕವಾಗಿದೆ ಅವರಿಗೆ ವೇತನ 20ಸಾವಿರದಿಂದ ಆರಂಭವಾಗುತ್ತದೆ ಆದರೆ ರಾಜ್ಯದ ಚಿತ್ರಣ ಬೇರೆಯಾಗಿದ್ದು ಇಲ್ಲಿನ ಅತಿಥಿ ಉಪನ್ಯಾಸಕರಿಗೆ ವೇತನ 1,500 ರಿಂದ ಆರಂಭವಾಗುತ್ತದೆ.
ಬಿಜೆಪಿ ಸರ್ಕಾರ 58 ಕೋಟಿ ಹಾಗೂ ಈಗಿನ ಕಾಂಗ್ರೆಸ್ ಸರ್ಕಾರ 28 ಕೋಟಿ ಹಣವನ್ನು ಅತಿಥಿ ಉಪನ್ಯಾಸಕರ ವೇತನಕ್ಕಾಗಿ ಬಿಡುಗಡೆ ಮಾಡಿದ್ದರೂ ತಲುಪಿಲ್ಲ. ಪ್ರತಿವರ್ಷ ಅತಿಥಿ ಉಪನ್ಯಾಸಕರ ಬದಲಾವಣೆ ಮಾಡುವುದು, ಭದ್ರತೆ ಇಲ್ಲವಾಗಿದೆ. ಇಷ್ಟೆಲ್ಲಾ ದುಸ್ಥಿತಿ ಸಮಸ್ಯೆ ನಡುವೆ ಹೊಸದಾಗಿ ಸರ್ಕಾರ 132 ಹೊಸ ಕಾಲೇಜು ಆರಂಭಿಸಲು ಹೊರಟಿದೆ. 5625 ಹುದ್ದೆ ಖಾಲಿ ಇದೆ ಎಂದು ವಿವರಿಸಿದರು.
ಈ ಬಗ್ಗೆ ಜು.27ರಿಂದ ರಾಜ್ಯಾದ್ಯಂತ ತರಗತಿಗಳನ್ನು ಬಹಿಷ್ಕರಿಸಿ ಮುಖ್ಯಮಂತ್ರಿ ಮನೆ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಹೇಳಿದ್ದಾರೆ. ಡಿವೈಎಸ್ಐ ಜಿಲ್ಲಾ ಅಧ್ಯಕ್ಷ ಶಾಮ್ಹಮೀದ್, ವಾಸುದೇವ್, ವಾಸು ಇನ್ನೂ ಮೊದಲಾದವರು ಇದ್ದರು.