ಆರ್ಥಿಕ ಮಂಜೂರಾತಿ, ಭೂಸ್ವಾಧೀನಕ್ಕೆ ಆಗ್ರಹ
ಕ.ಪ್ರ.ವಾರ್ತೆ ಹಾಸನ ಜ. 20
ತಾಲೂಕಿನ ದಂಡಿಗನಹಳ್ಳಿ ಹೋಬಳಿ ಕಾಚೇನಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳ್ಳಬೇಕಾದರೆ ಆರ್ಥಿಕ ಮಂಜೂರಾತಿ ಜತೆಗೆ ಅರಣ್ಯ ಇಲಾಖೆಯ ಅನುಮತಿ ಅತಿ ಮುಖ್ಯವಾಗಿದ್ದು, ಜಿಲ್ಲಾಧಿಕಾರಿಗಳು ಈ ಬಗ್ಗೆ ಅರಣ್ಯ ಇಲಾಖೆಗೆ ಪತ್ರ ವ್ಯವಹಾರ ನಡೆಸಿ ಭೂಸ್ವಾಧೀನಕ್ಕೆ ಅನುವು ಮಾಡಬೇಕು ಎಂದು ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿ ಅಧ್ಯಕ್ಷ ಹಾಗೂ ಹೊಳೆ ನರಸೀಪುರದ ಶಾಸಕ ಎಚ್.ಡಿ. ರೇವಣ್ಣ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಒತ್ತಾಯ: ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರ ತಂಡ ತಾಲೂಕಿನ ದಂಡಿಗನಹಳ್ಳಿ ಹೋಬಳಿ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ, ಸಮಿತಿಯ ಅಧ್ಯಕ್ಷರಾದ ರೇವಣ್ಣ, ರೈತರ ಸಮಸ್ಯೆಗಳನ್ನು ಆಲಿಸಿ, ಭೂಸ್ವಾಧೀನಕ್ಕೆ ಅನುವು ಮಾಡುವಂತೆ ಅವರು ಒತ್ತಾಯಿಸಿದರು.
ಪರಿಶೀಲನೆ: ಕುಂಬೇನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಕಾಚೇನಹಳ್ಳಿ ಬಳಿ ನಿರ್ಮಿಸಿರುವ ನದಿಯಿಂದ ನೀರನ್ನು ಪಡೆದು ನೀರೆತ್ತುವ ವ್ಯವಸ್ಥೆ ಕಲ್ಪಿಸಿರುವ ಜಾಕ್ವೆಲ್, ಅದಕ್ಕೆ ಅಳವಡಿಸಿರುವ ಪೈಪ್ಲೈನ್, ಹಾಗೂ ಮೋಟಾರ್ ಪಂಪ್ಗಳನ್ನು ಪರಿಶೀಲಿಸಿದ ನಂತರ ಬಿಟ್ಟಗೌಡನಹಳ್ಳಿ ಬಳಿ ನಿರ್ಮಿಸಿರುವ ನಾಲಾ ತೊಟ್ಟಿಯ ಬಳಿಗೆ ಸಮತಿ ಸದಸ್ಯರುಗಳಾದ ಶಾಸಕರಾದ ಮೋಟಮ್ಮ, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜು ಅವರು ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಲೆಕ್ಕ ಪತ್ರ ಸಮಿತಿ ಪರಿಶೀಲಿಸಿತು.
ಶಿಫಾರಸಿಗೆ ಆಗ್ರಹ: ಕಳೆದ 20 ವರ್ಷಗಳಿಂದ ಬಂದ ಸರ್ಕಾರಗಳು ಅಲ್ಪ ಹಣ ನೀಡುತ್ತಿರುವುದರಿಂದ ಕಾಮಗಾರಿಯಲ್ಲಿ ವಿಳಂಬವಾಗಿದ್ದು, ಮುಖ್ಯಮಂತ್ರಿಗಳು ಹೆಚ್ಚು ಅನುದಾನ ನೀಡುವಂತೆ ಸಮಿತಿ ಶಿಪಾರಸು ಮಾಡಬೇಕು ಎಂದು ರೈತರು ಆಗ್ರಹಿಸಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಕಾಮಗಾರಿಗಾಗಿ ಹೆಚ್ಚು ಹಣ ನೀಡಿದ್ದು, ಈ ನಿಟ್ಟಿನಲ್ಲಿ ಟೆಂಡರ್ ಕರೆದು ಕೆಲವು ಕಾಮಗಾರಿಯನ್ನು ಪೂರ್ಣಗೊಳಿಸಿದ್ದರೂ, ಅದರ ಗುಣಮಟ್ಟ ಸರಿಯಿಲ್ಲದ ಕಾರಣ ಮಳೆ ನೀರಿಗೆ ಕೆಲವೆಡೆಗಳಲ್ಲಿ ಎಂಬಾಕ್ಮೆಂಟ್ಗಳು ಕುಸಿದಿವೆ. ಇನ್ನೂ ಕೆಲವೆಡೆಗಳಲ್ಲಿ ಕಾಲುವೆಗಳು ಬಿರುಕು ಬಿಟ್ಟಿರುವುದರಿಂದ ನೀರು ಮುಂದೆ ಹೋಗಲು ಸಾಧ್ಯವಿಲ್ಲ. ಕಾಮಗಾರಿಗಾಗಿ ಹಣ ತರುವುದು ಮುಖ್ಯವಲ್ಲ. ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸುವುದು ಶಾಸಕರ ಕರ್ತವ್ಯವಾಗಿದೆ ಎಂದು ಎಚ್.ಡಿ. ರೇವಣ್ಣ ಅವರಿಗೆ ರೈತರು ಮನವಿ ಮಾಡಿದರು.
ಅರಣ್ಯ ಇಲಾಖೆ ಅನುಮತಿಯಿಲ್ಲ: ಲೆಕ್ಕ ಪತ್ರ ಸಮಿತಿ ಅಧ್ಯಕ್ಷ ಹಾಗೂ ಹೊಳೆನರಸೀಪುರ ಕ್ಷೇತ್ರದ ಶಾಸಕರೂ ಆದ ಎಚ್.ಡಿ ರೇವಣ್ಣ ಅವರು ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸರ್ಕಾರ ಹಣ ನೀಡುವಂತೆ ಮನವಿ ಮಾಡಲಾಗಿದೆ. ಆದರೆ ಕಾಮಗಾರಿ ಮಾಡಲು ಭೂಸ್ವಾಧೀನದ ಅಡ್ಡಿ ಬಂದಿದ್ದು, ಬಹುತೇಕ ಕಾಮಗಾರಿ ಅಪೂರ್ಣಗೊಳ್ಳಲು ಸರ್ಕಾರದಿಂದ ಅರಣ್ಯ ಇಲಾಖೆ ಜಮೀನಿನಲ್ಲಿ ನಾಲೆ ಕಾಮಗಾರಿಗಾಗಿ ಅಡಚಣೆಯಾಗಿರುವುದು.
ಅವಕಾಶ ನೀಡಿಲ್ಲ: ಅರಣ್ಯ ಇಲಾಖೆಯ ಅನುಮತಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದು, ಕಾಲುವೆ ತೋಡಿಸಲು ಅನುಮತಿ ಸಿಗದಿರುವುದರಿಂದ ಹಿನ್ನಡೆಯಾಗಿದೆ. ಕಾಚೇನಹಳ್ಳಿ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಜಾಕ್ವೆಲ್ನಿಂದ ನೀರೆತ್ತಲು ವಿದ್ಯುತ್ ಸಂಪರ್ಕದ ಕೊರತೆ ಕಾರಣವಾಗಿದೆ. ವಿದ್ಯುತ್ ಲೈನ್ ಸಂಪರ್ಕಕ್ಕೆ ಗುತ್ತಿಗೆ ನೀಡಲಾಗಿದೆಯಾದರೂ ಲೈನ್ ಎಳೆಯಲು ಅರಣ್ಯ ಇಲಾಖೆ ಮರಗಳನ್ನು ಕಡಿದು ಸ್ಥಳಾವಕಾಶ ನೀಡಿಲ್ಲ ಎಂದು ತಿಳಿಸಿದರು.
1991ರಲ್ಲಿ ರು. 8.9 ಕೋಟಿಗೆ ಆರ್ಥಿಕ ಮಂಜೂರಾತಿ ನೀಡಿ ಮೊದಲ ಹಂತದ ಕಾಮಗಾರಿ ಪ್ರಾರಂಭಿಸಲು ಸರ್ಕಾರ ಒಪ್ಪಿಗೆ ನೀಡಿತು. ಆದರೆ, ತಾವು ದಂಡಿಗನಹಳ್ಳಿ ಹಾಗೂ ಗಂಡಸಿ ಹೋಬಳಿಗಳಿಗೆ ನೀರು ನೀಡುವ ಉದ್ದೇಶದಿಂದ ಎರಡು ಮತ್ತು ಮೂರನೇ ಹಂತದಲ್ಲಿ 12,600 ಎಕರೆ ಪ್ರದೇಶಕ್ಕೆ ನೀರನ್ನು ಉಪಯೋಗಿಸಿಕೊಳ್ಳಲು ಅವಕಾಶವನ್ನು ಸರ್ಕಾರದಿಂದ ಒಪ್ಪಿಗೆ ಪಡೆದು ಕಾಮಗಾರಿಯನ್ನು ಕೈ ಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಅನ್ಬುಕುಮಾರ್, ಹಾಸನ ಉಪ ವಿಭಾಗಾಧಿಕಾರಿ ಶರತ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್, ತಹಸೀಲ್ದಾರ್ ಡಾ. ನಾಗರಾಜು ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಇದ್ದರು.
ರೈತರ ಅಳಲು
ಯೋಜನೆಗೆ ಚಾಲನೆ ದೊರೆತು 22 ವರ್ಷಗಳು ಸಂದರೂ ರೈತರ ಜಮೀನಿಗೆ ನೀರು ನೀಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಕಳೆದ 15 ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡುತ್ತಲೆ ಬಂದಿದ್ದರೂ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡರು.