ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಮಗಾರಿ ತ್ವರಿತಗೊಳಿಸದಿದ್ದರೆ ಹೋರಾಟ: ಎಚ್ಚರಿಕೆ

Rashmi Kasaragodu
Updated On : 21 Jan 2014, 1:09 am


ಬೇಲೂರು: ತಾಲೂಕಿನ ಮಾದೀಹಳ್ಳಿ, ಹಳೆಬೀಡು ಹಾಗೂ ಜಾವಗಲ್ ಹೋಬಳಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದ್ದು, ಏತನೀರಾವರಿ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಮುಗಿಸದಿದ್ದರೆ ನೀರು ಹರಿಸುವವರೆಗೆ ನಿರಂತರವಾಗಿ ಹೋರಾಟ ನಡೆಸುವುದಾಗಿ ಶಿವಪುರ ಮಹಾಮನೆಯ ಶ್ರೀ ಬಸವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಹಳೆಬೀಡು ಮತ್ತು ಮಾದೀಹಳ್ಳಿ ಹೋಬಳಿ ಏತ ನೀರಾವರಿಯ ಕಾಮಗಾರಿ ವಿಳಂಬವನ್ನು ಖಂಡಿಸಿ ತಾಲೂಕು ಕಚೇರಿ ಮುತ್ತಿಗೆ ಹಾಗೂ ಅನಿರ್ದಿಷ್ಠಾವಧಿ ಮುಷ್ಕರವನ್ನು ತಾಲೂಕು ರೈತ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ರಾಜ್ಯ ರೈತ ಸಂಘ, ಯಗಚಿ ಶಾಶ್ವತ ನೀರಾವರಿ ಹೋರಾಟ ಸಮಿತಿ, ಹಳೆಬೀಡು ಮತ್ತು ಮಾದೀಹಳ್ಳಿ ಹಾಗೂ ಬೇಲೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಜಾವಗಲ್ ಹೋಬಳಿ ರೈತರಿಂದ ಯಗಚಿ ಏತನೀರವಾರಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.  
ಇಲ್ಲೇ ಸತ್ಯಾಗ್ರಹ: ಕಳೆದ ಸೆಪ್ಟೆಂಬರ್ನಲ್ಲಿ ಏತನೀರಾವರಿಗಾಗಿ ಹೋರಾಟ ನಡೆಸಿದ ಸಂದರ್ಭದಲ್ಲಿ ಶಾಸಕರು ಹಾಗೂ ಯಗಚಿ ಅಧಿಕಾರಿಗಳು ಡಿಸೆಂಬರರ್ತಿಂಗಳಲ್ಲಿ ಕಾಮಗಾರಿ ಮುಗಿಸುವುದಾಗಿ ಹೇಳಿದ್ದರು. ಆದರೆ ಇದುವರೆಗೆ ಏತ ನೀರಾವರಿ ಕಾಮಗಾರಿಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ. ನಮ್ಮ ಭಾಗದ ಜನತೆ ಕುಡಿಯುವ ನೀರಿಗಾಗಿ ದಿನನಿತ್ಯ ಗೋಳಾಡುತ್ತಿದ್ದು ಶಾಸಕರು ಹಾಗೂ ಅಧಿಕಾರಿಗಳು ಇದೇ ಧೋರಣೆ ಮುಂದುವರೆಸಿದಲ್ಲಿ ತಾಲೂಕು ಕಚೇರಿ ಮುಂಭಾಗ ರೈತರು ದನ ಕರುಗಳೊಂದಿಗೆ ಬಿಡಾರ ಹೂಡಿ ಇಲ್ಲೇ ನಿರಂತರವಾಗಿ ಸತ್ಯಾಗ್ರಹ ನಡೆಸುವುದಾಗಿ ಹೇಳಿದರು.
ವಿಷಾದನೀಯ: ಕೊಳಗುಂದ ಮಠದ ಜಯ ಚಂದ್ರ ಶೇಖರ ಸ್ವಾಮೀಜಿ ಮಾತನಾಡಿ, ಏತ ನೀರಾವರಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಒತ್ತಾಯಿಸಿದರಲ್ಲದೆ ಯಗಚಿ ಜಲಾಶಯ ನೀರು ಬಲಾಡ್ಯರ ಪಾಲಾಗಿದ್ದು ತಾಲೂಕಿನಲ್ಲಿ ನಮ್ಮ ನೀರನ್ನು ನಾವು ಪಡೆದುಕೊಳ್ಳಲು ಹೋರಾಟದ ಹಾದಿ ಹಿಡಿಯಬೇಕಾಗಿರುವುದು ವಿಷಾದನೀಯ ಎಂದರು.
ಶಾಸಕರ ವಿರುದ್ಧ ಕಿಡಿ: ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪಿ. ಕುಮಾರ್ ಮಾತನಾಡಿ, ಶಾಸಕರು ಡಿಸೆಂಬರ್ ಅಂತ್ಯದೊಳಗೆ ಏತನೀರಾವರಿ ಯೋಜನೆ ಆರಂಭಿಸಿಲಾಗುತ್ತದೆ ಎಂದು ಹೇಳಿದ್ದರೂ, ಅದರೆ ಅಧಿಕಾರಿಗಳ ದಿವ್ಯ ನಿರ್ಲಕಲ್ಷದಿಂದ ಕಾಮಾಗಾರಿ ಭಾರಿ ಪ್ರಮಾಣದಲ್ಲಿ ವಿಳಂಭವಾಗಿದೆ ಎಂದ ಅವರು ಸರ್ಕಾರಕ್ಕೆ ನಮ್ಮ ಕೂಗು ಕೇಳಬೇಕು, ಈ ದಿಸೆಯಲ್ಲಿ ತಾಲ್ಲೂಕು ಕಚೇರಿ ಬಂದ್ಮಾಡಲು ತಹಸೀಲ್ದಾರ್ ಮತ್ತು ಪೊಲೀಸರು ನಮಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಶಾಸಕರ ಕುಮ್ಮಕಿನಿಂದ ಇಂದು ಭಾರಿ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ. ನಮಗೆ ನ್ಯಾಯ ನೀಡುವ ತನಕ ತಾಲ್ಲೂಕು ಕಚೇರಿ ಬಿಟ್ಟು ಕದಲಿಕೆ ಇಲ್ಲ, ಜೈಲಿಗೆ ಹೋಗಲು ಸಿದ್ಧ ಎಂದು ಸವಲು ಹಾಕಿದ ಅವರು, ಶಾಸಕರು ಖುದ್ದು ರೈತರಿಗೆ ಉತ್ತರ ಹೇಳಲಿ, ಇಲ್ಲ ರಾಜಿನಾಮೆ ನೀಡಲಿ ಎಂದು ಕಿಡಿಕಾರಿದರು.
ಯಗಚಿ ಹೋರಾಟ ಸಮಿತಿ ಅಧ್ಯಕ್ಷ ಗುರುಸ್ವಾಮೇಗೌಡ್ರು, ಕಾರ್ಯದರ್ಶಿ ಶಿವಪ್ಪ,  ಗಡಿ ಮಲ್ಲಿಕಾರ್ಜುನ್, ರೈತ ಸಂಘದ ತಾಲೂಕು ಅಧ್ಯಕ್ಷ ಪರಮೇಶ್, ಕಾರ್ಯದರ್ಶಿ ಭೋಗಮಲ್ಲೇಶ್, ಸಂಘಟನಾ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ, ತಮ್ಮೇಗೌಡ್ರು, ಜಾವಗಲಲ್ದಯಾನಂದ್, ಇಂದ್ರೇಶ್, ಬಿಜೆಪಿ ತಾಲೂಕು ಅಧ್ಯಕ್ಷ ಅಡಗೂರು ಆನಂದ್, ಕಾರ್ಯದರ್ಶಿ ಬೆಣ್ಣೂರು ಪೂರ್ಣೇಶ್ ಇತರರು ಇದ್ದರು.
ಮಾತಿನ ಚಕಮಕಿ: ಯಗಚಿ ಜಲಾಶಯದಿಂದ ಏತನೀರಾವರಿ ಮೂಲಕ ಹಳೇಬೀಡು ಮತ್ತು ಮಾದಿಹಳ್ಳಿ ಹೋಬಳಿಗೆ ನೀರು ಹರಿಯುವ ಯೋಜನೆ ವಿಳಂಬ ನೀತಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹೋಬಳಿಯ ಮಠಧೀಶರ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಬಂದ್ ಮಾಡಲು ರೈತ ಮುಖಂಡರು ಮುಂದಾದಾಗ ತಹಸೀಲ್ದಾರ್ ಮತ್ತು ಪೊಲೀಸ್ ಸಿಬ್ಬಂದಿ ತಡೆಯುವ ಪ್ರಯತ್ನ ಮಾಡಿದಾಗ ರೈತರು ಹಾಗೂ ಅಧಿಕಾರಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.
ಯಗಚಿ ಏತ ನೀರಾವರಿ ಮುಖ್ಯ ಎಂಜಿನಿಯರ್ ಮಹೇಶ್ ಸ್ಥಳಕ್ಕೆ ಆಗಮಿಸಿ ಮಾತನಾಡಿ,  ಏತ ನೀರಾವರಿ ಕಾಮಗಾರಿ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ನಿಧಾನವಾಗಿದ್ದು ಈಗ ಎಲ್ಲಾ ತೊಂದರೆಗಳು ಮುಗಿಯುತ್ತಾ ಬಂದಿದ್ದು ಮಾರ್ಚ್ ತಿಂಗಳ ಒಳಗೆ ಸಂಪೂರ್ಣ ಗೊಳಿಸುವ ಭರವಸೆ ನೀಡಿದರು.
ಯಗಚಿ ಹೋರಾಟ ಸಮಿತಿ ಅಧ್ಯಕ್ಷ ಗುರುಸ್ವಾಮೇಗೌಡ್ರು, ಕಾರ್ಯದರ್ಶಿ ಶಿವಪ್ಪ,  ಉಪಾಧ್ಯಕ್ಷ ಕೆ.ಪಿ ಕುಮಾರ್, ಗಡಿ ಮಲ್ಲಿಕಾರ್ಜುನ್, ರೈತ ಸಂಘದ ತಾಲೂಕು ಅಧ್ಯಕ್ಷ ಪರಮೇಶ್, ಕಾರ್ಯದರ್ಶಿ ಭೋಗಮಲ್ಲೇಶ್, ಸಂಘಟನಾ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ, ತಮ್ಮೇಗೌಡ್ರು, ಜಾವಗಲಲ್ದಯಾನಂದ್, ಇಂದ್ರೇಶ್, ಬಿಜೆಪಿ ತಾಲೂಕು ಅಧ್ಯಕ್ಷ ಅಡಗೂರು ಆನಂದ್, ಕಾರ್ಯದರ್ಶಿ ಬೆಣ್ಣೂರು ಪೂರ್ಣೇಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement