ಲಾರಿಗೆ ಎರಡು ಬೈಕ್ಗಳ ಡಿಕ್ಕಿ: ಇಬ್ಬರ ದುರ್ಮರಣ
ಆಲೂರು: ತಾಲೂಕಿನ ಮಗ್ಗೆ ರಸ್ತೆಯ ಬಸವೇಶ್ವರ ಗ್ರಾಮದ ಬಳಿ ಲಾರಿ ಹಾಗೂ ಎರಡು ಬೈಕ್ಗಳ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟ ಪರಿಣಾಮ ರೊಚ್ಚಿಗೆದ್ದ ಗ್ರಾಮಸ್ಥರು ಶವಗಳನ್ನು ತೆರವುಗೊಳಿಸಲು ಬಿಡದೆ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಸಂಜೆ ನಡೆದಿದೆ.
ಆಲೂರಿನಿಂದ ಎರಡು ಬೈಕ್ಗಳಲ್ಲಿ ತಮ್ಮ ಗ್ರಾಮಗಳಿಗೆ ಹೋಗುತ್ತಿದ್ದ ಶಿವಸಾಗರ ಗ್ರಾಮದ ನಿಂಗರಾಜು(50) ಹಾಗು ಭರತೂರು ಗ್ರಾಮವಾಸಿ ನಿಡನೂರು ಗ್ರಾಮದ ರಮೇಶ್(40) ಎಂಬುವವರೇ ಮೃತಪಟ್ಟ ದುರ್ದೈವಿಗಳಾಗಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಸವೇಶ್ವರ ಗ್ರಾಮದ ಬಳಿ ಇರುವ ತಿರುವಿನಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಮರಗಳಿರುವುದರಿಂದ ಎದುರಿನಿಂದ ವೇಗವಾಗಿ ಬರುತ್ತಿದ್ದ ಶುಂಠಿ ತುಂಬಿದ್ದ ಲಾರಿ ಕಾಣದೆ ನಿಂಗರಾಜು ಎಂಬುವವರ ಬೈಕ್ ಲಾರಿಗೆ ತಾಗಿದ ಪರಿಣಾಮ ಅವರ ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟರೆ ಮತ್ತೊಂದು ಬೈಕ್ ಸವಾರ ರಮೇಶ್ ನಿಯಂತ್ರಿಸುವ ಭರದಲ್ಲಿ ಲಾರಿಗೆ ಬೈಕ್ ತಾಗಿದ ಪರಿಣಾಮ ತಲೆ ನೆಲಕ್ಕೆ ಬಡಿದು ಸ್ಥಳದಲ್ಲೇ ಮೃತಪಟ್ಟರು.
ಇದರಿಂದ ಉದ್ರಿಕ್ತರಾದ ಸುತ್ತಮುತ್ತಲ ಗ್ರಾಮಸ್ಥರು ರಸ್ತೆಯಿಂದ ಶವಗಳನ್ನು ತೆರವುಗೊಳಿಸಲು ಬಿಡದೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ದುರಸ್ತಿ ಕಾಣದ ರಸ್ತೆ: ಈ ರಸ್ತೆ ಕಳೆದ 25 ವರ್ಷಗಳಿಂದಲೂ ದುರಸ್ತಿ ಕಾಣದೆ, ಮಂಡಿಯುದ್ದದ ಹಳ್ಳಗಳಿಂದಾಗಿ ಹಲವಾರು ಮಂದಿ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಈಗ ಈ ರಸ್ತೆ ಪುನರರ್ನಿರ್ಮಾಣಗೊಂಡಿದ್ದು ರಸ್ತೆಯೇನೊ ಉತ್ತಮವಾಗಿದೆ. ಆದರೆ ರಸ್ತೆಯ ಇಕ್ಕೆಲಗಳಲ್ಲಿರುವ ಮರಗಳು ಜನ ಸಾಮಾನ್ಯರ ಪ್ರಾಣಗಳನ್ನು ಬಲಿ ತೆಗೆದುಕೊಳ್ಳುತ್ತಿವೆ ಏಕೆಂದರೆ ಮರಗಳು ರಸ್ತೆಗೆ ಅಂಟಿಕೊಂಡಂತಿದ್ದು ತಿರುವುಗಳಲ್ಲಿ ಎದುರಿನಿಂದ ಬರುವ ವಾಹನಗಳು ಕಾಣುವುದಿಲ್ಲ ಅಲ್ಲದೆ ವಾಹನ ಸವಾರರು ಮರಗಳಿಗೆ ಗುದ್ದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಈ ಮರಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಹಲವು ಬಾರಿ ಅರಣ್ಯ ಇಲಾಖೆಯವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಗ್ರಾಮಸ್ಥರ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸ್ಥಳಕ್ಕಾಗಮಿಸಿದ ಸಕಲೇಶಪುರ ಡಿ.ವೈ.ಎಸ್.ಪಿ.ಕುಮಾರಸ್ವಾಮಿ ಪ್ರತಿಭಟನಾಕಾರರ ಮನವೊಲಿಸಿ ಶವಗಳನ್ನು ರಸ್ತೆಯಿಂದ ತೆರವುಗೊಳಿಸಿದರು.