ಸಮ ಸಮಾಜಕ್ಕಾಗಿ ವೈಜ್ಞಾನಿಕ ಹಾದಿ ತೋರಬೇಕಿದೆ
ಕ.ಪ್ರ.ವಾರ್ತೆ ಹಾಸನ ಜ. 20
ಸಮ ಸಮಾಜವನ್ನು ನಿರ್ಮಾಣ ಮಾಡುವ ವೈಜ್ಞಾನಿಕ ಹಾದಿಯನ್ನು ತೋರಿಸುವ ಹೊಣೆಗಾರಿಕೆ ಬಿಜಿವಿಎಸ್ ತೋರಬೇಕಿದೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಎಚ್.ಎ. ಅಹಮದ್ ಹೇಳಿದರು.
ನಗರದ ಎಸ್.ಜಿ.ಆರ್ ಶಾಲೆಯ ಡಾ. ವಿನೋದ್ ರೈನಾ ಸಭಾಂಗಣದ ಡಾ.ಜಿ.ಎಸ್.ಎಸ್. ವೇದಿಕೆಯಲ್ಲಿ ಭಾನುವಾರ ನಡೆದ ಜಿಲ್ಲಾ ಭಾರತ ಜ್ಞಾನ ವಿಜ್ಞಾನ ಸಮಿತಿಯ 5ನೇ ಜಿಲ್ಲಾ ಸಮ್ಮೇಳನದಲ್ಲಿ ಅವರು ಮಾತನಾಡಿದ ಅವರು, ದೇಶದ ಜನರ ಬಡತನ ಅವರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಬದುಕನ್ನು ಕಿತ್ತುಕೊಂಡಿದೆ. ಈ ಬಡತನದ ಮೂಲ ಬೇರುಗಳು ಎಲ್ಲಿವೆ ಎನ್ನುವ ಜ್ಞಾನ ನಮ್ಮ ಜನರಿಗೆ ಇಲ್ಲ. ಆ ಬೇರುಗಳನ್ನು ಹುಡುಕಬೇಕಿದೆ ಎಂದರು.
23 ವರ್ಷಗಳಿಂದಲೂ ಭಾರತ ಜ್ಞಾನ ವಿಜ್ಞಾನ ಸಮಿತಿಯು ಜಿಲ್ಲಾದ್ಯಾಂತ ಸಾವಿರಾರು ಜನರ ನಡುವೆ ನಿರಂತರವಾಗಿ ವೈಜ್ಞಾನಿಕ, ವೈಚಾರಿಕ, ಶೈಕ್ಷಣಿಕ ಚಟುವಟಿಕೆಯನ್ನು ನಡೆಸಿಕೊಂಡು ಬರುತ್ತಿದೆ ಎಂದರು.
ಒತ್ತಾಯ: ಬಿಜಿವಿಎಸ್ ಈಗ ಸಾಮಾಜಿಕ ಅಭ್ಯುದಯ ಹಾಗೂ ಜನ ಸಾಮಾನ್ಯರ ಶೈಕ್ಷಣಿಕ ಅಭ್ಯುದಯದ ಚಟುವಟಿಕೆಯನ್ನು ಪರಿಸರ, ಶೈಕ್ಷಣಿಕ, ಖಗೋಳದ ಚಟುವಟಿಕೆ ಜೊತೆ ಹಮ್ಮಿಕೊಳ್ಳುವ ಪ್ರಸಂಗ ಬಂದಿದೆ. ಹೀಗಾಗಿ 5ನೇ ಸಮ್ಮೇಳನ ಹಾಸನದ ಜಲಸಂಪನ್ಮೂಲ ರಕ್ಷಿಸಲು, ಆನೆ ಮತ್ತಿತರ ಕಾಡುಪ್ರಾಣಿಗಳಿಗೆ ಸೂಕ್ತ ವಸತಿ ಸೌಲಭ್ಯ ಒದಗಿಸಿ ಜನರ ಹಿತ ಕಾಯಲು, ಹಾಸನ ನಗರ ಮತ್ತು ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಸುಸಜ್ಜಿತ ವಿಜ್ಞಾನ ಕಾಲೇಜುಗಳನ್ನು ತೆರೆಯಲು ಒತ್ತಾಯಿಸುತ್ತಿದೆ ಎಂದು ಹೇಳಿದರು.
5ನೇ ಜಿಲ್ಲಾ ಸಮ್ಮೇಳನವು 13 ಜನರ ನೂತನ ಜಿಲ್ಲಾ ಕಾರ್ಯಕಾರಿ ಸಮಿತಿಯನ್ನು ಚುನಾಯಿಸಿತು. ಅಧ್ಯಕ್ಷರಾಗಿ ಅರಕಲಗೂಡಿನ ಪಿ.ಇ.ಎಸ್ ಐ.ಟಿ.ಐ ಪ್ರಾಂಶುಪಾಲ ಎಚ್.ಟಿ. ಗುರುರಾಜು, ಉಪಾಧ್ಯಕ್ಷರಾಗಿ ಎಂ. ಕೃಷ್ಣ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ವಿ. ಶ್ರೀನಿವಾಸ್ ಮತ್ತು ಸಿದ್ದೇಶ್ವರ ಐ.ಟಿ.ಐನ ಕಿರಿಯ ತರಬೇತಿ ಅಧಿಕಾರಿ ಅಹಮದ್ ಹಗರೆ ಕಾರ್ಯದರ್ಶಿಯಾಗಿ ಸಾಫ್ಟೆಕ್ ಕಂಪ್ಯೂಟರ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಜಿ. ಗೋಪಾಲಕೃಷ್ಣ ಜಂಟಿ ಕಾರ್ಯದರ್ಶಿಗಳಾಗಿ ಎಸ್.ಜಿ.ಆರ್ ಶಾಲೆಯ ಮುಖ್ಯೋಪಾಧ್ಯಾಯಿನಿ ಮಮತ ಶಿವು, ಶಾಂತಿನಗರದ ವೇದಶ್ರಿರಾಜ್ ಮತ್ತು ಆಲೂರಿನ ಶಿಕ್ಷಕ ಅಣ್ಣಪ್ಪ, ಖಜಾಂಚಿಯಾಗಿ ಶ್ರೀಮತಿ ಕವಿತ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಆಲೂರು ಬಿ.ಆರ್.ಪಿ. ಪ್ರಮೀಳ, ಉಪನ್ಯಾಸಕ ಜಯಪ್ರಕಾಶ್, ಹೊ.ನ.ಪುರ ಇಂಜಿನೀಯರ್ ಹರೀಶ್, ಬೇಲೂರಿನ ಸಿ.ಸೌಭಾಗ್ಯ, ಸರ್ವಾನುಮತದಿಂದ ಆಯ್ಕೆಯಾದರು.
ಕೆ.ಎಸ್. ರವಿಕುಮಾರ್ ಕೋಮು ಸೌಹಾರ್ಧತೆ ಕುರಿತು ಪಿ.ಪಿ.ಟಿ. ಉಪನ್ಯಾಸ ನೀಡಿದರು. ನೂತನ ಕಾರ್ಯದರ್ಶಿ ಬಿ.ಜಿ.ಗೋಪಾಲಕೃಷ್ಣ ವಂದಿಸಿದರು. ಗೆಲುವು ನಮ್ಮದು ಹಾಡಿನ ಮೂಲಕ ಸಮ್ಮೇಳನಕ್ಕೆ ಮುಕ್ತಾಯ ಹಾಡಲಾಯಿತು.