ಹೆಚ್ಚು ಪರಿಹಾರಕ್ಕೆ ಆಗ್ರಹ: ಗ್ರಾಮಸ್ಥರಿಂದ ಪ್ರತಿಭಟನೆ
ಕ.ಪ್ರ.ವಾರ್ತೆ ಹಾಸನ ಜ. 20
ಮಂಗಳೂರು ಬಂದರಿನಿಂದ ಹಾಸನ ನಗರದ ಸಮೀಪಕ್ಕೆ ಎಲ್ಪಿಜಿ ಕೊಳವೆ ಮಾರ್ಗದಲ್ಲಿ (ಗ್ಯಾಸ್ಲೈನ್) ರೈತರ ಜಮೀನಿನ ಮೂಲಕ ಹಾದು ಹೋಗುತ್ತಿದ್ದು, ಅದಕ್ಕಾಗಿ ಸ್ವಾಧೀನ ಮಾಡಿಕೊಳ್ಳುವ ಒಂದು ಎಕರೆಗೆ ಕನಿಷ್ಠ ರು. 1 ಕೋಟಿ ರು. ಪರಿಹಾರ ನೀಡಲು ಆಗ್ರಹಿಸಿ ಮತ್ತು ಪೈಪ್ಲೈನ್ ಕಾಮಗಾರಿ ನಿರ್ವಹಿಸುತ್ತಿದ್ದ ಜೆಸಿಬಿ ಯಂತ್ರ ತಡೆದು ಸಾತೇನಹಳ್ಳಿ ಗ್ರಾಮಸ್ಥರು ಸೋಮವಾರ ಪ್ರತಿಭಟಿಸಿದರು.
ವಾಗ್ವಾದ: ತಾಲೂಕಿನ ಸಾತೇನಹಳ್ಳಿ ಮಾರ್ಗವಾಗಿ ಎಲ್.ಪಿ.ಜಿ. ಕೊಳವೆ ಮಾರ್ಗ ಪೈಪ್ ಅಳವಡಿಸಿ ಅನಿಲ ಸಾಗಿಸುವ ಯೋಜನೆಗಾಗಿ ಹಾಸನದ ಸುತ್ತಮುತ್ತ ಇರುವ ಗ್ರಾಮದ ಜಮೀನುಗಳ ಮೂಲಕ ಹಾದು ಹೋಗುತ್ತಿದೆ.
ಈ ಹಿಂದೆ ಕೂಡ ಕಾಮಗಾರಿಗೆ ಅಡ್ಡಿ ಪಡಿಸಲಾಗಿತ್ತು. ಈಗ ಏಕಾಏಕಿ ಕಾಮಗಾರಿ ಪ್ರಾರಂಭಿಸಲು ನಾಲ್ಕು ಜೆಸಿಬಿ ಮೂಲಕ ತರಲಾಗಿತ್ತು. ಅದನ್ನು ಗ್ರಾಮಸ್ಥರು ತಡೆದು ಅಡ್ಡಿಪಡಿಸಿದರು.
ದೂರು: ಇದೇ ವೇಳೆ ಅಧಿಕಾರಿಗಳೊಂದಿಗೆ ಕೆಲ ಸಮಯ ಗ್ರಾಮಸ್ಥರು ವಾಗ್ವಾದ ಕೂಡ ನಡೆಸಿದರು. ಭೂ ಪರಿಹಾರ ನೀಡುವುದಕ್ಕಾಗಿ 2 ತಿಂಗಳ ಹಿಂದೆ ಜಿಲ್ಲಾಧಿಕಾರಿಗಳು ಸಭೆ ಕರೆದಿದ್ದರು. ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಎಚ್.ಪಿಸಿಎಲ್) ಅಧಿಕಾರಿಗಳು, ಭೂಸ್ವಾಧೀನ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಹಾಗೂ ರೈತರು ಸೇರಿ ಸಭೆಯಲ್ಲಿ ಚರ್ಚಿಸಲಾಯಿತು. ರೈತರಿಗೆ ಈಗಿನ ಮಾರುಕಟ್ಟೆ ದರದಲ್ಲಿ ಭೂಮಿಗೆ ಪರಿಹಾರ ಕೊಡುವ ತೀರ್ಮಾನ ಮಾಡಲಾಗಿತ್ತು. ನಂತರ ರೈತರ ಗಮನಕ್ಕೆ ತರದೆ ಕಡಿಮೆ ಬೆಲೆಯನ್ನು ನಿಗದಿ ಮಾಡಲಾಗಿದೆ ಎಂದು ದೂರಿದರು.
ಎಚ್ಚರಿಕೆ: ನೂರಾರು ಜನ ಗ್ರಾಮಸ್ಥರು ಪೈಪ್ಲೈನ್ ಪೊಲೀಸ್ ಭದ್ರತೆಯಲ್ಲಿ ಕಾಮಗಾರಿ ಪ್ರಾರಂಭಿಸಲು ಬಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಉಸ್ತುವರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ರೈತರು ಸೇರಿ ಸಭೆ ಮಾಡಿ ಸೂಕ್ತ ಪರಿಹಾರ ನೀಡಲು ನಿರ್ಧರಿಸಬೇಕು. ಇಲ್ಲದಿದ್ದರೆ, ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಿಡಿ: ಪಿಎಂಪಿ ಕಾಯಿದೆ 1962ರ ಅಡಿಯಲ್ಲಿ ಶೇ. 10ರಂತೆ 1 ಎಕರೆಗೆ ಭೂ ಪರಿಹಾರ ರು. 40 ಸಾವಿರ. ಈ ಮೊತ್ತಕ್ಕೆ ಶೇ. 20ರಷ್ಟು ಸೋಲೇಶಿಯಂ ಮತ್ತು ಶೇ. 10ರಷ್ಟು ಎಕ್ಸ್ಗ್ರೇಷಿಯಾ ರು. 12,800 ಆಗಿದ್ದು, 1 ಎಕರೆಗೆ ಒಟ್ಟು ರು. 52,800 ಪರಿಹಾರ ಧನವನ್ನು ನೀಡಲಾಗುತ್ತದೆ. ತೀರಾ ಕಡಿಮೆ ಪರಿಹಾರವನ್ನು ಕೊಡಲಾಗುತ್ತಿದೆ ಎಂದು ಗ್ರಾಮಸ್ಥರು ಕಿಡಿಕಾರಿದರು.
ಪ್ರಸ್ತುತದಲ್ಲಿ ಸಾತೇನಹಳ್ಳಿ ಸುತ್ತ ಮುತ್ತ ಒಂದು ಎಕರೆಗೆ ಮಾರುಕಟ್ಟೆ ಬೆಲೆ ರು. 2 ಕೋಟಿ ಆಗುತ್ತದೆ.
ಒಂದು ಎಕರೆಗೆ ಕೇವಲ ರು. 53 ಸಾವಿರ ಪರಿಹಾರ ನೀಡುತ್ತಿರುವುದು ಅವೈಜ್ಞಾನಿಕವಾಗಿದೆ ಎಂದು ದೂರಿದರು.
ಕಾಮಗಾರಿ ಸ್ಥಗಿತ: ಎಕರೆಗೆ ಕೋಟಿಗಟ್ಟಲೆ ಬೆಲೆ ಬಾಳುವ ಜಮೀನನ್ನು ಕಡಿಮೆ ದರ ನಿಗದಿ ಮಾಡಲಾಗಿದೆ ಎಂದರು. ಬಲವಂತವಾಗಿ ಪೈಪ್ಲೈನ್ ಕೆಲಸ ಮಾಡಲು ಮುಂದಾದರೆ ರೈತರು ಎಲ್ಲಾ ಸೇರಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ನಂತರ ಕಾಮಗಾರಿಯನ್ನು ಸ್ಥಗಿತಗೊಳಿಸಿದರು.
ನಿವೇಶನವನ್ನೂ ನೀಡಬೇಕು: ಗ್ರಾಮಸ್ಥರಿಗೆ ವೈಜ್ಞಾನಿಕ ಪ್ರಸ್ತುತ ಮಾರುಕಟ್ಟೆ ದರ ನೀಡಿ ಜೊತೆಗೆ ಸ್ವಾಧೀನಕ್ಕೆ ಬದಲಾಗಿ ಹಾಸನದಲ್ಲಿ ತಲಾ 60್ಢ40 ಅಡಿ ನಿವೇಶನವನ್ನು ಉಚಿತವಾಗಿ ಕೊಡಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ನಾರಾಯಣಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಅಶೋಕ್, ರಂಗಸ್ವಾಮಿ, ದೇವರಾಜ್, ತಿಮ್ಮೇಗೌಡ, ಕೆಂಚಶೆಟ್ಟಿ, ರಂಗೇಗೌಡ, ಬಾಳೇಗೌಡ, ನಿಂಗರಾಜ್ ಇತರರು ಇದ್ದರು.