'ಅಧಿಕಾರಿಗಳ ಮೇಲೆ ಜೆಡಿಎಸ್ ಒತ್ತಡ'
ಹಾಸನ: ಉದ್ಯೋಗ ಖಾತ್ರಿ ಯೋಜನೆಯ ಕೆಲಸಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಇರುವ ಕಡೆಗಳಿಗೆ ನೀಡದಂತೆ ಶಾಸಕ ಎಚ್.ಡಿ. ರೇವಣ್ಣ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದು, ಈ ವಿರುದ್ಧ ಹೋರಾಟ ನಡೆಸುವುದಾಗಿ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಉದ್ಯೋಗ ಖಾತ್ರಿ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಈ ವಿಚಾರದಲ್ಲಿ ರೇವಣ್ಣ ಅವರು ಮೂಗು ತೋರಿಸುತ್ತಿರುವುದು ಸರಿಯಲ್ಲ. ಬನವಾಸೆ ಗ್ರಾಮದ ಕೆರೆ ಕಾಮಗಾರಿಯು ಉದ್ಯೋಗ ಖಾತ್ರಿಗೆ ಮಂಜೂರಾಗಿದ್ದು, ಇಲ್ಲಿಗೆ ನೀಡುವಂತಹ ಕೂಲಿ ಕೆಲಸವನ್ನು ಬೇರೆಡೆಗೆ ವರ್ಗಾಹಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿದರು.
ಶಾಸಕರ ವರ್ತನೆ ಅನುಚಿತ: ಜೊತೆಗೆ ರಾಜೀವ್ಗಾಂಧಿ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರವನ್ನು ನೀಡುವಂತಹ ಕೆಲಸ ಗ್ರಾಮಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರದಾಗಿದೆ. ಅದರಲ್ಲಿಯೂ ಸಹ ರೇವಣ್ಣ ಅವರು ಮೂಗು ತೂರಿಸಿದ್ದಾರೆ. ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಕೆಲಸ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳ ಕೆಲಸವಾಗಿದೆ. ಆದರೆ ಶಾಸಕರು ಎಲ್ಲಾ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದು ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಗೌಡ, ಬಾಲಶಂಕರ್ ಹಾಗೂ ಇತರರು ಇದ್ದರು.