ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಏತ ನೀರಾವರಿಗೆ ಕಾಂಗ್ರೆಸ್ ಕೊಡುಗೆ ಏನು?

Rashmi Kasaragodu
Updated On : 22 Jan 2014, 1:26 am

ಚನ್ನರಾಯಪಟ್ಟಣ:ಕಾಚೇನಹಳ್ಳಿ ಏತ ನೀರಾವರಿ ಯೋಜನೆಗೆ ಕಾಂಗ್ರೆಸ್ ಪಕ್ಷ ಹಾಗೂ ಜೆಡಿಎಸ್ ಪಕ್ಷದ ಕೊಡುಗೆ ಏನು ಎಂಬುದನ್ನು ಬಹಿರಂಗವಾಗಿ ಚರ್ಚೆಯಾಗಲಿ ಎಂದು ಶಾಸಕ ಎಚ್.ಡಿ. ರೇವಣ್ಣ ಒತ್ತಾಯಿಸಿದರು.
ಸವಾಲು: ತಾಲೂಕಿನ ಉದಯಪುರದಲ್ಲಿ ದಂಡಿಗನಹಳ್ಳಿ ಹೋಬಳಿ ರೈತರ ಪಹಣಿ ತಿದ್ದುಪಡಿ ಹಾಗೂ ವಿವಿದ ಯೋಜನೆಯ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದ ಅವರು, 1991ರಲ್ಲಿ ಕಾಚೇನಹಳ್ಳಿ ಏತ ನೀರಾವರಿ ಯೋಜನೆಗೆ ಮಂಜೂರಾತಿ ದೊರೆತಿದ್ದು, ನಂತರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು ಈ ಕ್ಷೇತ್ರದಲ್ಲಿ 10 ವರ್ಷ ಶಾಸಕರಾಗಿದ್ದಾರೆ. ಆ ಸಮಯದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಅವರ ಕೊಡುಗೆ ಏನು ಎಂಬುದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.
ಕಾಮಗಾರಿಗಾಗಿ ಶ್ರಮಿಸಿದ್ದೇನೆ: 1991ರಲ್ಲಿ ಮಂಜೂರಾತಿ ಸಿಕ್ಕಿದ ಸಂದರ್ಭದಲ್ಲಿ ಕೇವಲ ರು. 8 ಕೋಟಿ ಹಣವನ್ನು ಯೋಜನೆಗೆ ಮೀಸಲಿಟ್ಟು, 1200 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ನೀಡಲು ಒಪ್ಪಿಗೆ ದೊರೆತಿದೆ. ಆ ನಂತರದಲ್ಲಿ ಬಂದ ಸರ್ಕಾರಗಳು  ಯೋಜನೆಗೆ ಹಣ ನೀಡಿಲ್ಲ. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ರು. 160 ಕೋಟಿಗಳನ್ನು ತಾವು ಮಂಜೂರು ಮಾಡಿಸಿ 12 ಸಾವಿರ ಎಕರೆ ಜಮೀನನ್ನು  ನೀರಾವರಿ ಪ್ರದೇಶಕ್ಕೆ ಸೇರಿಸಿ, 1ನೇ, 2ನೇ ಹಂತದ ಕಾಮಗಾರಿ ತ್ವರಿತವಾಗಿ ನಡೆಯಲು ಮುಂದಾಗಿದ್ದೇನೆ ಎಂದು ತಿಳಿಸಿದರು.
ಜಗ್ಗುವುದಿಲ್ಲ: ಹೋಬಳಿಯಲ್ಲಿ ತಮ್ಮ ಅವದಿಯಲ್ಲಿ ಆಗುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ಸಹಿಸದ ಕೆಲ ಕಾಂಗ್ರೆಸಿಗರು ಗಲಾಟೆ ಮಾಡಿಸಲು ಮುಂದಾಗಿದ್ದಾರೆ. ಆದರೆ ತಾವು ಇದಕ್ಕೆ ಜಗ್ಗುವುದಿಲ್ಲ ಎಂದರು.
ಆಗ್ರಹಿಸಿದ್ದೇನೆ: ಕಾಚೇನಹಳ್ಳಿ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ಕಳೆದ ಸಾಲಿನಲ್ಲಿ ಬಿಜೆಪಿ ಸರ್ಕಾರ ಈ ಯೋಜನೆಗೆ ಹಣ ನೀಡಲಿಲ್ಲ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಹಲವು ಬಾರಿ ಹಣ ನೀಡುವಂತೆ ಒತ್ತಾಯಿಸಿದ್ದರೂ ಹಣ ನೀಡದ ಕಾರಣ, ಲೆಕ್ಕ ಪತ್ರ ಸಮಿತಿ ಕಡೆಯಿಂದ ಒತ್ತಡ ಹೇರಲು ಸಮಿತಿ ಸದಸ್ಯರನ್ನು ಕರೆತಂದು ಸರ್ಕಾರಕ್ಕೆ ಒತ್ತಾಯಿಸಲು ಆಗ್ರಹಿಸಿದ್ದೇನೆ  ಎಂದು ತಿಳಿಸಿದರು. ೈ


'ಫಲಾನುಭವಿಗಳಿಗೆ ಅಧಿಕಾರಿಗಳಿಂದ ಲಂಚದ ಕಾಟ'
ಸರ್ಕಾರ ಬಡವರಿಗಾಗಿ ಹಲವು ಯೋಜನೆಗಳನ್ನು ರೂಪಿಸಿದ್ದು, ಅವುಗಳು ನೇರವಾಗಿ ಜನತೆಗೆ ತಲುಪಬೇಕು. ಇಂತಹ ಕಾರ್ಯವನ್ನು ಅಧಿಕಾರಿಗಳು ಮಾಡುವುದನ್ನು ಬಿಟ್ಟು ಫಲಾನುಭವಿಗಳಿಂದ ಹಣಕ್ಕಾಗಿ ಪೀಡಿಸುತ್ತಿರುವ ಪ್ರಸಂಗಗಳ ಬಗ್ಗೆ ತಮಲ್ಲಿ ತಿಳಿಸಿದ್ದು, ಬಸವಶ್ರೀ ಯೋಜನೆಯಲ್ಲಿ ಮನೆಗಳನ್ನು ನೀಡಲು ಆನೆಕೆರೆ ಗ್ರಾಮ ಪಂಚಾಯಿತಿ ಪಿಡಿಒ ಎರಡು ಸಾವಿರ ರು.ಗಳನ್ನು ಲಂಚವಾಗಿ ಕೇಳುತ್ತಿದ್ದರೆ, ಸರ್ಕಾರ ಹಿರಿಯ ನಾಗರೀಕರಿಗೆ ನೀಡುತ್ತಿರುವ ವೇತನ ರು. 500ನಲ್ಲಿ ರು. 200ಗಳನ್ನು ಸಾತೇನಹಳ್ಳಿ ಪೋಸ್ಟ್ಮ್ಯಾನ್ ಲಂಚವಾಗಿ ತೆಗೆದುಕೊಂಡಿದ್ದಾನೆ ಎಂದು ಆರೋಪಿಸಿದರು.
ಇದಲ್ಲದೆ ಪೋಸ್ಟ್ಮ್ಯಾನ್ಗಳು ರಾಷ್ಟ್ರೀಯ ಕುಟುಂಬ ನೆರವು ಯೋಜನೆ ಸೇರಿದಂತೆ ಮಾಸಾಶನಗಳಲ್ಲಿ ಲಂಚವನ್ನು ಪೀಡಿಸುತ್ತಿರುವ ಬಗ್ಗೆ ಜನತೆ ದೂರು ನೀಡಿದ್ದು, ಕೂಡಲೆ ಪೋಸ್ಟ್ಮ್ಯಾನ್ಗಳ ಸಭೆ ಕರೆದು ಅವರಿಗೆ ಎಚ್ಚರಿಕೆ ನೀಡಲಾಗುವುದು ಎಂದು ತಿಳಿಸಿದರು. ತಹಸೀಲ್ದಾರ್ ಡಾ.ನಾಗರಾಜು ಇದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement