ಪ್ಲಾಸ್ಟಿಕ್ ವರ್ತರಿಗೆ ನಗರಸಭೆ ಅಧಿಕಾರಿಗಳ ಕಾಟ
ಹಾಸನ: ಪ್ಲಾಸ್ಟಿಕ್ ಮಾರಾಟ ಮಾಡಬಾರದು ಅಂತ ನಗರಸಭೆ ಅಧಿಕಾರಿಗಳು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಪ್ಲಾಸ್ಟಿಕ್ ವರ್ತಕರು ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿ ಗೋಪಾಲಕೃಷ್ಣ ಅವರಿಗೆ ಮನವಿ ನೀಡಿದರು.
ಆರೋಪ: ಕಳೆದ ಹಲವು ವರ್ಷಗಳಿಂದ ಪ್ಲಾಸ್ಟಿಕ್ ಪ್ಯಾಕೇಜಿಂಗ್ ವಸ್ತುಗಳನ್ನು ನಗರದಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ, ಈಗ ನಗರಸಭೆ ಅಧಿಕಾರಿಗಳು ಪ್ಲಾಸ್ಟಿಕ್ಗಳನ್ನು ಮಾರಾಟ ಮಾಡದಂತೆ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ನಮ್ಮಲ್ಲಿ ಇರುವಂತಹ 40 ಮೈಕ್ರಾನ್ಗೂ ಮೇಲ್ಪಟ್ಟ ಪ್ಲಾಸ್ಟಿಕ್ ಪ್ಯಾಕೇಜಿಂಗ್ ವಸ್ತುಗಳನ್ನು ನಮಗೆ ಯಾವುದೇ ಮಾಹಿತಿಯನ್ನು ನೀಡದೆ ನಮ್ಮಿಂದ ಪ್ಲಾಸ್ಟಿಕ್ಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ನಿಂದನೆ:ಈ ಬಗ್ಗೆ ನಗರಸಭೆ ಅಧಿಕಾರಿಗಳು ನಮಗೆ ಯಾವುದೇ ರೀತಿಯ ರಶೀತಿಯಾಗಲಿ ತೂಕದ ಪ್ರಮಾಣವನ್ನಾಗಲಿ ಸಹ ಕೊಡದೆ ಪ್ಲಾಸ್ಟಿಕ್ ವರ್ತಕರಿಂದ ಪ್ಲಾಸ್ಟಿಕ್ ಪ್ಯಾಕೇಜಿಂಗ್ ವಸ್ತುಗಳನ್ನು ವಶಪಡಿಕೊಂಡು ಹೋಗುತ್ತಿದ್ದಾರೆ. ಜೊತೆಗೆ ಅಧಿಕಾರಿಗಳು ಪ್ಲಾಸ್ಟಿಕ್ ಅನ್ನು ರೈಡ್ ಮಾಡುವ ನೆಪದಲ್ಲಿ ಬಾಯಿಗೆ ಬಂದಂತೆ ವರ್ತಕರಿಗೆ ನಿಂದಿಸುತ್ತಾರೆ ಎಂದರು.
ಒತ್ತಾಯ: ಆದ್ದರಿಂದ ಯಾವ ರೀತಿಯ ಪ್ಲಾಸ್ಟಿಕ್ ಪ್ಯಾಕೇಜಿಂಗ್ ವಸ್ತುಗಳನ್ನು ಮಾರಾಟ ಮಾಡುಬೇಕು ಹಾಗೂ ನಮಗೆ ಈ ವಸ್ತುಗಳ ಮಾರಾಟ ಮಾಡುವ ಬಗ್ಗೆ ಸರಿಯಾದ ತಿಳುವಳಿಕೆಯನ್ನು ಲಿಖಿತ ರೂಪದಲ್ಲಿ ವರ್ತಕರ ಸಂಘಕ್ಕೆ ತಿಳಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಬಾಉಲ್ಲಾ ಖಾನ್, ಮೋಟೋ ರಾಮ್ ಜೀ, ಬಾರಸ್, ಬೈರಾರಾಮ್, ಪಾರಸ್ ಸುತ್ತಾರ್, ಲಕ್ಷ್ಮಣ್, ವೀರು ಇತರರು ಇದ್ದರು.