ಬಾಲಕನ ನೆರವಿಗೆ ಮಕ್ಕಳ ರಕ್ಷಣಾ ಘಟಕ
ಕ.ಪ್ರ.ವಾರ್ತೆ ಚನ್ನರಾಯಪಟ್ಟಣ ಜ. 21
ಪಟ್ಟಣದಲ್ಲಿ ಕಳೆದ ಆರು ತಿಂಗಳ ಹಿಂದೆ ಸಂಭವಿಸಿದ ಅನಿಲ ಸೋರಿಕೆ ದುರಂತದಲ್ಲಿ ಉಂಟಾದ ಬೆಂಕಿ ಅವಗಡದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟು, ಬದುಕುಳಿದರೂ ಸುಟ್ಟ ಗಾಯಗಳೊಂದಿಗೆ ಜೀವನ ನಿರ್ವಹಿಸಲು ಆಗದ ಪರಿಸ್ಥಿತಿಯಲ್ಲಿ ಶಿಕ್ಷಣದಿಂದ ವಂಚಿತವಾಗಿರುವ ಅದೇ ಕುಟುಂಬದ ಬಾಲಕನ ನೆರವಿಗೆ ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕವು ಮುಂದಾಗಿದೆ.
ಕನ್ನಡಪ್ರಭ ಜ. 20ರಂದು 'ಬಾಲಕನಿಗೆ ಇನ್ನೂ ಸಿಗದ ಪರಿಹಾರ' ಎಂಬ ಶೀರ್ಷಿಕೆಯಡಿಯಲ್ಲಿ ಮಾನವೀಯ ನೆಲೆಗಟ್ಟಿನ ಈತನ ಬಗ್ಗೆ ವರದಿಯೊಂದನ್ನು ಪ್ರಕಟಿಸಿತ್ತು.
ಇಲ್ಲಿನ ಅಂಬೇಡ್ಕರ್ ನಗರದ ಬಡ ದಲಿತ ಕುಟುಂಬವೊಂದರ ಮನೆಯಲ್ಲಿ ಆಕಸ್ಮಿಕವಾಗಿ ಅನಿಲ ಉಂಟಾದ ಅನಿಲ ಸೋರಿಕೆಯಿಂದಾಗಿ ಹೊತ್ತಿಕೊಂಡ ಬೆಂಕಿಯಿಂದಾಗಿ ಒಂದೇ ಕುಟುಂಬದ ಐವರೂ ಸದಸ್ಯರೂ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಕೇವಲ ನಾಲ್ಕು ದಿನಗಳಲ್ಲಿ ನಾಲ್ವರು ಮೃತಪಟ್ಟಿದ್ದರು. ಇದೇ ದುರಂತದಲ್ಲಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕ ರವಿ (14)ಗೆ ಸಂಬಂಧಿಕರು ಹೆಚ್ಚಿನ ಚಿಕಿತ್ಸೆ ಕೊಡಿಸಿದ ಬಳಿಕ ಶೇ. 45ರಷ್ಟು ಸುಟ್ಟಗಾಯಗಳಿಂದ ಬದುಕುಳಿದಿದ್ದಾನೆ.
ವರದಿಯಲ್ಲಿ ಆಗ್ರಹ: ಬದುಕುಳಿದಿರುವ ಬಾಲಕ ರವಿ ತನ್ನ ಅಪ್ಪ, ಅಮ್ಮ, ಅಣ್ಣ ಮತ್ತು ಅಕ್ಕ ಎಲ್ಲರನ್ನೂ ಕಳೆದುಕೊಂಡು ಗಾರೆ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿರುವ ತನ್ನ ಚಿಕ್ಕಪ್ಪನ ಆಶ್ರಯದಲ್ಲಿದ್ದಾನೆ. ಬದುಕಿದ್ದರೂ ಸತ್ತವನಂತೆ ಜೀವನ ನಡೆಸಬೇಕಾದ ಅನಿವಾರ್ಯತೆಯಲ್ಲಿರುವ ಬಾಲಕನಿಗೆ ಮಾನವೀಯತೆಯ ನೆಲೆಯಲ್ಲಾದರೂ ಸರ್ಕಾರ, ಸಂಘ- ಸಂಸ್ಥೆಗಳು ಜನಪ್ರತಿನಿಧಿಗಳು ಕಣ್ತೆರೆದು ನೋಡಿ ಸಹಾಯ ಹಸ್ತ ನೀಡುವಂತೆ 'ಕನ್ನಡಪ್ರಭ' ತನ್ನ ವರದಿಯಲ್ಲಿ ಆಗ್ರಹಿತ್ತು. ಈ ವರದಿಯನ್ನು ಕಂಡು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕವು ಸದ್ಯ ತನ್ನ ಚಿಕ್ಕಪ್ಪನ ಆಶ್ರಯದಲ್ಲಿ ಸಂಕಷ್ಟದಲ್ಲಿ ಬದುಕು ದೂಡುತ್ತಿರುವ ಬಾಲಕನನ್ನು ಭೇಟಿ ಮಾಡಿ ವಸ್ತುಸ್ಥಿತಿಯನ್ನು ಪರಿಶೀಲನೆ ನಡೆಸಿತು.
ಅಧಿಕಾರಿ ಸ್ಪಷ್ಟನೆ: ಕುಟುಂಬದ ಎಲ್ಲಾ ಸದಸ್ಯರನ್ನೂ ದುರಂತದಲ್ಲಿ ಕಳೆದುಕೊಂಡು ಸುಟ್ಟ ಗಾಯಗಳೊಂದಿಗೆ ಬದುಕುಳಿದಿರುವ ಬಾಲಕ ರವಿ, ಶೇ. 45ರಷ್ಟು ಸುಟ್ಟ ಗಾಯದಿಂದಾಗಿ ತನ್ನ ಶಿಕ್ಷಣವನ್ನು ಮುಂದುವರೆಸಲು ಆಗದಿರುವ ವಿಷಯವನ್ನು ಕಂಡು ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕವು ಬಾಲಕ ರವಿಗೆ ಶಿಕ್ಷಣವನ್ನು ಮುಂದುವರೆಸಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದೆ ಎಂಬುದಾಗಿ ಘಟಕದ ರಕ್ಷಣಾಧಿಕಾರಿ ರಶ್ಮಿ ತಿಳಿಸಿದ್ದಾರೆ.
ಅಲ್ಲದೇ ಈ ರೀತಿಯಾಗಿ ಪೋಷಕ ಅಥವಾ ತಂದೆ ತಾಯಿ ಇಲ್ಲದೇ ಸಂಬಂಧಿಕರ ಆಶ್ರಯದಲ್ಲಿ ಉಳಿದು ಶಿಕ್ಷಣವನ್ನು ಮುಂದುವರೆಸಲಾಗದ 18 ವರ್ಷದೊಳಗಿನ ಮಕ್ಕಳ ಶಿಕ್ಷಣಕ್ಕಾಗಿ ಮಾಹೆಯಾನ ಒಂದು ಸಾವಿರ ರು.ಗಳನ್ನು ಸದರಿ ಬಾಲಕನಿಗೆ 18 ವರ್ಷಗಳು ತುಂಬುವವರೆವಿಗೂ ನೀಡಲು ಇಲಾಖೆ ಮುಂದೆಬಂದಿರುವುದಾಗಿ ಘಟಕದ ರಕ್ಷಣಾಧಿಕಾರಿ ರಶ್ಮಿ ತಿಳಿಸಿದರು.
ಈ ಸಂದರ್ಭದಲ್ಲಿ ದುರಂತದಲ್ಲಿ ಬದುಕುಳಿದು ಜೀವನ ನಡೆಸಲು ಅಶಕ್ತನಾಗಿರುವ ಬಾಲಕನಿಗೆ ಅಗತ್ಯವಿರುವ ಹೆಚ್ಚಿನ ಚಿಕಿತ್ಸೆಯ ವಿವರ, ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳಿಗಾಗಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿ ವರದಿ ಸಿದ್ಧಪಡಿಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಇಲಾಖೆಯ ಜೊತೆಗೆ ಸಾಮಾಜಿಕ ಕಾರ್ಯಕರ್ತ ಶಿವಣ್ಣ, ಬಾಲಕನ ಚಿಕ್ಕಪ್ಪ ಶಿವು ಇದ್ದರು.