ಮುಂದುವರಿದ ಕಾಡಾನೆಗಳ ಹಾವಳಿ
ಎಚ್.ವಿ.ರಾಘವೇಂದ್ರ
ಆಲೂರು: ತಾಲೂಕಿನ ಕೆ. ಹೊಸಕೋಟೆ ಹೋಬಳಿಯ ಹಳ್ಳಿಯೂರು ಗ್ರಾಮದಲ್ಲಿ ಇರುವ ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರ ಕಾಫಿ ತೋಟದಲ್ಲಿ ಕಾಡಾನೆ ಕಂಡು ಹೆದರಿ ಗಾಬರಿಯಿಂದ ಓಡಿ ಹೋಗುವಾಗ ಕಾರ್ಮಿಕನೋರ್ವ ಬಿದ್ದು ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಚನ್ನಪ್ಪ (32) ಎಂಬವರೆ ಗಾಯಗೊಂಡ ವ್ಯಕ್ತಿಯಾಗಿದ್ದು, ಆತನನ್ನು ಆಸ್ಪತ್ರೆಗೆ ಅರಣ್ಯ ಇಲಾಖೆಯವರು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ರೈತರ ಆತಂಕ: ಬೆಳಗ್ಗೆ 8ರಲ್ಲಿ ಸೌದೆ ಕಡಿಯಲು ಹೋದ ಈತ ಒಂಟಿ ಸಲಗ ತೋಟದಲ್ಲಿಇರುವುದನ್ನು ಕಂಡು ಓಡುವ ಸಂದರ್ಭದಲ್ಲಿ ಗಾಯಗೊಂಡಿದ್ದಾನೆ. ತಾಲೂಕಿನ ಕೆಂಚಮ್ಮನಹೊಸಕೋಟೆ ಹಾಗೂ ಕುಂದೂರು ಹೋಬಳಿಗಳ ದೊಡ್ಡಬೆಟ್ಟ, ರಂಗನಬೆಟ್ಟ, ಕರಡಿಬೆಟ್ಟ ಹಾಗೂ ಉಂಬಳಿಬೆಟ್ಟ ಅರಣ್ಯ ಪ್ರದೇಶದಲ್ಲಿ ಪುನಃ ಕಾಡಾನೆ ದಾಳಿ ಪ್ರಾರಂಭವಾಗಿದ್ದು, ಈ ಭಾಗದ ಜನರದಲ್ಲಿ ಆತಂಕವನ್ನು ಉಂಟು ಮಾಡಿದೆ. ಕಳೆದ 2 ದಿನಗಳಿಂದಲೂ ಈ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದ್ದು, ಜನರು ವಿಪರೀತ ಆತಂಕಗೊಂಡಿದ್ದಾರೆ.
7 ದಿನ ತಡ: ಕಳೆದ ಗುರುವಾರ ಕಾಗನೂರು ಅರಣ್ಯ ಪ್ರದೇಶದಲ್ಲಿ ಕಾಡಾನೆಯೊಂದನ್ನು ಹಿಡಿದು ಕೊಡಗಿನ ಆನೆಧಾಮಕ್ಕೆ ಕರೆದೊಯ್ಯಲಾಗಿದ್ದು, ಇದರ ಬೆನ್ನಲ್ಲೇ ಆನೆ ದಾಳಿ ಪ್ರಾರಂಭವಾಗಿರುವುದು ಈ ಭಾಗದ ಜನರ ಆತಂಕವನ್ನು ಇಮ್ಮಡಿಗೊಳಿಸಿದೆ.
ಆನೆಗಳು ಇಲ್ಲ: ಈ ಸಂದರ್ಭದಲ್ಲಿ 2ನೇ ಬಾರಿಯೂ ಮರಿಯಾನೆಯನ್ನೇ ಹಿಡಿದಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎಲ್ಲಾ 25 ಕಾಡಾನೆಗಳನ್ನು ಕ್ಯಾಂಪ್ ತೆರವುಗೊಳಿಸದೆ ಹಿಡಿಯುವುದಾಗಿ ಭರವಸೆ ನೀಡಿ ಅರಣ್ಯ ಇಲಾಖೆಯವರು ಗ್ರಾಮಸ್ಥರನ್ನು ಸಮಾಧಾನಪಡಿಸಿದ್ದರು. ಆದರೆ ಹಿಡಿದ ಕಾಡಾನೆಯನ್ನು ಬಿಡುವ ನೆಪದಲ್ಲಿ ಮೂರು ಸಾಕಾನೆಗಳು ಜಾಗ ಖಾಲಿ ಮಾಡಿದರೆ ಉಳಿದ ಇನ್ನೆರಡು ಆನೆಗಳ ಪೈಕಿ ಆನೆ ಹಿಡಿಯುವ ಕಾರ್ಯಾಚರಣೆ ಸಂದರ್ಭದಲ್ಲಿ ಪ್ರಶಾಂತ ಆನೆಗೆ ಅರ್ಜುನ ಆನೆ ಕೋರೆಯಿಂದ ತಿವಿದ ಪರಿಣಾಮ ಪ್ರಶಾಂತ ಆನೆಯ ಹಿಂಭಾಗದಲ್ಲಿ ತೀವ್ರ ಗಾಯವಾಗಿ ಕಳೆದ 3 ದಿನಗಳಿಂದ ಜ್ವರ ಬಂದು ಅಸ್ವಸ್ಥಗೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಆನೆಯನ್ನು ಚಿಕಿತ್ಸೆ ಕೊಡಿಸಲು ಕೊಡಿಗಿನ ಮತ್ತಿಗೋಡು ಆನೆಧಾಮಕ್ಕೆ ಕಳುಹಿಸಿಕೊಡಲಾಗಿದೆ.
ಅಧಿಕಾರಿಗಳ ಉತ್ತರ: ಉಳಿದ 1 ಆನೆಯನ್ನು ಕೊಡಗಿನ ಕಟ್ಟೆಪುರ ಬಳಿ ಕ್ರಾಲ್ ನಿರ್ಮಿಸುವ ನೆಪದಲ್ಲಿ ಆನೆಯನ್ನು ಸಹ ಮಾಗಡಿಹಳ್ಳಿ ಕ್ಯಾಂಪ್ನಿಂದ ಕಳುಹಿಸಿಕೊಡಲಾಗಿದೆ. ಈ ಆನೆಗಳೊಂದಿಗೆ ಆನೆ ಕಾರ್ಯಾಚರಣೆಯೊಂದಿಗೆ ಬಂದಿದ್ದ ಮಾವುತರು, ಕಾವಾಡಿಗಳು, ಕಾಡುಕುರುಬರು ಜಾಗ ಖಾಲಿ ಮಾಡಿದ್ದು, ಈಗ ಮಾಗಿಡಹಳ್ಳಿ ಬಳಿ ಉಳಿದಿರುವುದು ಕೇವಲ ಖಾಲಿ ಟೆಂಟ್ಗಳಷ್ಟೇ. ಈ ಸಂಬಂಧವಾಗಿ ಡಿಎಫ್ಓ ಅಪ್ಪುರಾವ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದರೆ ಈಗ ಆನೆ ಹಿಡಿಯಲು ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಆನೆ ಕ್ಯಾಂಪ್ ಖಾಲಿಯಾಗಿರುವ ಬಗ್ಗೆ ಆರ್ಎಫ್ಓ ದೇವರಾಜ್ ಅವರನ್ನು ಕೇಳಿದರೆ ಎಲ್ಲಾ ಆನೆಗಳು ಇಲ್ಲೇ ಇವೆ. ಕ್ರಾಲ್ ನಿರ್ಮಿಸಿಲು ಕಟ್ಟೇಪುರಕ್ಕೆ ಒಂದಿಷ್ಟು ಹೋಗಿವೆ. ಉಳಿದವು ಕ್ಯಾಂಪ್ನಲ್ಲಿಯೇ ಇದ್ದಾವೆ ಎಂದು ತಿಳಿಸುತ್ತಾರೆ.
ಆನೆ ಹಿಡಿಯಲು ಆದೇಶ ಬರಬೇಕಾದರೆ ಮತ್ತೋಂದು ಜೀವ ಬಲಿಯಾಗಲೇ ಬೇಕೇ ಅಥವಾ ಪುನಃ ಕೋಟ್ಯಾಂತರ ರು.ಮೌಲ್ಯದ ಬೆಳೆ ನಷ್ಟವಾಗಲೇ ಎಂಬುದು ಈ ಭಾಗದ ಜನರ ಪ್ರಶ್ನೆಯಾಗಿದೆ.
ಆದ್ದರಿಂದ ಜನತೆ ರೊಚ್ಚಿಗೇಳುವ ಮೊದಲೇ ಖಾಲಿಯಾಗಿರುವ ಕ್ಯಾಂಪ್ಗೆ ಪುನಃ ಕನಿಷ್ಟ 10 ಆನೆಗಳನ್ನಾದರೂ ಕರೆತರಬೇಕು ಹಾಗೂ ಇನ್ನುಳಿದ ಮೂರು ಒಂಟಿ ಸಲಗವನ್ನು ಶೀಘ್ರ ಹಿಡಿಯುವ ಕಾರ್ಯಾಚರಣೆ ಪ್ರಾರಂಭಿಸಬೇಕಾಗಿದೆ.