ಲೋಹ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ
ಸಕಲೇಶಪುರ: ತಾಲೂಕಿನ ಬಾಳ್ಳುಪೇಟೆ ಗ್ರಾಮದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಏಕತಾ ಪ್ರತಿಮೆಗಾಗಿ ಲೋಹ ಸಂಗ್ರಹ ಕಾರ್ಯಕ್ರಮಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು.
ಬಾಳ್ಳುಪೇಟೆ ಗ್ರಾಮದ ಮುಖ್ಯ ವೃತ್ತದ ಬಳಿ ನಡೆದ ಬಹಿರಂಗಸಭೆಯಲ್ಲಿ ಬಿಜೆಪಿ ಮುಖಂಡ ಬಾಳ್ಳುಗೋಪಾಲ್ ಮಾತನಾಡಿ, ಭಾರತ ದೇಶದ ಉಕ್ಕಿನ ಮನುಷ್ಯ ಎನಿಸಿಕೊಂಡ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರನ್ನು ಪ್ರತಿಯೊಬ್ಬರೂ ನೆನೆಯಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮ: ಪಟೇಲ್ರಂಥ ವ್ಯಕ್ತಿಯ ಆದರ್ಶಗಳನ್ನು ನಮ್ಮ ಮುಂದಿನ ಪೀಳಿಗೆಯ ಮಕ್ಕಳು ಅಳವಡಿಸಿಕೊಳ್ಳಬೇಕಾದರೆ ಅವರ ಬಗ್ಗೆ ತಿಳಿದುಕೊಳ್ಳುವುದು ಬಹಳ ಅವಶ್ಯ. ಈ ನಿಟ್ಟಿನಲ್ಲಿ ನಮ್ಮ ದೇಶದ ಭಾವಿ ಪ್ರಧಾನಿಮಂತ್ರಿಯೆಂದೇ ಬಿಂಬಿತ ರಾಗಿರುವ ನರೇಂದ್ರ ಮೋದಿ ಸರ್ದಾರ ವಲ್ಲಭಬಾಯಿ ಪಟೇಲರ ಜಗತ್ತಿನ ಅತಿ ದೊಡ್ಡ ಪ್ರತಿಮೆಯನ್ನು ಗುಜರಾತ್ನಲ್ಲಿ ನಿರ್ಮಿಸಲು ಹೊರಟಿದ್ದು, ಇದಕ್ಕಾಗಿ ಈ ದೇಶದ ಮೂಲೆ ಮೂಲೆಗಳಿಂದ ತುಂಡು ಕಬ್ಬಿಣವನ್ನು ಸಾಮಾನ್ಯ ಜನತೆಯಿಂದ ಸಂಗ್ರಹಿಸಲಾಗುತ್ತಿದೆ. ಪ್ರತಿಯೊಬ್ಬರೂ ಇಂತಹ ಓಂದು ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕೆಂದು ಕರೆ ನೀಡಿದರು.
ನೂತನವಾಗಿದೆ: ಬಾಳ್ಳುಪೇಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪರಮೇಶ್ವರಪ್ಪ ಮಾತನಾಡಿ, ಸರ್ದಾರ್ ವಲ್ಲಭಬಾಯಿ ಪಟೇಲರನ್ನು ಈ ದೇಶದ ಪ್ರತಿಯೊಬ್ಬ ಪ್ರಜೆಯೂ ನೆನೆಯಬೇಕಾಗಿದ್ದು ಈ ನಿಟ್ಟಿನಲ್ಲಿ ಮಾಡುತ್ತಿರುವ ಲೋಹ ಸಂಗ್ರಹ ಕಾರ್ಯಕ್ರಮ ನೂತನವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ವಾದ್ಯ ವೃಂದವನ್ನು ಬಳಸಲಾಗಿತ್ತು ಹಾಗೂ ಎತ್ತಿನಗಾಡಿಯಲ್ಲಿ ಬಾಳ್ಳುಪೇಟೆ ಗ್ರಾಮ ದಲ್ಲಿ ಲೋಹ ಸಂಗ್ರಹ ಮಾಡಲಾಯಿತು.
ಈ ಸಂದರ್ಭದಲ್ಲಿ ಶಂಭುಶ್ರೀ ಶಿವಾಚಾರ್ಯ ಸ್ವಾಮೀಜಿ, ಬಿಜೆಪಿ ಹಿರಿಯ ಮುಖಂಡ ನಾರಾಯಣ ಆಳ್ವ, ಬಾಳ್ಳುಪೇಟೆ ಬಿಜೆಪಿ ಮುಖಂಡ ರವಿಕುಮಾರ್, ಅಣ್ಣಪ್ಪ, ಪ್ರಗತಿಪರ ರೈತ ವೈ.ಸಿ ರುದ್ರಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಕೃಷ್ಣೇಗೌಡ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್, ನಿವೃತ್ತ ಶಿಕ್ಷಕ ದಿವಾಕರ್, ಲೋಹ ಸಂಗ್ರಹ ಸಮಿತಿಯ ಸುಧೀರ್ ಭಟ್ ಇದ್ದರು.