ಸರ್ಕಾರಿ ಖಾಲಿ ಹುದ್ದೆ ಶೀಘ್ರ ಭರ್ತಿ ಮಾಡಿ
ಕ.ಪ್ರ.ವಾರ್ತೆ ಹಾಸನ ಜ. 21
ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್. ವೃತ್ತ, ಬಿ.ಎಂ.ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ರಾಜ್ಯದ ಹಿತಾಸಕ್ತಿ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯಾದ್ಯಂತ ಸರ್ಕಾರ ಖಾಲಿ ಹುದ್ದೆಗಳ ಭರ್ತಿಗಾಗಿ ಅಭಿಯಾನ ಪ್ರಾರಂಭಿಸಿದ್ದು, ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನಾ ಸಭೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸುವ ಮೂಲಕ ಸರ್ಕಾರದ ನಾನಾ ಇಲಾಖೆಗಳಲ್ಲಿ ಖಾಲಿ ಇರುವಂತಹ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಒತ್ತಾಯಿಸಿದರು.
ಅಭಿವೃದ್ಧಿಗೆ ತೊಡಕು: ರಾಜ್ಯ ಸರ್ಕಾರದಿಂದ ಮಾಹಿತಿ ಹಕ್ಕಿನ ಮೂಲಕ ಪಡೆದ ಮಾಹಿತಿಯಂತೆ ರಾಜ್ಯದ ಅರವತ್ತು ನಾನಾ ಇಲಾಖೆಗಳಲ್ಲಿ ಒಟ್ಟು ಒಂದು ಲಕ್ಷ ಎಂಬತ್ತು ಸಾವಿರ ಮಂಜೂರಾದ ಹುದ್ದೆಗಳು ಖಾಲಿಯಾಗಿ ಉಳಿದಿವೆ. ಹಿಂದಿನ ಬಿಜೆಪಿ ಸರ್ಕಾರ ಮತ್ತು ಈಗಿನ ಕಾಂಗ್ರೆಸ್ ಸರ್ಕಾರ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದರಲ್ಲಿ ಆಸಕ್ತಿ ತೋರಿಸುತ್ತಿಲ್ಲ. ಇದರಿಂದಾಗಿ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಗಳ ಕೊರತೆ ಕಂಡು ಬರುತ್ತಿದೆ. ಜನರ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಸಿಬ್ಬಂದಿ ಕೊರತೆಯ ನೆಪಹೇಳಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ರಾಜ್ಯದ ಒಟ್ಟಾರೆ ಅಭಿವೃದ್ಧಿಗೂ ಇದು ತೊಡಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೋಪ: ದೇಶದಲ್ಲಿ 40 ಕೋಟಿ ಯುವಕರಿದ್ದಾರೆ. ರಾಜ್ಯದಲ್ಲೂ ಲಕ್ಷಗಟ್ಟಲೆ ವಿದ್ಯಾವಂತ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಸರ್ಕಾರಿ ಇಲಾಖೆಗಳಲ್ಲಿ ದಲಿತ ಹಿಂದುಳಿದ ಮತ್ತು ಅಲ್ಪ ಸಂಖ್ಯಾತ ವರ್ಗಗಳ ಉದ್ಯೋಗಿಗಳ ಸಂಖ್ಯೆ ಅವರ ಜನಸಂಖ್ಯೆಯ ಅನುಪಾತದಿಂದ ತೀರಾ ಕಡಿಮೆ ಇದೆ. ಆರು ಸಾವಿರದಷ್ಟು ಬ್ಯಾಕ್ ಲಾಕ್ ಹುದ್ದೆಗಳು ಭರ್ತಿ ಮಾಡಿಲ್ಲ. ಮುಸ್ಲಿಮರಿಗೆ ಮೀಸಲಾತಿ ಇರುವ ಶೇ. 4ರಷ್ಟು ಉದ್ಯೋಗಗಳು ಎಲ್ಲಾ ನೇಮಕಾತಿಗಳಲ್ಲಿ ಪೂರ್ತಿಯಾಗಿಲ್ಲ ಎಂದು ಆರೋಪಿಸಿದರು.
ದೂರು: ಕೆಲವು ಇಲಾಖೆಗಳಲ್ಲಿ ಮುಸ್ಲಿಂ ಉದ್ಯೋಗಿಗಳ ಸಂಖ್ಯೆ ತೀರಾ ಕಡಿಮೆ ಇದೆ. ರಾಜ್ಯದಲ್ಲಿ ಶೇ.15ರಷ್ಟು ಮುಸ್ಲಿಂ ಜನಸಂಖ್ಯೆ ಇದೆ. ಆದ ಕಾರಣ ಮುಸ್ಲಿಂ ಉದ್ಯೋಗ ಮೀಸಲಾತಿಯನ್ನು ಕನಿಷ್ಟ ಶೇ. 8ರಷ್ಟಕ್ಕೆ ಏರಿಸಬೇಕು. ಇದರಿಂದಾಗಿ ತೀರಾ ಹಿಂದುಳಿದಿರುವ ಮುಸ್ಲಿಂ ಕುಟುಂಬಗಳು ಅಭಿವಣದ್ಧಿ ಹೊಂದಬಹುದು. ಆದರೆ ಸರ್ಕಾರಗಳು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ವಾರಗಟ್ಟಲೆ ಅಲೆಯುವ ಅನಿವಾರ್ಯತೆ: ನಾನಾ ಇಲಾಖೆಗಳಲ್ಲಿ ಸರ್ಕಾರಿ ಹುದ್ದೆಗಳು ಖಾಲಿ ಉಳಿದಿರುವುದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಡಕು ಉಂಟಾಗುತ್ತಿದೆ. ಇರುವಂತಹ ಸಿಬ್ಬಂದಿಗಳ ಕೊರತೆಯಿಂದಾಗಿ ಕೆಲಸ ಕಾರ್ಯಗಳು ಸಮಯಕ್ಕೆ ಸರಿಯಾಗಿ ನಡೆಯದ ಕಾರಣ ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಣ್ಣಪುಟ್ಟ ಕೆಲಸಕ್ಕೆ ವಾರಗಟ್ಟಲೆ ಅಲೆಯಬೇಕಾದಂತಹ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ಅಲವತ್ತುಕೊಂಡದರು.
ಕಿಡಿ: ಸರ್ಕಾರ ಖಾಲಿ ಇರುವಂತಹ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಕೇವಲ ಮೌಖಿಕವಾಗಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ಬಿಟ್ಟರೆ ಅದು ಕಾರ್ಯ ರೂಪಕ್ಕೆ ಬರುತ್ತಿಲ್ಲ. ಇದರಿಂದ ಸಾಕಷ್ಟು ಮಂದಿ ಉದ್ಯೋಗ ಆಕಾಂಕ್ಷಿಗಳಲ್ಲಿ ನಿರಾಸೆ ಉಂಟಾಗಿದೆ. ಸರ್ಕಾರಗಳು ಕೇವಲ ಆಶ್ವಾಸನೆ ನೀಡುವ ಮೂಲಕ ಸಮಯ ವ್ಯರ್ಥ ಮಾಡಿಕೊಂಡು ಬಂದಿದೆ. ಇದರಿಂದ ಸಾಕಷ್ಟು ಮಂದಿ ವಿದ್ಯಾವಂತ ನಿರುದ್ಯೋಗಿಗಳು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಒತ್ತಾಯ: ಸರ್ವರಿಗೂ ಸಮಪಾಲು- ಸರ್ವರಿಗೂ ಸಮಬಾಳು ಇದು ಸಂವಿಧಾನದ ಆಶಯವಾಗಿದೆ. ಸಾಮಾಜಿಕ ನ್ಯಾಯ ಮತ್ತು ನವೋದಯ ಕರ್ನಾಟಕದಲ್ಲಿ ಎಲ್ಲಾ ಜಾತಿ- ಧರ್ಮ ಭಾಂದವರಿಗೆ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಅಧಿಕಾರಕ್ಕಾಗಿ ಹೋರಾಡುವ ಪಕ್ಷವಾಗಿದೆ ಎಸ್ಡಿಪಿಐ. ನಮ್ಮ ಬೇಡಿಕೆಯಂತೆ ರಾಜ್ಯ ಸರ್ಕಾರ ಕೂಡಲೇ ಖಾಲಿ ಇರುವ ಸರಕಾರಿ ಉದ್ಯೋಗಗಳನ್ನು ಭರ್ತಿ ಮಾಡಬೇಕು. ಮತ್ತು ಅಹಿಂದ ವರ್ಗಗಳಿಗೆ ನೇಮಕಾತಿಯಲ್ಲಿ ಪ್ರಾಶಸ್ತ್ಯ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸೂಫಿ ಇಬ್ರಾಹಿಂ, ಮಾದಿಗ ದಂಡೋರದ ವಿಜಯ ಕುಮಾರ, ಸಮತಾ ಸೈನಿಕದಳದ ಸತೀಶ್, ಟಿಪ್ಪು ಸೇನೆ ಮುಬಶ್ಶಿರ್, ಪಿ.ಯು.ಸಿ.ಎಲ್ ನಾಗರಾಜ್ ಹೆತ್ತೂರ್, ಶಿವಮ್ಮ, ಪಿ.ಎಪ್.ಐ ನ ಫೈರೊಜ್ ಪಾಶ, ಫರೀದ್ ಭಾಗವಹಿಸಿದ್ದರು.
ಬೇಡಿಕೆಗಳು
ಟಿ ಸರ್ಕಾರದ ನಾನಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿ
ಟಿ ರಾಜ್ಯದಲ್ಲಿ ಲಕ್ಷಗಟ್ಟಲೆ ವಿದ್ಯಾವಂತ ಯುವಕರು ನಿರುದ್ಯೋಗಿಗಳಾಗಿದ್ದು, ಅವರಿಗೆ ಉದ್ಯೋಗ ನೀಡಿ
ಟಿ ಮುಸ್ಲಿಂ ಉದ್ಯೋಗ ಮೀಸಲಾತಿಯನ್ನು ಕನಿಷ್ಠ ಶೇ. 8ರಷ್ಟಕ್ಕೆ ಏರಿಸಬೇಕು.
ಟಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಸಾರ್ವಜನಿಕ ಕೆಲಸ ಕಾರ್ಯಕ್ಕೆ ಅನುವು ಮಾಡಿಕೊಡಬೇಕು.