ಸರ್ಕಾರಿ ಮದ್ಯದಂಗಡಿ ಬೇಕು: ಗ್ರಾಮಸ್ಥರ ಆಗ್ರಹ
ಸಕಲೇಶಪುರ: ಗ್ರಾಮಕ್ಕೆ ಸರ್ಕಾರಿ ಮದ್ಯದಂಗಡಿ ಬೇಕು. ಆದರೆ, ಖಾಸಗಿ ಲಿಕ್ಕರ್ ಶಾಪ್ ಬೇಡ ಎಂದು ಆಗ್ರಹಿಸಿ ಹೆತ್ತೂರು ಗ್ರಾಮಸ್ಥರು ಸೋಮವಾರ ಗ್ರಾಮ ಪಂಚಾಯ್ತಿ ಕಚೇರಿ ಎದುರು ಪ್ರತಿಭಟನೆ ನೆಡೆಸಿದರು.
ಗ್ರಾಮದಲ್ಲಿ ನಿತ್ಯ ಘರ್ಷಣೆ ಸಂಭವಿಸುತ್ತಿದೆ ಎಂದು ಆರೋಪಿಸಿ, ಗ್ರಾಮದಲ್ಲಿ ಈಗಾಗಲೇ ಇದ್ದ ಖಾಸಗಿ ಮದ್ಯದ ಅಂಗಡಿಯನ್ನು ಸತತ ಹೋರಾಟ ಮಾಡುವ ಮೂಲಕ ಕಳೆದ ವರ್ಷ ತೆರವುಗೊಳಿಸಲಾಗಿದೆ. ಆದರೆ ಮದ್ಯದಂಗಡಿ ತೆರವುಗೊಂಡು ವರ್ಷ ಕಳೆಯುವ ಮುನ್ನವೇ ಗ್ರಾಮದ ಗೌಡಪ್ಪನ ಕೆರೆ ಬಡಾವಣೆಯಲ್ಲಿ ಖಾಸಗಿ ಮದ್ಯದ ಅಂಗಡಿ ತೆರೆಯಲು ಅಬಕಾರಿ ಇಲಾಖೆ ಅನುಮತಿ ನೀಡಿದೆ. ಆದರೆ, ಈ ಬಗ್ಗೆ ಗ್ರಾಮಸ್ಥರ ಅಭಿಪ್ರಾಯವನ್ನು ಸಂಗ್ರಹಿಸಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಆರೋಪ: 2 ವರ್ಷದಿಂದ ಗ್ರಾಮಕ್ಕೆ ಸರಕಾರಿ ಮದ್ಯದಂಗಡಿ (ಎಂ.ಎಸ್.ಐ.ಎಲ್) ತೆರೆಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಹಣದ ಅಮಿಷಕ್ಕೆ ಬಲಿಯಾಗಿರುವ ಅಧಿಕಾರಿಗಳು ಗ್ರಾಮಕ್ಕೆ ಮಂಜೂರಾಗಿದ್ದ ಸರ್ಕಾರಿ ಮದ್ಯದ ಅಂಗಡಿಯನ್ನು ಬೇರೆಡೆಗೆ ಸ್ಥಳಾಂತರಿಸಿ ಇಲ್ಲಿಗೆ ಖಾಸಗಿ ಲಿಕ್ಕರ್ ಶಾಪ್ ತೆರೆಯಲು ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದರು.
ಮನವಿ: ಸಕಲೇಶಪುರ- ವಣಗೂರು ರಾಜ್ಯ ಹೆದ್ದಾರಿಯಲ್ಲಿ ಕುಳಿತು ಒಂದು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ನಂತರ ಮೆರವಣೆಗೆ ಮೂಲಕ ಗ್ರಾಮಪಂಚಾಯ್ತಿ ಕಚೇರಿಗೆ ತರಳಿ ಕೆಲಕಾಲ ಗ್ರಾಪಂ ಎದುರು ಪ್ರತಿಭಟನೆ ನಡೆಸಿದ ನಂತರ ಗ್ರಾ.ಪಂ ಅಧ್ಯಕ್ಷ ಕೃಷ್ಣಪ್ಪ ಅವರಿಗೆ ಮನವಿಯನ್ನು ಸಲ್ಲಿಸಿದರು.
ಪ್ರತಿಭಟನೆ ನೇತೃತ್ವವನ್ನು ದಿವಾಕರ್, ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಅರವಿಂದ, ಗ್ರಾಪಂ ಸದಸ್ಯ ಸೋಮಶೇಖರ್, ಹೆಚ್.ಎಂ. ಅಜಿತ್, ಮಂಜುನಾಥ್, ಮಲ್ಲೇಶ್, ಪ್ರಕಾಶ್, ಸತೀಶ್ ಮುಂತಾದವರು ವಹಿಸಿದ್ದರು.