ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

3ನೇ ದಿನಕ್ಕೆ ಕಾಲಿಟ್ಟ ಮುಷ್ಕರ

Rashmi Kasaragodu
Updated On : 23 Jan 2014, 1:32 am

ಬೇಲೂರು: ಹಳೇಬೀಡು-ಮಾದೀಹಳ್ಳಿ- ಜಾವಗಲ್ ಹೋಬಳಿಗಳಿಗೆ ನೀರುಣಿಸುವ ಯಗಚಿ ಏತ ನೀರಾವರಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಒತ್ತಾಯಿಸಿ ರೈತ ಸಂಘ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ  ಬುಧವಾರ 3ನೇ ದಿನಕ್ಕೆ ಕಾಲಿಟ್ಟಿದೆ.
ಶಿವಯೋಗಿ ಮಹಾಮನೆಯ ಬಸವಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂಭಾಗ ಮಂಗಳವಾರ ಅಹೋರಾತ್ರಿ ಧರಣಿಯನ್ನು ನಡೆಸಲಾಯಿತು.
ಸ್ಥಳಕ್ಕೆ ಶಾಸಕ ವೈ.ಎನ್. ರುದ್ರೇಶ್ಗೌಡ, ಯಗಚಿ ಉನ್ನತ ಅಧಿಕಾರಿಗಳು ಬರಬೇಕು ಮತ್ತು ಸ್ಪಷ್ಟವಾದ ಹಾಗೂ ನಿಖರವಾದ ಮಾಹಿತಿಯನ್ನು ನೀಡುವವರೆಗೂ ಮುಷ್ಕರವನ್ನು ನಡೆಸುವುದಾಗಿ ರೈತರು ಪಟ್ಟು ಹಿಡಿದಿದ್ದಾರೆ.
ತನಿಖೆ ನಡೆಸಲಿ: ರೈತ ಸಂಘದ ಸಂಘಟನಾ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ಮಾತನಾಡಿ, 3 ಹೋಬಳಿಗೆ ನೀರುಣಿಸಲು ಯಗಚಿ ಏತ ನೀರಾವರಿಗೆ ಕಳೆದ 2 ವರ್ಷದ ಹಿಂದೆ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಇದುವರೆಗೆ ಒಂದೆರಡು ಕಡೆ ನೆಪ ಮಾತ್ರಕ್ಕೆ ಕಾಮಗಾರಿ ಮಾಡುತ್ತಿರುವುದು ಬಿಟ್ಟರೆ ಇನ್ನಾವುದೇ ಕೆಲಸ ನಡೆಯುತ್ತಿಲ್ಲ.
ಯಗಚಿ ಏತ ನೀರಾವರಿಗೆ ಹಣದ ಕೊರತೆಯಿಲ್ಲ ಎಂದು ಶಾಸಕರು ಹೇಳುತ್ತಿದ್ದರೂ ಕಾಮಗಾರಿ ಮಾತ್ರ ವಿಳಂಬವಾಗುತ್ತಿರುವುದು ಊಹಾಪೋಹಕ್ಕೆ ಕಾರಣವಾಗಿದೆ ಎಂದರು.
ಗುತ್ತಿಗೆದಾರರು ಕಾಮಗಾರಿಯನ್ನು ಸರಿಯಾಗಿ ಮಾಡುತ್ತಿಲ್ಲ ಎಂದು ಎಂಜಿನಿಯರ್ಗಳು ಹೇಳುತ್ತಿದ್ದಾರೆ. ಆದರೆ ಇದೇ ಗುತ್ತಿಗೆದಾರರಿಗೆ ಹಳೆ ಟೆಂಡರ್ ರದ್ದು ಮಾಡಿ ಹೆಚ್ಚುವರಿ ಮೊತ್ತದ ಟೆಂಡರ್ ಮಾಡಿಕೊಟ್ಟಿದ್ದು ಈ ಬಗ್ಗೆ ಮಾಹಿತಿ ಮತ್ತು ಹಕ್ಕಿನ ಮೇಲೆ ಲೋಕಾಯುಕ್ತರು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯ: ಪ್ರಗತಿಪರ ಸಂಘಟನೆ ಗೌರವಾಧ್ಯಕ್ಷ ಕೆ. ಸುದರ್ಶನ್ ಮಾತನಾಡಿ, ಯಗಚಿ ಏತ ನೀರಾವರಿ ಕಾಮಗಾರಿಯ ಗುಣಮಟ್ಟದ ಮೇಲೆ ತಮಗೆ ಅನುಮಾನವಿದ್ದು ಯಾವ ಮಾನದಂಡವನ್ನು ಬಳಸಿ ಕಾಮಗಾರಿಯನ್ನು ಮಾಡುತ್ತಿದ್ದಾರೆ ಎಂಬುದನ್ನು ಮೊದಲು ರೈತರಿಗೆ ಸ್ವಷ್ಟಪಡಿಸಬೇಕಿದೆ ಎಂದರು.
ಶಾಸಕರು ರಾಜಿನಾಮೆ ನೀಡಲಿ: ಸರ್ಕಾರಕ್ಕೆ ನಮ್ಮ ಕೂಗು ಕೇಳಬೇಕು, ಶಾಸಕರ ಕುಮ್ಮಕಿನಿಂದ ಭಾರಿ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ.
ನಮಗೆ ನ್ಯಾಯ ನೀಡುವತನಕ ತಾಲೂಕು ಕಚೇರಿ ಬಿಟ್ಟು ಕದಲಿಕೆ ಇಲ್ಲ, ಜೈಲಿಗೆ ಹೊಗಲು ಸಿದ್ಧ ಎಂದು ಸವಾಲು ಹಾಕಿದ ಅವರು, ಶಾಸಕರು ಖುದ್ದು ರೈತರಿಗೆ ಉತ್ತರ ಹೇಳಲಿ, ಇಲ್ಲ ರಾಜಿನಾಮೆ ನೀಡಲಿ ಎಂದು ಕಿಡಿಕಾರಿದರು.
ಯಗಚಿ ಹೋರಾಟ ಸಮಿತಿ ಅಧ್ಯಕ್ಷ ಗುರುಸ್ವಾಮೇಗೌಡ, ಕಾರ್ಯದರ್ಶಿ ಶಿವಪ್ಪ, ಗಡಿ ಮಲ್ಲಿಕಾರ್ಜುನ್, ರೈತ ಸಂಘದ ತಾಲೂಕು ಅಧ್ಯಕ್ಷ ಪರಮೇಶ್, ಕಾರ್ಯದರ್ಶಿ ಭೋಗಮಲ್ಲೇಶ್, ಸಂಘಟನಾ ತಮ್ಮೇಗೌಡ, ಜಾವಗಲ್ ದಯಾನಂದ್, ಇಂದ್ರೇಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement