ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗನ್ ಲೈಸೆನ್ಸ್ಗೆ ಮುಗಿಬಿದ್ದ ಮಲೆನಾಡು ಜನ

Rashmi Kasaragodu
Updated On : 23 Jan 2014, 1:30 am

ಪಿ. ರವಿಕುಮಾರ್
ಹಾಸನ: ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ಇದರಿಂದ ರಕ್ಷಣೆ ಪಡೆದುಕೊಳ್ಳುವುದಕ್ಕೆ ಈ ಭಾಗದ ಜನರು ಗನ್ ಲೈಸೆನ್ಸ್ಗಾಗಿ ಮುಗಿ ಬಿದ್ದಿದ್ದಾರೆ.
ಸಾಮಾನ್ಯವಾಗಿ ಗನ್ ಎಂದಾಕ್ಷಣ ಬೆಚ್ಚಿ ಬೀಳೋರೆ ಹೆಚ್ಚು. ಆದ್ರೆ ಜಿಲ್ಲೆಯಲ್ಲಿ ಅದರಲ್ಲೂ ಮಲೆನಾಡು ಭಾಗದ ಜನರಿಗೆ ಗನ್ ಅನಿವಾರ್ಯವಾಗಿ ಬಿಟ್ಟಿದೆ. ಹೀಗಾಗಿ ಪರವಾನಗಿ ಪಡೆಯಲು ಜಿಲ್ಲಾಧಿಕಾರಿ ಎದುರು ಮಾಲೀಕರು ಮುಗಿ ಬೀಳುತ್ತಿದ್ದಾರೆ.
ಅನಿವಾರ್ಯ: ಮಲೆನಾಡು ಭಾಗದ ಜನರು ಹೀಗೆ ಗನ್ಗಳ ಮೊರೆ ಹೋಗಲು ಹಲವು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದುದು ಕಾಡಾನೆ ಕಾಟ. ಹೇಳಿ ಕೇಳಿ ಮಲೆನಾಡು ಭಾಗದಲ್ಲಿ ಒಂಟಿಮನೆಗಳು ಹೆಚ್ಚು. ಇನ್ನೂ ಕೆಲವೆಡೆ ದಟ್ಟಕಾನನದ ಮಧ್ಯೆ ಪುಟ್ಟ ಪುಟ್ಟ ಗ್ರಾಮಗಳಿರುತ್ತವೆ. ಈ ಸಂದರ್ಭ ಕಾಡುಪ್ರಾಣಿ ಇಲ್ಲವೇ ಯಾರೇ ಆಗಲಿ ಕಳವು ಇತ್ಯಾದಿ ತೊಂದರೆ ನೀಡಲು ಬಂದ್ರೆ ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಬಂದೂಕು ಇವರಿಗೆ ಅನಿವಾರ್ಯವಾಗಿದೆ ಅಂತಾರೆ ಬಂದೂಕು ಮಾಲೀಕರು.
ಜನ ದುಂಬಾಲು: ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಅವುಗಳ ಉಪಟಳದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹಾಗೂ ತಾವು ಬೆಳೆದಂತಹ ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕೆ ಗನ್ಗಳ ಅನಿವಾರ್ಯತೆ ಹೆಚ್ಚಾಗಿದೆ. ಆದರೆ ಕೆಲ ದಿನಗಳಿಂದ ಗನ್ನ ಪರವಾನಗಿ ಹಾಗೂ ನವೀಕರಣ ಕೆಲಸ ನಿಲ್ಲಿಸಿದ್ದರಿಂದ ಈ ಭಾಗದ ಜನರ ನೆಮ್ಮದಿಯನ್ನು ಕಳೆದುಕೊಂಡಿದ್ದರು. ಆದರೆ ಮತ್ತೆ ನವೀಕರಣ ಹಾಗೂ ಪರವಾನಗಿ ನೀಡುವ ಕಾರ್ಯ ನಡೆಯುತ್ತಿರುವುದರಿಂದ ಇತ್ತ ಜನರು ದುಂಬಾಲು ಬಿದ್ದಿದ್ದಾರೆ.
ಬಂದೂಕಿದ್ದರೆ ಧೈರ್ಯ: ಕಾಡುಪ್ರಾಣಿಗಳ ಉಪಟಳದಿಂದ ರಕ್ಷಣೆ ಮಾಡಿಕೊಳ್ಳುವುದು ಒಂದೆಡೆಯಾದ್ರೆ, ಇತ್ತೀಚಿನ ದಿನಗಳಲ್ಲಿ ಕೆಂಪು ಉಗ್ರರಾದ ನಕ್ಸಲರು ಮಲೆನಾಡಿನತ್ತ ಮುಖ ಮಾಡಿರುವುದರಿಂದ ತಮ್ಮದೇ ಭದ್ರತೆಗಾಗಿ ಗನ್ ಹೊಂದುವವರ ಸಂಖ್ಯೆ ಈಗೀಗ ಹೆಚ್ಚಾಗತೊಡಗಿದೆ. ಸಕಲೇಶಪುರ, ಆಲೂರು, ಬೇಲೂರು ಮುಂತಾದ ತಾಲೂಕುಗಳಲ್ಲಿ ರಾತ್ರಿವೇಳೆ ಕಾಫಿ ಬೀಜವನ್ನು ಕಣದಲ್ಲಿ ಹರಡುವುದರಿಂದ ಕಳ್ಳ- ಕಾಕರಿಂದ ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದಲೂ ಗನ್ ಪಡೆಯುತ್ತಿದ್ದಾರೆ.
ಕಚೇರಿಯತ್ತ ಮುಗಿಬಿದ್ದ ಜನ: ಜಿಲ್ಲೆಯಲ್ಲಿ ಈಗಾಗಲೇ 1600 ಮಂದಿ ಗನ್ ಹೊಂದಿದ್ದರೆ, ಹೊಸದಾಗಿ ಗನ್ ಪಡೆಯಲು 500ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲೂ ಗನ್ ಅನಿವಾರ್ಯತೆ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿ ಲೈಸೆನ್ಸ್ ನೀಡಲಾಗುತ್ತಿದೆ. ಈ ಹಿಂದೆ ದುರ್ಬಳಕೆ ಆರೋಪ ಹಿನ್ನೆಲೆಯಲ್ಲಿ ಗನ್ ಪರವಾನಗಿ ಕೊಡುವುದನ್ನು ನಿಲ್ಲಿಸಿ ದೊಡ್ಡ ಜಟಾಪಟಿ ಏರ್ಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಮತ್ತೆ ಗನ್ ಪರವಾನಗಿ ನವೀಕರಣ ಮಾಡುತ್ತಿರುವುದರಿಂದ ಎಲ್ಲರು ಜಿಲ್ಲಾಧಿಕಾರಿ ಕಚೇರಿಯತ್ತ ಮುಗಿ ಬಿದ್ದಿದ್ದಾರೆ.



ಕಾಡಾನೆ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ನಮ್ಮ ರಕ್ಷಣೆಗೆ ಗನ್ ಅನಿವಾರ್ಯವಾಗಿದೆ. ಜಿಲ್ಲಾಡಳಿತ ಕೆಲ ದಿನಗಳ ಕಾಲ ಗನ್ ಪರವಾನಗಿಯ ನವೀಕರಣ ಮತ್ತು ಹೊಸ ಪರವಾನಗಿಯನ್ನು ನಿಲ್ಲಿಸಿತು. ಇದರಿಂದ ತೊಂದರೆ ಹೆಚ್ಚಾಗಿತ್ತು. ಈಗ ಮತ್ತೆ ಪರವಾನಗಿ ನೀಡಲು ಪ್ರಾರಂಭಿಸಿರುವುದು ಮಲೆನಾಡು ಭಾಗದ ಜನರಿಗೆ ಅನುಕೂಲವಾಗಿದೆ.
ಟಿ  ದೇವರಾಜ್, ಗನ್ ಮಾಲೀಕ



ಮಲೆನಾಡು ಭಾಗದಲ್ಲಿ ಒಂಟೊಂಟಿ ಮನೆಗಳು ಹೆಚ್ಚಾಗಿರುವುದರಿಂದ ಕಾಡು ಪ್ರಾಣಿಗಳಲ್ಲದೆ ಕೆಂಪು ಉಗ್ರರಾದ ನಕ್ಸಲರ ಹಾವಳಿ ಇರುವುದರಿಂದ ಬಂದೂಕು ಈ ಭಾಗದ ಜನರಿಗೆ ಅನಿವಾರ್ಯವಾಗಿದೆ. ಬಂದೂಕು ಇಲ್ಲದೆ ಜೀವನ ನಡೆಸುವುದು ಅಸಾಧ್ಯವಾದಂತ ಸ್ಥಿತಿ ನಿರ್ಮಾಣವಾಗಿದೆ.
ಟಿ  ಮೋಹನ್, ಗನ್ ಮಾಲೀಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement