ಬಡ ಜನರ ಆರೋಗ್ಯ ಸೇವೆಗಾಗಿ ಸ್ವಾಸ್ಥ್ಯ ವಿಮಾ ಯೋಜನೆ
ಕ.ಪ್ರ.ವಾರ್ತೆ ಹಾಸನ ಜ. 22
ಕೂಲಿ ಕಾರ್ಮಿಕರು, ಬಡ ಜನರ ಆರೋಗ್ಯ ಸೇವೆಗಾಗಿ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆ ರೂಪಿಸಲಾಗಿದ್ದು ಕೇವಲ ಕಾರ್ಡ್ಗಳ ವಿತರಣೆಯಿಂದ ಇದರ ಉದ್ದೇಶ ಈಡೇರುವುದಿಲ್ಲ. ಬದಲಿಗೆ ಖಾಯಿಲೆ ಬಿದ್ದಾಗ ಇದನ್ನು ಬಳಸುವುದನ್ನು ಅರಿಯಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಹಾಗೂ ಮೇಲ್ವಿಚಾರಣಾ ಸಂಸ್ಥೆಗಳು ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ದೊಡ್ಡ ಆಶಯದೊಂದಿಗೆ ಈ ಯೋಜನೆ ಜಾರಿಗೆ ತಂದಿದೆ. ಕೇವಲ ನೊಂದಣಿ ಮಾಡಿಸುವುದರಿಂದ ಇದರ ಗುರಿ ಸಾಧನೆಯಾಗದು ಎಂದು ವಿವರಿಸಿದರು. ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 83573 ಮಂದಿ ನೋಂದಣಿ ಮಾಡಿಸಿದ್ದು, ಕೇವಲ 4982 ಮಂದಿ ಮಾತ್ರ ಒಟ್ಟು ರು. 2,43,05,135 ಮೊತ್ತದ ಚಿಕಿತ್ಸಾ ಸೌಲಭ್ಯ ಪಡೆದಿದ್ದಾರೆ. ಸಾಮಾನ್ಯವಾಗಿ ಪ್ರತಿ ಕುಟುಂಬದಲ್ಲೂ ಆಗೀಗ ಅನಾರೋಗ್ಯ ಕಾಡುವುದು ಸಹಜ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಈ ಯೋಜನೆಯಲ್ಲಿರುವ ಅವಕಾಶಗಳ ಅರಿವಾಗಿ ಅನುಕೂಲ ಪಡೆಯುವಂತಾಗಬೇಕು ಎಂದರು.
ಸೂಚನೆ: ಸ್ವಾಸ್ಥ್ಯವಿಮಾ ಯೋಜನೆಯಡಿ 2014ನೇ ಸಾಲಿಗೆ ಜಿಲ್ಲೆಯಲ್ಲಿ ಹೊಸದಾಗಿ ನೊಂದಣಿ ಪ್ರಕ್ರಿಯೆ ಪ್ರಾರಂಭಿಸಲು ಉದ್ದೇಶಿಲಾಗಿದ್ದು, ಒಟ್ಟು 4,25,207 ಫಲಾನುಭವಿಗಳನ್ನು ಗುರುತಿಸಲಾಗಿದೆ. ಅಂತಿಮ ಪಟ್ಟಿ ಸ್ವೀಕೃತವಾದ ನಂತರ ಈ ಯೋಜನೆ ಅನುಷ್ಠಾನದ ನೆರವಿಗೆ ಗುರುತಿಸಲಾಗಿರುವ ಐಸಿಐಸಿಐ, ನಬಾರ್ಡ್, ಹೆಲ್ತ್ ಕೇರ್, ಇನ್ಹೌಸ್ ಸಂಸ್ಥೆಯು ಈ ಮಾಸಾಂತ್ಯದೊಳಗೆ ನಿಖರವಾದ ಯೋಜನೆಯ ವಿವರವನ್ನು ಸಮಗ್ರವಾಗಿ ಒದಗಿಸಬೇಕು, ನನ್ನ ಅನುಮತಿ ಪಡೆದೇ ಮುಂದಿನ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಿದರು.
ಯಾರ್ಯಾರಿಗೆ ಲಾಭ?: ಉಪ ಕಾರ್ಮಿಕ ಆಯುಕ್ತ ಡಾ. ಬಾಲಕೃಷ್ಣ ಅವರು ಸಭೆಯಲ್ಲಿ ಸ್ವಾಸ್ಥ್ಯವಿಮಾ ಯೋಜನೆಯ ಉದ್ದೇಶ ಯೋಜನೆ ಸ್ವರೂಪದ ಬಗ್ಗೆ ವಿವರಿಸಿದರು. ಎಲ್ಲಾ ಬಿಪಿಎಲ್ ಕುಟುಂಬದ ಸದಸ್ಯರು, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನೋಂದಾಯಿಸಿಕೊಂಡವರು, ಬೀಡಿ ಕಾರ್ಮಿಕರು, ಗೃಹ ಕಾರ್ಮಿಕರು, ರೇಲ್ವೆ ಇಲಾಖೆಯ ಪರವಾನಗಿ ಪಡೆದ ವೆಂಡರ್ಸ್, ಪೋರ್ಟರ್ಸ್ ಮತ್ತು ಹಾಕರ್ಸ್, ಬೀದಿ ಬದಿಯ ವ್ಯಾಪಾರಿಗಳು, ನಿರ್ಮಾಣ ಕಾರ್ಮಿಕರು, ಅಂಚೆ ಪೇದೆಗಳು, ಆಟೋರಿಕ್ಷಾ ಚಾಲಕರು, ಸೈಕಲ್ ರಿಕ್ಷಾ ತಳ್ಳುವವರು, ಚಿಂದಿ ಆಯುವವರು, ಗಣಿ ಕಾರ್ಮಿಕರು, ಸಫಾಯಿ ಕರ್ಮಚಾರಿಗಳು ಈ ಯೋಜನೆಯ ಲಾಭ ಪಡೆಯಬಹುದು. ಈಗಾಗಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಬಿಪಿಎಲಲ್ಚೀಟಿ ಪಡೆಯಲಾಗಿದ್ದು, ಕೇಂದ್ರದ ಅನುಮೋದನೆ ನಂತರ ನೊಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಕಾರ್ಡ್ ವಿತರಣೆ ಸಂದರ್ಭದಲ್ಲಿ ಮಾತ್ರ ಪ್ರತಿ ಕಾರ್ಡ್ಗೆ ರು. 30 ಪಾವತಿಸಬೇಕು. ನಂತರ 1 ವರ್ಷದಲ್ಲಿ 1 ಕುಟುಂಬದ ಐವರು ಫಲಾನುಭವಿಗಳು ಯಾವುದೇ ನೊಂದಾಯಿತ ಆಸ್ಪತ್ರೆಯಲ್ಲಿ ವಾರ್ಷಿಕ ರು. 30,000ವರೆಗೆ ಚಿಕಿತ್ಸೆ ಪಡೆಯಬಹುದು ಎಂದರು.
ಜಿಲ್ಲಾ ಸರ್ಜನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಧಿಕಾರಿಗಳು, ಕಾರ್ಮಿಕ ಇಲಾಖೆ ಅಧಿಕಾರಿಗಳು ನಾನಾ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಇದ್ದರು.
ಗೊಂದಲವಿಲ್ಲದೇ ಕಾರ್ಡ್
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ ಮಾತನಾಡಿ, ಸ್ವಾಸ್ಥ್ಯ ಬಿಮಾ ಯೋಜನೆಯಡಿ ನೊಂದಣಿ ಪ್ರಕ್ರಿಯೆಗೆ ಗ್ರಾಮ ಪಮಚಾಯ್ತಿ ಹಂತದಲ್ಲಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗುವುದು. ಸ್ಥಳೀಯವಾಗಿಯೇ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಡ್ಗಳನ್ನು ವಿತರಿಸಬೇಕು. ಈಗಾಗಲೇ ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರು, ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳಿಗೆ ಇಲಾಖಾ ಕಾರ್ಯಕ್ರಮಗಳ ಜೊತೆಗೆ ಈಗಾಗಲೇ ಅನೇಕ ಸಮೀಕ್ಷೆ, ಗಣತಿ ಕಾರ್ಯಗಳ ಜವಾಬ್ದಾರಿ ಹಂಚಲಾಗಿದೆ. ಲಭ್ಯವಿರುವ ಫೀಲ್ಡ್ ಕೀ ಅಧಿಕಾರಿಗಳನ್ನು ಬಳಸಿ ಯಾವುದೇ ಗೊಂದಲಗಳಿಲ್ಲದಂತೆ ಕಾರ್ಡ್ಗಳನ್ನು ವಿತರಸಬೇಕು ಎಂದರು.
2014ನೇ ಸಾಲಿಗೆ ಜಿಲ್ಲೆಯಲ್ಲಿ ಹೊಸದಾಗಿ ನೊಂದಣಿ ಪ್ರಕ್ರಿಯೆ ಪ್ರಾರಂಭಿಸಲು ಉದ್ದೇಶಿಲಾಗಿದ್ದು, ಒಟ್ಟು 4,25,207 ಫಲಾನುಭವಿಗಳನ್ನು ಗುರುತಿಸಲಾಗಿದೆ. ಯೋಜನೆ ಅನುಷ್ಠಾನದ ನೆರವಿಗೆ ಗುರುತಿಸಲಾಗಿರುವ ಐಸಿಐಸಿಐ, ನಬಾರ್ಡ್, ಹೆಲ್ತ್ ಕೇರ್, ಇನ್ಹೌಸ್ ಸಂಸ್ಥೆಯು ಈ ಮಾಸಾಂತ್ಯದೊಳಗೆ ನಿಖರವಾದ ಯೋಜನೆಯ ವಿವರವನ್ನು ಸಮಗ್ರವಾಗಿ ಒದಗಿಸಬೇಕು. ನನ್ನ ಅನುಮತಿ ಪಡೆದೇ ಮುಂದಿನ ಪ್ರಕ್ರಿಯೆ ಪ್ರಾರಂಭಿಸಬೇಕು.
ಟಿ ವಿ. ಅನ್ಬುಕುಮಾರ್
ಜಿಲ್ಲಾಧಿಕಾರಿ
ಶೀಘ್ರ ನೇಮಕ
ಜಿಲ್ಲಾಡಳಿತ ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಎಲ್ಲಾ ನೆರವನ್ನು ನೀಡಲಿದೆ. ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರು, ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮದಲ್ಲಿ ಕಾರ್ಯ ನಿರ್ವಹಿಸುವ ಶುಶ್ರೂಷಕಿಯರು, ಅಂಗನವಾಡಿ ಕಾರ್ಯಕರ್ತೆಯರನ್ನು, ಫಲಾನುಭವಿಗಳನ್ನು ಗುರುತಿಸಲು ಅನುಕೂಲವಾಗುವಂತೆ ಫೀಲ್ಡ್ ಕೇರ್ ಆಫೀಸರ್ಗಳನ್ನು ನೇಮಕ ಮಾಡಲಾಗುವುದು ಎಂದು ಅನ್ಬುಕುಮಾರ್ ಹೇಳಿದರು.