ಮಗುಚಿದ ಯಗಚಿ ಯೋಜನೆ ಕಾಮಗಾರಿ
ಎ. ರಾಘವೇಂದ್ರ ಹೊಳ್ಳ
ಬೇಲೂರು: ಹಳೇಬೀಡು- ಮಾದೀಹಳ್ಳಿ ಹಾಗೂ ಜಾವಗಲ್ ಹೋಬಳಿಗೆ ನೀರುಣಿಸಲು ಆರಂಭವಾದ ಏತ ನೀರಾವರಿ ಯೋಜನೆ ಕುಂಟುತ್ತಾ ತೆವಳುತ್ತಾ ಸಾಗಿದ್ದು, 2 ವರ್ಷದಿಂದ ಯಗಚಿ ನೀರಿಗಾಗಿ ಕಾದು ಬೇಸತ್ತ ರೈತರು ಹೋರಾಟದ ಹಾದಿ ಹಿಡಿದಿದ್ದಾರೆ.
ಬಯಲು ಸೀಮೆಯಾದ ಹಳೆಬೀಡು ಮಾದೀಹಳ್ಳಿ ಜಾವಗಲ್ ಹೋಬಳಿ ಬಿರು ಬೇಸಿಗೆಯಲ್ಲಿ ಬರಗಾಲದಿಂದ ತತ್ತರಿಸುವ ಜನತೆ ಕುಡಿಯುವನ ನೀರಿಗಾಗಿ ಪಡುತ್ತಿರುವ ಬವಣೆ ಮುಗಿಲು ಮಟ್ಟಿದೆ. ಯಗಚಿ ಜಲಾಶಯದ ಏತ ನೀರಾವರಿ ಕುಡಿಯುವ ನೀರಿನ ಯೋಜನೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಏತ ನೀರಾವರಿ ಯೋಜನೆ ಕಾಮಗಾರಿ ಆರಂಭವಾಗಿ ಎರಡುವರೆ ವರ್ಷ ಕಳೆಯುತ್ತ ಬಂದಿದ್ದು ಸದ್ಯಕ್ಕಂತೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ.
ಕಳೆದ ಸೆಪ್ಟೆಂಬರ್ನಲ್ಲಿ ಶಾಸಕ ರುದ್ರೇಶಗೌಡ ಅವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿದಾಗ ಗುತ್ತಿಗೆದಾರು ಹಾಗೂ ಏತ ನೀರಾವರಿ ಮುಖ್ಯ ಎಂಜಿನಿಯರ್ ಅವರು ಡಿಸೆಂಬರ್ ಒಳಗೆ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದರು. ಡಿಸೆಂಬರ್ ಮುಗಿದು ಸಂಕ್ರಾತಿ ಕಳೆದು ಶಿವರಾತ್ರಿ ಬರುತ್ತಿದ್ದರೂ ಕಾಮಗಾರಿ ಮಾತ್ರ ಇನ್ನೂ ಮಂದಗತಿಯಲ್ಲೇ ಇದೆ.
ರಾಜಕೀಯ ಮೇಲಾಟ: ಯಗಚಿ ಜಲಾಶಯದಿಂದ ಚಿಕ್ಕಮಗಳೂರು, ಅರಸೀಕೆರೆ, ಹೊಳೆನರಸೀಪುರ ತಾಲೂಕುಗಳಿಗೆ ನೀರನ್ನು ಹರಿಸಲಾಗುತ್ತಿದೆ. ಆದರೆ 'ಕುಂತಿ ಮಕ್ಕಳಿಗೆ ರಾಜ್ಯವಿಲ್ಲ' ಎಂಬಂತೆ ಜಲಾಶಯ ಇರುವ ಊರಲ್ಲೇ ನೀರಿಗೆ ಬರ ಎಂಬಂತಾಗಿರುವುದು ವಿಪರ್ಯಾಸವಾಗಿದೆ. ಇತರೆ ತಾಲೂಕಿನ ಮೇಲೆ ಔದಾರ್ಯ ಮೆರೆದಿರುವುದು ತಾಲೂಕಿನ ಜನತೆಯ ಮೇಲೆ ಸ್ಥಳೀಯ ಜನಪ್ರತಿನಿಧಿಗಳ ಕಾಳಜಿ ಎಷ್ಟಿದೆ ಎಂಬುದು ತಿಳಿಯುತ್ತದೆ. ರಾಜಕೀಯದಲ್ಲಿ ಬಲಾಢ್ಯವಿರುವ ತಾಲೂಕುಗಳಿಗೆ ಸರಾಗವಾಗಿ ನೀರು ಹರಿದು ಹೋಗಲು ಸಾಧ್ಯವಾಗುತ್ತಿದ್ದು, ಅತಿ ಹಿಂದುಳಿದ ಹೋಬಳಿಗೆ ನೀರು ಹರಿಸಲು ಸಾಧ್ಯವಾಗದಿರುವುದು ರಾಜಕೀಯ ಮೇಲಾಟ ಎಂದು ಹೇಳಬಹುದಾಗಿದೆ.
ಬಯಲು ಸೀಮೆ ಹೋಬಳಿಗಳಾದ ಹಳೆಬೀಡು ಮತ್ತು ಮಾದೀಹಳ್ಳಿಯ ಅಂದಾಜು 36 ಕೆರೆಗಳಿಗೆ ನೀರು ಹರಿಸುವ ಏತ ನೀರಾವರಿ ಯೋಜನೆ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ನೀಡಿರುವುದೇನೋ ಸರಿ, ಆದರೆ ತಾಂತ್ರಿಕ ಮತ್ತು ಅವೈಜ್ಞಾನಿಕ ಕಾರಣಗಳು ಕಾಮಗಾರಿಯ ವಿಳಂಬಕ್ಕೆ ಕಾರಣವಾಗಿದೆ ಎನ್ನುವುದು ಹಲವು ರೈತರ ಅಭಿಪ್ರಾಯವಾಗಿದೆ.
ಈಗಾಗಲೇ ಯಗಚಿ ಹೋರಾಟ ಸಮಿತಿ, ತಾಲೂಕು ರೈತ ಸಂಘ ಹಾಗೂ ನಾನಾ ಸಂಘಟನೆಗಳು ಯಗಚಿ ಏತ ನೀರಾವರಿ ಕಾಮಗಾರಿಯನ್ನು ತ್ವರಿತಗೊಳಿಸುವಂತೆ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದೆ. ಮುಂದಿನ ದಿನದಲ್ಲಿ ರೈತ ಸಮುದಾಯ ನೀರಿಗಾಗಿ ರೊಚ್ಚಿಗೇಳುವ ಮೊದಲು ಶಾಸಕರು ಹಾಗೂ ಯಗಚಿ ಉನ್ನತ ಅಧಿಕಾರಿಗಳು ಏತ ನೀರಾವರಿ ಕಾಮಗಾರಿ ಬಗ್ಗೆ ಕುಂಟುನೆಪ ಹೇಳುವುದನ್ನು ಬಿಟ್ಟು ಶೀಘ್ರದಲ್ಲಿ ಮುಗಿಸುವ ಪ್ರಯತ್ನ ಮಾಡಬೇಕಿದೆ.
'ಮುಗಿಯುವ ಲಕ್ಷಣ ಕಾಣುತ್ತಿಲ್ಲ'
ಏತ ನೀರಾವರಿ ಯೋಜನೆಗೆ ಮಾದೀಹಳ್ಳಿ ಹೋಬಳಿ ಹಾಲುತೊರೆ ಸಮೀಪದಲ್ಲಿ ಜಾಕ್ವೇಲ್ ನಿರ್ಮಾಣ ಮಾಡಲು ರೈತರು ತಮ್ಮ ಜಮೀನುಗಳನ್ನು ಬಿಟ್ಟುಕೊಟ್ಟಿದ್ದಾರೆ. ಕಾಮಗಾರಿ ಮಾತ್ರ ಮುಕ್ತಾಯ ಹಂತಕ್ಕೆ ಬಂದಿಲ್ಲ. ಈ ಭಾಗದಲ್ಲಿ ನೀರೆತ್ತಲು ಜಾಕ್ವೆಲ್ ನಿರ್ಮಾಣ ಮಾಡಲಾಗುತ್ತಿದ್ದು, ಮೋಟರ್ ಅಳವಡಿಕೆಗೆ ಯಾವ ರೂಪರೇಷೆ ತಯಾರಾಗಿಲ್ಲ.
ಅಲ್ಲದೆ ಮೋಟರ್ ಅಳವಡಿಕೆಗೆ ಕನಿಷ್ಟ 6 ತಿಂಗಳ ಅವಧಿ ಬೇಕು ಎನ್ನುವ ಲೆಕ್ಕಾಚಾರವಿದೆ. ಕಾರಣ ಜಾಕ್ವೇಲ್ ಮೇಲೆ ಮೂರು ಮೋಟರ್ ಅಳವಡಿಸಬೇಕಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇನ್ನು ಸ್ಥಳ ಪರಿಶೀಲನೆ ಮಾಡಿಲ್ಲ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಈ ಕಾರಣದಿಂದ ಯೋಜನೆ ಇನ್ನೂ 2 ವರ್ಷವಾದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಹಳೇಬೀಡು ಮತ್ತು ಮಾದೀಹಳ್ಳಿ ಹೋಬಳಿಗೆ ನೀರು ಹರಿಸುವ ಎರಡು ಮಾರ್ಗ ಮಧ್ಯೆ ಅರಣ್ಯ ಇಲಾಖೆಗೆ ಸಂಬಂಧಪಟ್ಟ ಭೂಮಿ ಇರುವುರಿಂದ ಇನ್ನು ಅರಣ್ಯ ಇಲಾಖೆಗೆ ಪರ್ಯಾಯ ಭೂಮಿ ನೀಡದ ಕಾರಣ ಕಾಲುವೆ ಸಂಪೂರ್ಣವಾಗದೆ ಅಡ್ಡಿಯಾಗಿದೆ.
ಅರಸೀಕೆರೆ ಮತ್ತು ಸಕಲೇಶಪುರ ತಾಲೂಕುಗಳಲ್ಲಿ ಅರಣ್ಯ ಇಲಾಖೆ ಸೂಕ್ತ ಭೂಮಿ ಗುರುತಿಸಲಾಗಿದೆ ಎಂದು ಯಗಚಿ ಅಧಿಕಾರಿಗಳು ಹೇಳುತ್ತಿದ್ದರೂ ಯಾವುದೂ ಕಾರ್ಯರೂಪಕ್ಕೆ ಇಳಿದಿಲ್ಲ ಎಂಬುದು 'ಕನ್ನಡಪ್ರಭ'ಕ್ಕೆ ಬಂದ ಮಾಹಿತಿಯಾಗಿದೆ.