ರಸ್ತೆ ಬದಿ ಅಂಗಡಿಗಳ ತೆರವಿಗೆ ಒತ್ತಾಯ
ಅರಸೀಕೆರೆ: ಪಟ್ಟಣದಿಂದ ಬಾಣಾವರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ 206ರ ಎಡ, ಬಲ ಬದಿಗಳಲ್ಲಿ ರಸ್ತೆಯ ಸಮೀಪವೇ ಹಣ್ಣುಗಳ ಅಂಗಡಿಗಳನ್ನು ತೆರೆದಿರುವುದು ಅಪಘಾತಕ್ಕೆ ಕಾರಣವಾಗಿದ್ದು ಕೂಡಲೇ ಅಂಗಡಿಗಳನ್ನು ತೆರವುಗೊಳಿಸುವಂತೆ ಪ್ರಯಾಣಿಕರು ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ತಾಲೂಕಿನ ಕಲ್ಲುನಾಯಕನಹಳ್ಳಿ ಗೇಟ್, ಬೆಂಡೇಕೆರೆ, ಗವಿಮಠ ಸೇರಿದಂತೆ ಕೆಲ ಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ರಸ್ತೆಯ ಸಮೀಪವೇ ನಾನಾ ವಿಧದ ಹಣ್ಣಿನ ಅಂಗಡಿಗಳನ್ನು ತೆರೆದು ವ್ಯಾಪಾರಿಗಳು ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರನ್ನು ಕೂಗಿ ಕರೆಯುವುದರಿಂದ ವಾಹನ ಚಾಲಕರ ಗಮನವನ್ನು ತಮ್ಮತ್ತ ಸೆಳೆದು ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದಾರೆ ಎಂಬುದು ಪ್ರಯಾಣಿಕರ ದೂರಾಗಿದೆ.
ಗಮನ ಹರಿಸಿಲ್ಲ: ಅಲ್ಲದೇ, ರಸ್ತೆಯ ಸಮೀಪವೇ ಅಂಗಡಿಗಳನ್ನು ನಿರ್ಮಿಸಿರುವುದರಿಂದ ವಾಹನ ಸವಾರರು ರಸ್ತೆಯ ಮಧ್ಯಭಾಗದಲ್ಲಿ ವಾಹನ ನಿಲುಗಡೆ ಮಾಡಿ, ಖರೀದಿಗೆ ಮುಂದಾಗತೊಡಗಿದ್ದಾರೆ. ಇದರಿಂದಾಗಿ ವಾಹನ ದಟ್ಟಣೆ ಹೆಚ್ಚುವುದಲ್ಲದೆ ವೇಗವಾಗಿ ಬರುವ ವಾಹನಗಳಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಈಗಾಗಲೇ ಈ ಪ್ರದೇಶಗಳನ್ನು ಅಪಘಾತ ವಲಯ ಎಂದು ಗುರುತಿಸಲಾಗಿದ್ದು, ಪರಿಸ್ಥಿತಿ ಹೀಗಿದ್ದರೂ ಪೊಲೀಸರಾಗಲಿ, ತಾಲೂಕು ಆಡಳಿತವಾಗಲೀ ಇತ್ತ ಬಗ್ಗೆ ಗಮನ ಹರಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಎಚ್ಚರಿಕೆ: ತಕ್ಷಣವೇ ಅಂಗಡಿಗಳನ್ನು ತೆರವುಗೊಳಿಸುವುದು ಅಥವಾ ಅದನ್ನು ರಾಷ್ಟ್ರೀಯ ಹೆದ್ದಾರಿಯಿಂದ ದೂರಕ್ಕೆ ಕಳುಹಿಸುವ ಕಾರ್ಯಾಚರಣೆಗೆ ಮುಂದಾಗದಿದ್ದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ, ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು. ತಾಲೂಕು ಡಿ.ವೈ.ಎಸ್.ಪಿ. ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ನಾಗರಿಕರು ಎಚ್ಚರಿಸಿದ್ದಾರೆ.
ಗಮನಾರ್ಹ ಸಂಗತಿ: ಕೆಲ ದಿನಗಳ ಹಿಂದೆ, ಈ ಪ್ರದೇಶದಲ್ಲಿ ಕುಟುಂಬಮೊಂದರ ಐವರು ಸದಸ್ಯರು ಅಪಘಾತಕ್ಕೀಡಾಗಿ ಮರಣ ಹೊಂದಿದ್ದನ್ನು ಸ್ಮರಿಸಬಹುದಾಗಿದೆಯಲ್ಲದೇ ಈ ಪ್ರದೇಶದಲ್ಲಿ ಅನೇಕ ಅಪಘಾತಗಳು ನಡೆದು ಹಲವಾರು ಜನ ಪ್ರಾಣ ಕಳೆದುಕೊಂಡಿರುವುದು ಗಮನಾರ್ಹ ಸಂಗತಿಯಾಗಿದೆ.