ಲಾರಿ ಅಪಘಾತ: ಕ್ಲೀನರ್ ಸಾವು
ಹಾಸನ: ಲಾರಿ ನಿಯಂತ್ರಣ ತಪ್ಪಿದ ಪರಿಣಾಮ ಲಾರಿ ಕ್ಯಾಬಿನ್ ಮೇಲೆ ಕುಳಿತ್ತಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ. ತಾಲ್ಲೂಕಿನ ಕಟ್ಟಾಯ ಹೋಬಳಿ ನಾಯಕರಹಳ್ಳಿ ಗ್ರಾಮದ ರಾಘವೇಂದ್ರ (26) ಸಾವನ್ನಪ್ಪಿದ್ದ ವ್ಯಕ್ತಿ. ರಾಘವೇಂದ್ರ ಅವರು ತಾಲ್ಲೂಕಿನ ನ್ಯಾಮನಹಳ್ಳಿ ಗ್ರಾಮದ ನಾರಾಯಣಗೌಡ ರವರ ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿದ್ದ. ಮಂಗಳವಾರ ಜೋಳದ ಲೋಡ್ ತುಂಬಿಕೊಂಡಿದ್ದ ಈ ಲಾರಿ, ತುಮಕೂರು ಜಿಲ್ಲೆ ಗುಬ್ಬಿಯಲ್ಲಿ ಅನ್ಲೋಡ್ ಮಾಡಿಕೊಂಡು ವಾಪಸ್ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಹಾಸನ-ಹೊಳೆನರಸೀಪುರ ರಸ್ತೆಯ ಹಳೆಕೋಟೆ ಗ್ರಾಮಕ್ಕೆ ಬಂದಾಗ, ಚಾಲಕನ ನಿರ್ಲಕ್ಷ್ಯತೆಯಿಂದ ಬಾರ್ ಅಂಗಡಿಯ ಕಟ್ಟಡಕ್ಕೆ ಲಾರಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ, ಲಾರಿ ಕ್ಯಾಬಿನ್ ಮೇಲೆ ಕುಳಿತಿದ್ದ ರಾಘವೇಂದ್ರ ಕೆಳಗೆ ಬಿದ್ದಿದ್ದರಿಂದ, ಅವರಿಗೆ ತೀವ್ರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಂದೆ ಅಣ್ಣಪ್ಪಗೌಡ ಹೊಳೆನರಸೀಪುರ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಬೈಕ್ ಸವಾರನ ಸಾವು
ಹಾಸನ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ ಹೋಬಳಿ ಮಟ್ಟನವಿಲೆ ಗ್ರಾಮದ ನಂಜೇಗೌಡ (70) ಸಾವನ್ನಪ್ಪಿದ ದುರ್ದೈವಿ.
ನಂಜೇಗೌಡ ಅವರ ಎಕ್ಸೆಲ್ ಬೈಕ್ನಲ್ಲಿ ಹಿರೀಸಾವೆಯಲ್ಲಿ ರಾಗಿ ಮಿಲ್ ಮಾಡಿಸಿಕೊಂಡು ಎನ್ಎಚ್-75 ಬಿ.ಎಂ ರಸ್ತೆಯ ಮಟ್ಟನವಿಲೆ ಸರ್ಕಲ್ ಹತ್ತಿರ ರಸ್ತೆ ದಾಟುತ್ತಿದ್ದಾಗ, ಹಿಂದಿನಿಂದ ಬಂದ ಕೆಎಸ್ಆರ್ಟಿಸಿ ಬಸ್ ಚಾಲಕನ ನಿರ್ಲಕ್ಷ್ಯತೆಯಿಂದ ಡಿಕ್ಕಿ ಉಂಟಾಗಿದೆ. ಇದರ ಪರಿಣಾಮ ನಂಜೇಗೌಡರಿಗೆ ತೀವ್ರ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗಾಗಿ ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹಾಸನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಂಜೇಗೌಡ ಸಾವನ್ನಪ್ಪಿದ್ದಾರೆ.ಪುತ್ರ ಬಸವೇಗೌಡ ಅವರು ಹಿರೀಸಾವೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಜೂಜು: ನಾಲ್ವರ ಬಂಧನ
ಹಾಸನ: ಜಿಲ್ಲೆಯ ನಾನಾ ಪ್ರಕರಣದಲ್ಲಿ ಜೂಜಾಡುತ್ತಿದ್ದ ಐವರನ್ನು ಬಂಧಿಸಿರುವ ಘಟನೆ ಇತ್ತೀಚೆಗೆ ನಡೆದಿದೆ.
ಅರಸೀಕೆರೆ ತಾಲ್ಲೂಕಿನ ಜಾವಗಲ್ ಪೇಟೆ ಬೀದಿಯಲ್ಲಿ ಇರುವ ಪಾಂಡು ರವರ ನಿವೇಶನದಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದಾಗ ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿ ಮಂಜುನಾಥ್ (54), ರಾಜ (45), ನೀಲಕಂಠಯ್ಯ (60) ಮತ್ತು ಗಂಗಾಧರ್ (50) ಎಂಬವರನ್ನು ಬಂಧಿಸಿದ್ದು, ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು ರು. 1,940 ನಗದನ್ನು ವಶಪಡಿಸಿಕೊಂಡು, ಜಾವಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಸಕಲೇಶಪುರ ಪಟ್ಟಣ ಆಲ್- ಅಮೀನ್ ಸ್ಕೂಲ್ನ ಹತ್ತಿರ ಆಜಾದ್ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಡುತ್ತಿದ್ದಾಗ ಸಕಲೇಶಪುರ ನಗರ ಠಾಣೆ ಪೊಲೀಸರು ದಾಳಿ ನಡೆಸಿ, ಮಟ್ಕಾ ಬರೆಯುತ್ತಿದ್ದ ಜನರ ಬಳಿ ಹಣ ಗಳಿಸುತ್ತಿದ್ದ ಬಸವರಾಜು (59) ಎಂಬುವನನ್ನು ಬಂಧಿಸಿದ್ದು, ಮಟ್ಕಾ ಜೂಜಾಟದಿಂದ ಗಳಿಸಿದ್ದ ರು. 7260 ನಗದನ್ನು ವಶಪಡಿಸಿಕೊಂಡಿದ್ದಾರೆ. ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ತಾಯಿ ಮಕ್ಕಳು ಸೇರಿ ಐವರು ನಾಪತ್ತೆ
ಹಾಸನ: ಜಿಲ್ಲೆಯ ನಾನಾ ಪ್ರಕರಣದಲ್ಲಿ ತಾಯಿ ಮಕ್ಕಳೊಂದಿಗೆ ಐವರು ನಾಪತ್ತೆಯಾಗಿರುವ ಘಟನೆ ನಡೆದಿದೆ.
ಸಕಲೇಶಪುರ ತಾಲ್ಲೂಕಿನ ಬೆಳಗೋಡು ಹೋಬಳಿ, ಹೆಬ್ಬನಹಳ್ಳಿ ಗ್ರಾಮದ ಗುರಪ್ಪ ರವರ ಪತ್ನಿ ಸವಿತಾ (27) ಅವರು ಮಕ್ಕಳಾದ ಸುಜನ್ (9) ಮತ್ತು ಸುಹಾಸ್ (8) ರವರೊಂದಿಗೆ ಹಾಸನ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಚಹರೆ: ಸವಿತಾ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ದುಂಡುಮುಖ, ಸಾಧಾರಣ ಮೈಕಟ್ಟು, ಮನೆಯಿಂದ ಹೋಗುವಾಗ ಹಳದಿ ಬಣ್ಣದ ಸೀರೆ ಮತ್ತು ರವಿಕೆ ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಸುಜನ್, ಕೋಲುಮಖ, ಸಾಧಾರಣ ಮೈಕಟ್ಟು, ಮನೆಯಿಂದ ಹೋಗುವಾಗಿ ನೀಲಿ ಬಣ್ಣದ ಶರ್ಟ್ ಧರಿಸಿರುತ್ತಾನೆ. ಸುಹಾಸ್, ದುಂಡುಮುಖ, ಸಾಧಾರಣ ಮೈಕಟ್ಟು, ಮನೆಯಿಂದ ಹೋಗುವಾಗಿ ನೀಲಿ ಬಣ್ಣದ ತುಂಬು ತೋಳಿನ ಪಟ್ಟೆ ಪಟ್ಟೆ ಶರ್ಟ್ ಧರಿಸಿದ್ದಾನೆ. ಪತಿ ಗುರುಪ್ಪ ಅವರು ಸಕಲೇಶಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಯುವತಿ ನಾಪತ್ತೆ
ಚನ್ನರಾಯಪಟ್ಟಣ: ತಾಲ್ಲೂಕಿನ ಹಿರಿಸಾವೆ ಹೋಬಳಿ ಕೊತನಹಳ್ಳಿ ಗ್ರಾಮದ ಗಂಗಾಧರೇಗೌಡ ರವರ ಪುತ್ರಿ ಪ್ರಿಯಾಂಕ(19) ಮನೆಯಿಂದ ಹೊರಗೆ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾಳೆ. ಚಹರೆ: 5.4 ಅಡಿ ಎತ್ತರ, ಸಾದಾರಣ ಮೈಕಟ್ಟು, ಕನ್ನಡ ಬಾಷೆ ಮಾತನಾಡುತ್ತಾಳೆ. ತಾಯಿ ಜಯಲಕ್ಷ್ಮಿ ಅವರು ಹಿರೀಸಾವೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಹಾಸನ ತಾಲ್ಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದ ರಮೇಶ್ ಅವರ ಪುತ್ರ ಭರತ್ (16) ಹಾಸನ ರಾಜೀವ್ ಕಾಲೇಜಿನಲ್ಲಿ ಮೊದಲನೇ ವರ್ಷದ ಡಿಪ್ಲೊಮೋ ವ್ಯಾಸಂಗ ಮಾಡಿಕೊಂಡಿದ್ದು ಎಂದಿನಂತೆ ಕಾಲೇಜಿಗೆ ಹೋದವನು ವಾಪಸ್ ಮನೆಗೆ ಬಂದಿಲ್ಲ.
ಚಹರೆ: 6 ಅಡಿ ಎತ್ತರ, ಕೆಂಪುಬಣ್ಣ, ದುಂಡುಮುಖ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಚಿಕ್ಕ ಗೆರೆಗಳಿರುವ ಬಿಳಿ ಬಣ್ಣದ ಶರ್ಟ್ ಮತ್ತು ಸಿಮೆಂಟ್ ಬಣ್ಣದ ಕಪ್ಪುಮಿಶ್ರಿತ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ ಭಾಷೆ ಮಾತನಾಡುತ್ತಾನೆ. ತಂದೆ ರಮೇಶ್ ಅವರು ಹಾಸನ ಬಡಾವಣೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.