ಆಕ್ಷೇಪಣೆಗೆ ಗಡುವು
ಹಾಸನ: ಸಕಲೇಶಪುರ ತಾಲೂಕಿನ ಸಿದ್ದಾಪುರ, ಚಿನ್ನಹಳ್ಳಿ, ಹೊಸಹಳ್ಳಿ, ಅತ್ತಿಹಳ್ಳಿ, ಹೊಂಗಡಹಳ್ಳ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳು ಸ್ಥಗಿತಗೊಂಡಿರುವುದರಿಂದ ಸದರಿ ಸಂಘಗಳನ್ನು ಸಮಾಪನೆಗೊಳಿಸಲು ಸಕಲೇಶಪುರದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ತಿಳಿಸಿದ್ದಾರೆ. ಸದರಿ ಸಂಘಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಷೇರುದಾರರು ಈ ಸಂಘಗಳನ್ನು ಸಮಾಪನೆಗೊಳಿಸುವ ಬಗ್ಗೆ ತಮ್ಮ ಆಕ್ಷೇಪಣೆಗಳೇನಾದರೂ ಇದ್ದರೆ, ಈ ಪ್ರಕಟಣೆ ಪ್ರಕಟಗೊಂಡ ದಿನಾಂಕದಿಂದ ಒಂದು ವಾರದೊಳಗೆ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯಲ್ಲಿ ಸಂಪರ್ಕಿಸಲು ತಿಳಿಸಿದೆ. ಇಲ್ಲದಿದ್ದಲ್ಲಿ ಸದರಿ ಸಂಘಗಳ ಸಮಾಪನೆ ಕುರಿತು ಯಾವುದೇ ಆಕ್ಷೇಪಣೆಗಳು ಇರುವುದಿಲ್ಲವೆಂದು ಪರಿಗಣಿಸಿ ಸಮಾಪನೆಗೆ ಕ್ರಮವಿಡಲಾಗುವುದು ಎಂದು ಹಾಸನದ ಸಹಕಾರ ಸಂಘಗಳ ಉಪನಿಬಂಧಕ ಇಲ್ಯಾಸ್ ಉಲ್ಲಾ ಷರೀಫ್ ತಿಳಿಸಿದ್ದಾರೆ.
ಶಾಲೆಗೆ ದೇಣಿಗೆ
ಹಾಸನ: ಎಂಎಲ್ಸಿ ಬಿ.ಬಿ. ಶಿವಪ್ಪ ಅವರು ಇತ್ತೀಚೆಗೆ ನಗರದ ಎಂ. ಕೃಷ್ಣ ಅಂಧ ಮಕ್ಕಳ ವಸತಿ ಪಾಠಶಾಲೆಗೆ ಭೇಟಿ ನೀಡಿ ಅಂಧ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರು. 25 ಸಾವಿರ ದೇಣಿಗೆ ನೀಡಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಹೆಚ್. ನಾಗರಾಜ್ ತಿಳಿಸಿದ್ದಾರೆ.