ಕಂಠಪೂರ್ತಿ ಕುಡಿದರು, ಪೊಲೀಸರಿಗೇ ಒದ್ದರು!
ಚನ್ನರಾಯಪಟ್ಟಣ: ಕಂಠ ಪೂರ್ತಿ ಕುಡಿದ ಐವರು ಪುಂಡ ಯುವಕರು ಬಾರ್, ಸಾರ್ವಜನಿಕರು ಹಾಗೂ ಪೊಲೀಸ್ ಠಾಣೆಯಲ್ಲಿ ದಾಂದಲೆ ನಡೆಸಿ 8 ಮಂದಿಯನ್ನು ಗಾಯಗೊಳಿಸಿದ ಘಟನೆ ನುಗ್ಗೇಹಳ್ಳಿಯಲ್ಲಿ ಗುರುವಾರ ಸಂಜೆ ನಡೆದಿದೆ.
ದಾಂದಲೆ ನಡೆಸಿದರನ್ನು ತಾಲೂಕಿನ ನುಗ್ಗೇಹಳ್ಳಿ ಹೋಬಳಿಯ ಅಗ್ರಹಾರ ಬೆಳಗುಲಿ ಗ್ರಾಮದ ರೇವಣ್ಣ, ಶೀನಿವಾಸ್, ಮಂಜುನಾಥ್, ಯೋಗೇಶ್ ಹಾಗೂ ಹುಲ್ಲೇನಹಳ್ಳಿ ನಟೇಶ್ ಎಂದು ಗುರುತಿಸಲಾಗಿದೆ.
ನುಗ್ಗೇಹಳ್ಳಿ ಪೊಲೀಸ್ ಠಾಣೆಯ ಪಕ್ಕದ ರಸ್ತೆಯಲ್ಲಿರುವ ಗಂಗಾಧರೇಶ್ವರ ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ಕಂಠ ಪೂರ್ತಿ ಕುಡಿದ ಯುವಕರು ಬಾರ್ ಸಿಬ್ಬಂದಿ ಮೇಲೆ ಸಣ್ಣ ಪುಟ್ಟ ಕಾರಣಗಳನ್ನು ಮುಂದಿಟ್ಟುಕೊಂಡು ಬಾಟಲಿಯಿಂದ ಹಲ್ಲೆ ಮಾಡಿದ್ದಾರೆ. ಅದನ್ನು ತಡೆಯಲು ಹೋದ ಸಾರ್ವಜನಿಕರಿಗೆ ಬಾಟಲಿಯಿಂದ ಚುಚ್ಚಿದ್ದಾರೆ.
ಇದನ್ನು ನೋಡಿದ ಪೊಲೀಸರು ಸಾರ್ವಜನಿಕರ ಸಹಕಾರದೊಂದಿಗೆ ಐವರನ್ನು ಪೊಲೀಸ್ ಠಾಣೆಗೆ ಕರೆತಂದು ಕೂರಿಸಿದ್ದಾರೆ.
ಪೊಲೀಸರಿಗೇ ಗೂಸಾ: ಕುಡಿದ ಅಮಲಿನಲ್ಲಿದ್ದ ಈ ಐವರು, ಠಾಣೆಯಲ್ಲಿದ್ದ ಸಹಾಯಕ ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ, ಪೇದೆಗಳಾದ ಶಶಿಧರ್, ಸಪಿ, ಹಾಗೂ ಪುನೀತ್ ಮೇಲೆ ಹಲ್ಲೆ ನಡೆಸಿ ಠಾಣೆಯಲ್ಲಿದ್ದ ದಾಖಲಾತಿಗಳು ಹಾಗೂ ಕಂಪ್ಯೂಟರನ್ನು ಚೆಲ್ಲಾ ಪಿಲ್ಲಿ ಮಾಡಿದ್ದಾರೆ. ಇದನ್ನು ನೋಡಿದ ಸಾರ್ವಜನಿಕರು ಪೊಲೀಸ್ ಠಾಣೆಗೆ ಬಂದು ಪೊಲೀಸರನ್ನು ರಕ್ಷಿಸಿ ದಾಂದಲೆ ನಡೆಸಿದ ಐವರು ಪುಂಡರಿಗೆ ಧರ್ಮದೇಟು ನೀಡಿದ್ದಾರೆ.
ಗಂಗಾಧರೇಶ್ವರ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಮದ್ಯಾಹ್ನದ 12 ಗಂಟೆಯಿಂದ ಮದ್ಯ ಕುಡಿದು ಬಾರ್ಗೆ ಬಂದವರ ಮೇಲೆಲ್ಲಾ ತಿರುಗಿ ಬೀಳುತ್ತಿದ್ದ ಐವರು ಯುವಕರು, ಕಡೆಯಲ್ಲಿ ಬಾರ್ ಸಿಬ್ಬಂದಿಗಳ ಮೇಲೆ ಗಲಾಟೆ ತೆಗೆದಿದ್ದಾರೆ. ಇದಕ್ಕೆ ತಿರುಗಿ ಬಿದ್ದ ಬಾರ್ ಕ್ಯಾಶಿಯರ್ ವಿಶ್ವನಾಥ್, ಹಾಗೂ ಬಾರ್ ಸಹಾಯಕ ನಾಗೇಶ್ ಅವರಿಗೆ ಬಾಟಲಿಯಿಂದ ತಲೆ ಮತ್ತು ಹೊಟ್ಟೆಗೆ ಚುಚ್ಚಿದ್ದಾರೆ.
ಬಾರ್ ಸಿಬ್ಬಂದಿಗಳ ಮೇಲೆ ಹಲ್ಲೆಯನ್ನು ನೋಡಿದ ಸಾರ್ವಜನಿಕರು ಪುಂಡರಿಂದ ಕಾಪಾಡಲು ಹೋದ ಸಂದರ್ಭದಲ್ಲಿ ಸಾರ್ವಜನಿಕರ ಮೇಲೆಯೂ ತಿರುಗಿ ಬಿದ್ದ ಯುವಕರು ಮಂಜುನಾಥ್, ರಂಗೇಗೌಡ, ಪ್ರತಾಪ್ ಅವರಿಗೆ ಬಾಟಲಿಯಿಂದ ಚುಚ್ಚಿದ್ದಾರೆ.
ಪ್ರಕರಣ ದಾಖಲು: ಪೊಲೀಸ್ ಠಾಣೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸುವ ಸಂದರ್ಭದಲ್ಲಿ ಸಾರ್ವಜನಿಕರಿಂದ ಹಿಗ್ಗಾ ಮುಗ್ಗಾ ಗೂಸಾ ತಿಂದ ಪುಂಡರಿಗೆ ನುಗ್ಗೇಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಸಿ, ನಂತರ ಅವರ ಮೇಲೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ. ಗಾಯಾಳುಗಳುಗಳಿಗೆ ನುಗ್ಗಹೇಳ್ಳಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪಟ್ಟಣದ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸರ್ಕಲ್ ಇನ್ಸ್ಪೆಕ್ಟರ್, ಶೈಲೇಂದ್ರ, ಸಬ್ ಇನ್ಸ್ಪೆಕ್ಟರ್ಗಳಾದ ಸುರೇಶ್. ರಾಜು ಹಾಗೂ ಜಗದೀಶ್ ಅವರು ಠಾಣೆಯಲ್ಲಿ ಮೊಕ್ಕಾಂ ಹೂಡಿದ್ದಾರೆ.