ಮಕ್ಕಳ ಭಾವನೆ ಅರ್ಥ ಮಾಡಿಕೊಳ್ಳುವುದು ಕಷ್ಟ
ಕನ್ನಡಪ್ರಭ ವಾರ್ತೆ, ಹಾಸನ, ಜ. 23
ಆಧುನಿಕ ಕುಟುಂಬಗಳಲ್ಲಿ ಹೆಚ್ಚಿನ ಸಮಯವನ್ನು ಪೋಷಕರು ಮೊಬೈಲ್, ಅಂತರ್ರ್ಜಾಲ ಹಾಗೂ ಟಿವಿ ಮುಂದೆ ಕಳೆಯುತ್ತಿದ್ದು, ಇದರಿಂದ ಮಕ್ಕಳ ಜತೆ ಬೆರೆತು ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಮಕ್ಕಳಲ್ಲಿ ಅಹಿತಕರ ಘಟನೆಗಳು ಅಧಿಕ ಪ್ರಮಾಣದಲ್ಲಿ ನಡೆಯಲು ಕಾರಣವಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೀತಾ ವಿಷಾದಿಸಿದರು.
ಅವರು ಇತ್ತೀಚೆಗೆ ಹಾಸನಾಂಬ ಕಲಾಕ್ಷೇತ್ರದಲ್ಲಿ ಸಿಎಂಎಸ್ಎಸ್ಎಸ್ ಸಂಸ್ಥೆ ಪ್ರಾಯೋಜಿತ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯಲ್ಲಿನ ತನ್ನ ಕಾರ್ಯಕ್ಷೇತ್ರದ 640 ಹಳ್ಳಿಗಳಲ್ಲಿ ಹರಡಿರುವ 1200 ಮಹಿಳಾ ಸ್ವ ಸಹಾಯ ಸಂಘಗಳ ನೋಂದಾಯಿತ ಜೀವನ ಜ್ಯೋತಿ ಒಕ್ಕೂಟದ 17ನೇ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸಾರಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಟ್ಟು ಮಕ್ಕಳನ್ನು ಒಳ್ಳೆಯ ಪ್ರಜೆಯನ್ನಾಗಿ ಮಾಡುವಲ್ಲಿ ಪೋಷಕರು ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಕಿವಿ ಮಾತು ಹೇಳಿದರು.
ಜವಾಬ್ದಾರಿ: ಒಕ್ಕೂಟದ ಹೆಸರಾದ ಜೀವನ ಜ್ಯೋತಿಯು ತನ್ನ ಹೆಸರಿಗೆ ತಕ್ಕಂತೆ ಅದರಲ್ಲಿರುವ ಮಹಿಳೆಯರೆಲ್ಲಾ ಒಬ್ಬರಿಗೊಬ್ಬರು ಬೆಳಕಾಗಬೇಕು ಎಂದು ಹೇಳಿದರು. ದೌರ್ಜನ್ಯ ಎಂಬುದು ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರಲ್ಲೂ ನಡೆಯುತ್ತಿದೆ. ಆದ್ದರಿಂದ ಮಕ್ಕಳ ಸಂರಕ್ಷಣೆ, ಅವರನ್ನು ಸುಸಂಸ್ಕೃತರಾಗಿ ಬೆಳೆಸುವುದು ಪ್ರತೀ ತಂದೆ- ತಾಯಂದಿರ ಜವಾಬ್ದಾರಿ ಎಂದರು.
ಸ್ಫೂರ್ತಿಯಾಗಲು ಪ್ರಯತ್ನಿಸಬೇಕು: ಸಂಸ್ಥೆಯ ನಿರ್ದೇಶಕ ಫೆಲಿಕ್ಸ್ ಥಾಮಸ್ ರುಜಾರಿಯೋ ಮಾತನಾಡಿ, ಯೋಚನೆಗಳು ಒಳ್ಳೆಯದಾದಲ್ಲಿ ನಮ್ಮ ಕೆಲಸಗಳು ಶಕ್ತಿಶಾಲಿಯಾಗಿರುತ್ತದೆ. ಒಕ್ಕೂಟದ ಎಲ್ಲಾ ಸದಸ್ಯರು ಒಗ್ಗೂಡಿ ಸಮಾಜದ ಬದಲಾವಣೆ ತರುವಲ್ಲಿ ಮನಸ್ಸು ಮಾಡಿದ್ದಲ್ಲಿ ಸಮಾಜವನ್ನು ಅಭಿವೃದ್ಧಿ ಪಥದೆಡೆ ಸಾಗಿಸಲು ಸಾಧ್ಯ. ಆದ್ದರಿಂದ ಮಹಿಳೆಯರು ಕೇವಲ ಸಂಘಗಳಿಗೆ ಮಾತ್ರ ಸೀಮಿತರಾಗದೆ ಇತರರ ಜೀವನಕ್ಕೆ ಸ್ಫೂರ್ತಿಯಾಗಲು ಪ್ರಯತ್ನಿಸಬೇಕು ಎಂದರು.
ಸುಧಾರಣೆ ಸಾಧ್ಯ: ಹಿರಿಯ ಪತ್ರಕರ್ತ ಆರ್ .ಪಿ. ವೆಂಕಟೇಶಮೂರ್ತಿ ಮಾತನಾಡಿ, ಒಕ್ಕೂಟದ ಸದಸ್ಯತ್ವ ಪಡೆದುಕೊಂಡ ರು. 12,500 ಮಹಿಳೆಯರು ಒಂದು ದೊಡ್ಡ ಶಕ್ತಿಯಾಗಿ ಇಂದಿನ ರಾಜಕಾರಣ ಹಾಗೂ ಆಡಳಿತಶಾಹಿಯಲ್ಲಿರುವ ಅವ್ಯಾಹತವಾಗಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತೊಲಗಿಸಲು ಸಾಧ್ಯವಿದೆ. ಆದರೆ, ಮಹಿಳೆಯರು ಅಬಲೆಯರು, ದುರ್ಬಲರು ಎಂಬ ಕೀಳರಿಮೆ ಬಿಟ್ಟು ಸಂಘಟಿತರಾಗಿ ಸಮಾಜಿಕ ಕಾಳಜಿ ಹೊಂದಿದಲ್ಲಿ ಸಾಮಾಜಿಕ ಸುಧಾರಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮಹಿಳೆಯರು ಸಂಘಟಿತರಾಗಬೇಕು: ಲೇಖಕಿ ಲೀಲಾವತಿ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಿ ತಮ್ಮ ಸುತ್ತ ಮುತ್ತ ನಡೆಯುತ್ತಿರುವ ವಿವಿಧ ರೀತಿಯ ಸ್ತ್ರೀ ಶೋಷಣೆಯನ್ನು ಅರಿತು ಅದರ ವಿರುದ್ಧ ಮಹಿಳೆಯರು ಸಂಘಟಿತರಾಗಿ ಹೋರಾಟ ಮಾಡಿದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ಹಿಂಸೆ ಮತ್ತು ದೌರ್ಜನ್ಯ ಕಡಿಮೆಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಪತ್ರಿಕೆ ಓದಬೇಕು: ಮಹಿಳೆಯರು ಸಂಘಕ್ಕೆ ಸೇರಿದ ಮೇಲೆ ಸ್ವಾವಲಂಬಿಗಳಾಗಿ ಕುಟುಂಬದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಪ್ರತಿಯೊಬ್ಬ ಮಹಿಳೆಯು ಶಿಕ್ಷಣ ಪಡೆದಲ್ಲಿ ಸಮಾಜದ ಅಭಿವೃದ್ಧಿಯನ್ನು ಕಾಣಲು ಸಾಧ್ಯ. ಆದ್ದರಿಂದ ಎಲ್ಲಾ ಹೆಣ್ಣು ಮಕ್ಕಳಿಗೂ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸಬೇಕು. ಹಾಗೂ ಪ್ರತಿಯೊಬ್ಬರೂ ದಿನನಿತ್ಯ ಪತ್ರಿಕೆಯನ್ನು ಓದುವ ಹವ್ಯಾಸ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಜೀವನ ಜ್ಯೋತಿ ಒಕ್ಕೂಟದ ಅಧ್ಯಕ್ಷೆ ಅನ್ಸಿಲ್ಲಾ ಅವರು ಕಾರ್ಯಕ್ರಮದ ಉದ್ದೇಶ ಹಾಗೂ ಒಕ್ಕೂಟ ನಡೆದು ಬಂದ ಹಾದಿಯನ್ನು ವಿವರಿಸಿದರು.
ಒಕ್ಕೂಟದ ವಾರ್ಷಿಕ ಪ್ರಗತಿ ಮತ್ತು ಹಣಕಾಸಿನ ವರದಿಯನ್ನು ಒಕ್ಕೂಟದ ಕಾರ್ಯದರ್ಶಿ ಡಯಾನ ಓದಿದರು. ಕಾರ್ಯಕ್ರಮದ ಕೊನೆಗೆ ಎರಡೂ ಜಿಲ್ಲೆಗಳ ನಾನಾ ವಿಭಾಗಗಳಿಂದ ಸಂಘಗಳ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮಗಳಾದ ಕೋಲಾಟ, ಅರಿವಿನ ಹಾಡು, ನೃತ್ಯಗಳನ್ನು ಪ್ರದರ್ಶಿಸಿ ಮನರಂಜಿಸಿದರು. ಕಾರ್ಯಕ್ರಮದಲ್ಲಿ 650 ಒಕ್ಕೂಟದ ಪ್ರತಿನಿಧಿಗಳು ಮತ್ತು ಸಂಸ್ಥೆಯ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.