ರಸ್ತೆ ಸುರಕ್ಷತಾ ಜಾಗೃತಿ ಜಾಥಾಕ್ಕೆ ಚಾಲನೆ
ಹಾಸನ: ರಸ್ತೆ ಸುರಕ್ಷತಾ ಸಪ್ತಾಹ ಜಾಗೃತಿ ಜಾಥಾಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಬುಧವಾರ ಚಾಲನೆ ನೀಡಿದರು.
ಸಂಚಾರಿ ಪೊಲೀಸ್ ಠಾಣೆ, ರೋಟರಿ ಕ್ಲಬ್ನ ನಾನಾ ಸಂಸ್ಥೆಗಳು ಹಾಗೂ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಆಶ್ರಯದಲ್ಲಿ ಬುಧವಾರ ರಸ್ತೆ ಸುರಕ್ಷತಾ ಸಪ್ತಾಹ ಜಾಗೃತಿ ಜಾಥವನ್ನು ಏರ್ಪಡಿಸಲಾಗಿತ್ತು. ನಂತರ ವಾಹನ ಚಾಲಕರಿಗೆ ಅರಿವು ಮೂಡಿಸುವ ಪೋಸ್ಟರ್ ಮೂಲಕ ಜಾಗೃತಿಗೊಳಿಸಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಈ ವೇಳೆ ರೋಟರಿ ಕ್ಲಬ್ ಗವರ್ನರ್ ಗುರುರಾಜ್ ದಂಪತಿ, ಅಧ್ಯಕ್ಷರಾದ ನಟೇಶ್, ಜಿತೇಂದ್ರ, ಸತ್ಯನಾರಾಯಣ್, ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ತಾಲೂಕು ಅಧ್ಯಕ್ಷ ಸುರೇಶ್ ಗುರೂಜಿ, ಖಜಾಂಚಿ ಚಿನ್ನೇನಹಳ್ಳಿ ಸ್ವಾಮಿ, ಕಾರ್ಯದರ್ಶಿ ಡಾ. ವಿವೇಕಾನಂದ, ರಮೇಶ್, ಮದನಗೌಡ ಇತರರು ಇದ್ದರು.