ಜಾವಗಲ್: ಸ್ವಾಮೀಜಿ ನೇತೃತ್ವದಲ್ಲಿ ಮೆರವಣಿಗೆ
ಜಾವಗಲ್: ಹೋಬಳಿಯ ಕೆರೆಕೆಟ್ಟೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಜಾವಗಲ್ ಬಂದ್ ಆಚರಿಸಲಾಯಿತು. ಕೋಳಗುಂದ ಕೇದಿಗೆ ಮಠದ ಶ್ರೀ ಜಯಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಜಾವಗಲ್ ಹೋಬಳಿಯ ಎಲ್ಲಾ ಕೆರೆ ಕಟ್ಟೆಗಳಿಗೆ ಯಗಚಿ ಜಲಾಶಯದಿಂದ ನೀರು ಹರಿಸುವಂತೆ ಹರಿಸುವವರೆಗೆ ನಿರಂತರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಹೋಬಳಿಯ ಕೆರೆ ಕಟ್ಟೆಗಳು ಬತ್ತಿ ಹೋಗಿದ್ದು ತೆಂಗು ಮತ್ತು ಅಡಿಕೆ ತೋಟಗಳು ಸಂಪೂರ್ಣವಾಗಿ ಬತ್ತಿ ಹೋಗಿದೆ ರೈತಾಪಿವರ್ಗ ಕಂಗಾಲಾಗಿದ್ದು, ಜೀವನ ನಡೆಸುವುದೆ ದುಸ್ತರವಾಗಿದೆ ಎಂದರು. ರೈತರ ಕಷ್ಟ ವಿಚಾರಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದರು.
ಎಚ್ಚರಿಕೆ: ಹಾಸನ ಎಂದರೆ ಹೊಳೆ ನರಸೀಪುರ ಹಾಗೂ ಚನ್ನರಾಯಪಟ್ಟಣ ಮಾತ್ರ ಎಂದು ರಾಜಕಾರಣಿಗಳು ತಿಳಿದಿದ್ದು, ಬೇಲೂರು ಅರಸೀಕೆರೆ ತಾಲೂಕುಗಳ ಜನರನ್ನು ಪಶುಗಳನ್ನಾಗಿ ಮಾಡಿಕೊಂಡಿದ್ದಾರೆಂದರು. ಹಳೇಬೀಡು, ಮಾದಿಹಳ್ಳಿ, ಜಾವಗಲ್ ಹೋಬಳಿಯ ಕೆರೆ ಕಟ್ಟೆಗಳಿಗೆ ನೀರು ನೀರಾವರಿ ಸೌಲಭ್ಯ ಒದಗಿಸುವವರೆಗೆ ನಿರಂತರವಾಗಿ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಆಕ್ಷೇಪ: ಬೇಲೂರಿನಲ್ಲಿ ಐದು ದಿನಗಳಿಂದ ಪ್ರತಿಭಟನೆ, ಧರಣಿ ನಡೆಸುತ್ತಿದ್ದರು. ಸೌಜನ್ಯಕ್ಕಾಗಿ ಮಾನವೀಯ ದೃಷ್ಟಿಯಿಂದ ಕ್ಷೇತ್ರದ ಶಾಸಕರು ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸದಿರುವುದಕ್ಕೆ ಆಕ್ಷೇಪಿಸಿದರು. ಜಾವಗಲ್ ಹೋಬಳಿಯ ಜನತೆ ನೀರಾವರಿ ಸೌಲಭ್ಯಕ್ಕಾಗಿ ಪಕ್ಷಾತೀತವಾಗಿ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದರು.
ಬದುಕು ಹಸನುಗೊಳಿಸಬಹುದು: ಸರ್ಕಾರಗಳು ಅನ್ನ, ಕ್ಷೀರಾ, ಸೈಕಲ್, ವೃದ್ಧಾಪ್ಯ ಮುಂತಾದ ಯೋಜನೆಗಳನ್ನು ಹಮ್ಮಿಕೊಂಡು ಕೋಟ್ಯಾಂತರ ರೂಗಳನ್ನು ವೆಚ್ಚಮಾಡಿ ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ. ಇದಕ್ಕೆ ಬದಲಾಗಿ ಹಣವನ್ನು ನಿರಾವರಿ ಸೌಲಭ್ಯಕ್ಕೆ ಖರ್ಚು ಮಾಡಿದರೆ ಈ ನಾಡಿನ ರೈತರ ಬದುಕನ್ನು ಹಸನುಗೊಳಿಸಬಹುದಾಗಿದೆ ಎಂದರು.
ಮಾರಗೊಂಡನಹಳ್ಳಿ ಮಠದ ಗುರುಬಸವಾನಂದ ಸ್ವಾಮೀಜಿ ಮಾತನಾಡಿ ನೀರಿನ ಅವಸ್ಥೆಗಾಗಿ ಹೋರಾಟ ಮಾಡುವ ಪರಿಸ್ಥಿತಿ ಉಂಟಾಗಿದೆ ಎಂದರು.
ಆಗ್ರಹ: 700-800 ಅಡಿ ಕೊಳವೆ ಬಾವಿಗಳನ್ನು ಕೊರೆಸಿದರೂ, ಈ ಪ್ರದೇಶದಲ್ಲಿ ನೀರು ಸಿಗುತ್ತಿಲ್ಲ. ಜನ ಜಾನುವಾರುಗಳ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದ್ದು, ಸರ್ಕಾರ ಕೂಡಲೇ ಜಾವಗಲ್ ಹೋಬಳಿ ಕೆರೆ ಕಟ್ಟೆಗಳಿಗೆ ನೀರು ಹರಿಸುವಂತೆ ಆಗ್ರಹಪಡಿಸಿದರು. ದಲಿತ ಮುಖಂಡ ಜೆ.ಆರ್.ಇಂದ್ರೇಶ್, ಕರಾವೇ ಅಧ್ಯಕ್ಷ ದಯಾನಂದ, ಭಾನುಪ್ರಕಾಶ್, ಜೆ.ಎಂ.ಲೋಕೇಶ್, ವಿ.ಟಿ.ಎಸ್. ನಾಗರಾಜ್, ಜೆ.ಎಂ. ಮಂಜುನಾಥಶೆಟ್ಟಿ, ಗ್ರಾಪಂ ಸದಸ್ಯ ರಮೇಶ್ ಮಾತನಾಡಿದರು.
ಬಂದ್ಗೆ ಕರಾವೇ, ರೈತ ಸಂಘ ದಲಿತ ಸಂಘಟನೆ ಸೇರಿದಂತೆ ನಾನಾ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು. ಬಂದ್ ಕರೆಗೆ ಅಂಗಡಿ ಮುಗ್ಗಟ್ಟುಗಳನ್ನು ಮಧ್ಯಾಹ್ನ 3ರವರೆಗೆ ಮುಚ್ಚಲಾಗಿತ್ತು. ಎಂದಿನಂತೆ ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿದವು. ಎಂದಿನಂತೆ ಕೆಎಸ್ಆರ್ಟಿಸಿ ಬಸ್ಸಂಚಾರ ಇತ್ತಾದರೂ, ಮಧ್ಯೆ 2 ಗಂಟೆ ಸಂಚಾರ ಸ್ಥಗಿತಗೊಳಿಸಲಾಗಿತ್ತು.