ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪತಿ ಬಿಟ್ಟು ಬಂದಿದ್ದ ಬಾಲಕಿ ಬಾಲ ಮಂದಿರಕ್ಕೆ

Rashmi Kasaragodu
Updated On : 25 Jan 2014, 1:38 am

 ಪಿ. ಶಾಂತಕುಮಾರ್
ಅರಸೀಕೆರೆ: ಗಂಡನ ಕಿರುಕುಳ ತಾಳಲಾರದೆ ಬೇಸತ್ತು ಮೂವರು ಸ್ನೇಹಿತರೊಂದಿಗೆ ಮನೆ ಬಿಟ್ಟು ಬಂದಿದ್ದ ಅಪ್ರಾಪ್ತ ಬಾಲಕಿ ಅನ್ನಪೂರ್ಣ (14) ರಕ್ಷಣೆಗಾಗಿ ಚಿಕ್ಕಮ್ಮನ ಮನೆಗೆ ಬಂದಿದ್ದಳು.
ಈ ವೇಳೆ ಹಿಂಬಾಲಿಸಿದ ಗಂಡ, ಆಕೆಯನ್ನು ಪುನಃ ಕರೆದೊಯ್ಯಲು ಯತ್ನಿಸಿದ್ದು ವಿಫಲವಾಗಿ, ಪಟ್ಟಣದ ಕೆಂಪೇಗೌಡ ವೇದಿಕೆಯ ಸದಸ್ಯರು ಶಿಲ್ಪಶ್ರೀ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆತಂದರು. ಅಪಾಯದ ಮುನ್ಸೂಚನೆ ಅರಿತ ಪತಿರಾಯ ಸ್ಥಳದಿಂದ ಪರಾರಿಯಾಗಿದ್ದು, ಅಪ್ರಾಪ್ತ ಬಾಲಕಿಯನ್ನು ಹಾಸನದ ಬಾಲಕಿಯರ ಮಂದಿರಕ್ಕೆ ಕಳುಹಿಸಲಾಗಿದೆ.
ಚಿಂತಾಮಣಿಯ ಗಾಂಧಿನಗರದ ವಾಸಿ ಪದ್ಮಾವತಿ ಈಕೆಯ ತಾಯಿಯಾಗಿದ್ದು, ಕಳೆದ 4 ವರ್ಷದಿಂದ ಈಗ ಅನ್ನಪೂರ್ಣಳನ್ನು ಮದುವೆಯಾಗಿರುವ ರಮೇಶ (39) ಇವರ ಮನೆಯಲ್ಲೇ ಇದ್ದು ಈಕೆಯನ್ನು ಮದುವೆ ಮಾಡಿಕೊಡುವಂತೆ ಆಕೆಯ ತಾಯಿ ಪದ್ಮವತಿಯನ್ನು ಹೊಡೆದು ಬಡಿದು ಬೆದರಿಸುತ್ತಿದ್ದನೆಂದು ಅನ್ನಪೂರ್ಣ ಹೇಳಿದ್ದಾರೆ.
ಇದರಿಂದ ಆಕೆಯ ತಾಯಿ ಇವಳನ್ನು ಆಂಧ್ರದ ಸೋಮಾಜನಹಳ್ಳಿ ವಸತಿನಿಲಯಕ್ಕೆ ಸೇರಿಸಿದ್ದಳು. ನಂತರ ಬೆಂಗಳೂರಿನಲ್ಲಿ ಮನೆಗೆಲಸಕ್ಕೆ ಸೇರಿಸಿದ್ದಳು. ಆದರೂ ಈತ ರಮೇಶ ಅಲ್ಲಿಗೂ ಹೋಗಿ ಕಿರುಕುಳ ನೀಡುತ್ತಿದ್ದನೆಂದು ಬಾಲಕಿ ಹೇಳಿಕೆಯಲ್ಲಿ ತಿಳಿಸಿದ್ದಾಳೆ.
ಚಿಕ್ಮಮ್ಮನ ಮನೆಗೆ: ಈತನ ಬೆದರಿಕೆಗೆ ತಲೆಬಾಗಿ, ಪದ್ಮಾವತಿಯನ್ನು ಒಂದು ತಿಂಗಳ ಹಿಂದೆ ತಮ್ಮ ಮನೆ ಪಕ್ಕದಲ್ಲಿದ್ದ ಬಹದ್ದೂರ್ ಸಿಂಗ್ ಅವರೊಂದಿಗೆ ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ರಮೇಶನೊಂದಿಗೆ ಮದುವೆ ಶಾಸ್ತ್ರ ಮುಗಿಸಿದ್ದಾರೆ. ಆದರೆ, ರಮೇಶನಿಗೆ ಈ ಹಿಂದೆಯೇ ಮದುವೆಯಾಗಿತ್ತು. ಈತನ ಕಿರುಕುಳ ತಾಳಲಾರದೆ ಪತ್ನಿ ಈತನಿಂದ ದೂರವಿದ್ದಳು. ಈ ಬಾರಿಯೂ ಅದೇ ಕಾಟ ಮುಂದುವರಿದಿದೆ. 2ನೇ ಮದುವೆಯಾದ ನಂತರವೂ ರಮೇಶ, ತಾಯಿ ಹಾಗೂ ಮಗಳಿಗೆ ಕಿರುಕುಳ ನೀಡುತ್ತಿದ್ದರಿಂದ ಮನನೊಂದ ಅನ್ನಪೂರ್ಣ ಮನೆಬಿಟ್ಟು ಹೊರಡಲು ಅನುವಾದಾಗ ಪಕ್ಕದ ಮನೆಯ ಬಹುದ್ದೂರ್ ಸಿಂಗ್ ಮಕ್ಕಳಾದ ಸಂಧ್ಯಾ, ಸುಜಾತ ಹಾಗೂ ಸೂರಜ್ ನಮ್ಮ ತಂದೆಯೂ ಕಿರುಕುಳ ನೀಡುತ್ತಿರುವುದ ತಾವೂ ಮನೆ ಬಿಟ್ಟು ಬರುವುದಾಗಿ ಹೇಳಿ, ಹಾಗೆಯೇ ಮಾಡಿದ್ದಾರೆ. ಹಾಗಾಗಿ, ಈ ನಾಲ್ಕೂ ಮಂದಿ ಅರಸೀಕೆರೆಯಲ್ಲಿರುವ ಅನ್ನಪೂರ್ಣಳ ಚಿಕ್ಕಮ್ಮನ ಮನೆಗೆ ಆಗಮಿಸಿದ್ದಾರೆ.
ಮಕ್ಕಳು ಈ ರೀತಿ ಮನೆಬಿಟ್ಟು ಬಂದಿರುವುದು ಹಾಗೂ ಅವರ ವಿಚಾರಗಳನ್ನು ತಿಳಿದ ನಂತರ ಅವರು ಕೆಂಪೇಗೌಡ ವೇದಿಕೆಯ ಸದಸ್ಯರಿಗೆ ವಿಚಾರ ತಿಳಿಸಿ ಮಕ್ಕಳಿಗೆ ಅನುಕೂಲ ಕಲ್ಪಿಸಲು ಮನವಿ ಮಾಡಿದರು.
ತಕ್ಷಣವೇ ಅವರನ್ನು ಮಹಿಳಾ ಸಾಂತ್ವಾನ ಕೇಂದ್ರದ ಸಮಾಜ ಕಾರ್ಯಕರ್ತೆಯರಾದ ಲೀಲಾವತಿ, ಕಮಲಾಕ್ಷಿ, ಮಂಗಳ ಅವರ ಬಳಿಗೆ  ಕರೆದೊಯ್ದು ಇವರಿಗೆ ನ್ಯಾಯ ವದಗಿಸುವಂತೆ ಮನವಿ ಮಾಡಿದರು. ತಕ್ಷಣವೇ ಕಾರ್ಯ ಪ್ರವೃತ್ತರಾದ ಮಹಿಳಾ ಸಾಂತ್ವನ ಕೇಂದ್ರದ ಸದಸ್ಯರು ಗುರುವಾರ ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಹಾಗೂ ಹಾಸನದ ಚೈಲ್ಡ್ ಲೈನ್ಗೆ ದೂರವಾಣಿಯ ಮೂಲಕ ವಿಚಾರ ತಿಳಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯ: ಹಾಸನದ ಚೈಲ್ಡ್ ಲೈನ್ ಮುಖ್ಯಸ್ಥೆ ಶಶಿಕಲಾ 1 ಗಂಟೆಯ ವೇಳೆಗೆ ಸ್ಥಳಕ್ಕೆ ಆಗಮಿಸಿದರು. ಆದರೆ ಸ್ಥಳೀಯ ಪೊಲೀಸ್ ಇಲಾಖೆಯ ಆರಕ್ಷಕರಾಗಲಿ ಹಾಗೂ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಅಧಿಕಾರಿಗಳಾಗಲೀ ಮಧ್ಯಾಹ್ನ 3 ಗಂಟೆಯಾದರೂ ಸ್ಥಳಕ್ಕೆ ಯಾರೂ ಸ್ಥಳಕ್ಕೆ ಆಗಮಿಸಲಿಲ್ಲ. ಸುಮಾರು ಹೊತ್ತದ ಮೇಲೆ ಪೊಲೀಸರ ಪೇದೆಗಳು ಆಗಮಿಸಿದರು.
ಆಗ ಆರೋಪಿ ಸ್ಥಳದಲ್ಲೆ ಇದ್ದು ಕೆಂಪೇಗೌಡ ವೇದಿಕೆ ಹಾಗೂ ಮಹಿಳಾ ಸಾಂತ್ವನ ಕೇಂದ್ರದವರೂ ದೂರು ನೀಡುವುದಾಗಿ ತಿಳಿಸಿದರು. ಆದರೆ, ಪೊಲೀಸರು ಆರೋಪಿಯನ್ನು ಹಿಡಿದಿಟ್ಟುಕೊಳದೇ ಹೊರಟು ಹೋಗಿದ್ದಾರೆ. ಇದರಿಂದ ಆರೋಪಿ ಪರಾರಿಯಾಗಿದ್ದಾನೆಂದು ಸ್ಥಳೀಯರು ತಿಳಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement