ಅಧಿಕಾರಿಗಳ ಕಾರ್ಯಾಚರಣೆ:ಅಕ್ರಮ ಮರಳು ಲಾರಿಗಳ ವಶ
ಸಕಲೇಶಪುರ: ದಿಢೀರ್ ಕಾರ್ಯಾಚರಣೆ ನಡೆಸಿದ ಕಂದಾಯ ಇಲಾಖೆ ಅಧಿಕಾರಿಗಳ ತಂಡ, ಅಕ್ರಮವಾಗಿ ಮಂಗಳೂರಿನಿಂದ ಬೆಂಗಳೂರಿಗೆ ಸಾಗಾಟ ನಡೆಸುತ್ತಿದ್ದ 10 ಮರಳು ಲಾರಿಗಳನ್ನು ವಶಪಡಿಸಿಕೊಂಡ ಘಟನೆ ಗುರುವಾರ ರಾತ್ರಿ ಪಟ್ಟಣದಲ್ಲಿ ನಡೆದಿದೆ. ಮೂರು ತಿಂಗಳಿನಿಂದ ಪ್ರತಿದಿನ ನಿರಂತರ 50 ಲಾರಿಗಳಲ್ಲಿ ಮರಳು ಸಾಗಿಸಲಾಗುತ್ತಿದೆ ಎಂಬ ದೂರು ವ್ಯಾಪಕವಾಗಿ ಕೇಳಿ ಬಂದಿತ್ತು.ಈ ಹಿನ್ನೆಲೆಯಲ್ಲಿ ಪಟ್ಟಣದ ಗ್ರಾಮಾಂತರ ಠಾಣೆಯಲ್ಲಿ ಹೆದ್ದಾರಿಗೆ ಬ್ಯಾರಿಕೇಡ್ ಇಟ್ಟು ಮರಳು ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಮಂಗಳೂರಿನಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಮರಳು ಲಾರಿಗಳು ನಿಗಧಿಗಿಂತ ಅಧಿಕ ಭಾರ ಹೊತ್ತು ಸಾಗುತ್ತಿರುವುದು ಈ ಸಂದರ್ಭದಲ್ಲಿ ಕಂಡು ಬಂದಿದೆ. ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರ್ಯಾಚರಣೆಯ ನೇತೃತ್ವವವನ್ನು ಕಂದಾಯ ನಿರೀಕ್ಷಕ ಗಜೇಂದ್ರ ಮೋಕ್ಷ ವಹಿಸಿದ್ದರು. ಗ್ರಾಮ ಲೆಕ್ಕಿಗರಾದ ಲೋಕೇಶ್, ಮಧುಸೂದನ್ ಇದ್ದರು.