ಮೂಲ ಸೌಲಭ್ಯ ನೀಡದಿದ್ದರೆ ಪ್ರತಿಭಟನೆ
ಹಾಸನ: ಹಾಸನ ವೈದ್ಯಕೀಯ ಕಾಲೇಜಿನ 16 ವಿಭಾಗಗಳಲ್ಲಿ ಸ್ನಾತಕೋತ್ತರ ಕೋರ್ಸ್ಗಳನ್ನು ಆರಂಭಿಸುವ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ತಜ್ಞರ ತಂಡ ಭೇಟಿ ಸದ್ಯದಲ್ಲೇ ಭೇಟಿ ನೀಡಲಿದ್ದು, ಅಷ್ಟರೊಳಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು. ಇಲ್ಲದಿದ್ದರೇ ಸಂಬಂಧಿಸಿದ ಸಚಿವರ ನಿವಾಸದ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ಜೆಡಿಎಸ್ ಮುಖಂಡರಾದ ಮಾಜಿ ಸಚಿವ ಎಚ್.ಡಿ. ರೇವಣ್ಣ ಎಚ್ಚರಿಕೆ ನೀಡಿದ್ದಾರೆ.
ಕಾಲೇಜಿನಲ್ಲಿ ಎಂಸಿಐ ನಿಯಮಗಳಂತೆ ಸ್ಕ್ಯಾನಿಂಗ್ ಮತ್ತಿತರ ಉಪಕರಣಗಳು, 700 ಹಾಸಿಗೆಗಳುಳ್ಳ ಆಸ್ಪತ್ರೆ ಮತ್ತು ಅಗತ್ಯದಷ್ಟು ತಜ್ಞ ವೈದ್ಯರು ಬೇಕು. ಅಷ್ಟನ್ನು ಸರ್ಕಾರ ಒದಗಿಸಲು ತ್ವರಿತ ಕ್ರಮ ಜರುಗಿಸಬೇಕು. ಹಾಗೇ ಮಾಡಿದರೇ ಕಡು ಬಡ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ವೈದ್ಯಕೀಯ ಪದವಿ ಸಿಗುತ್ತದೆ. ಖಾಸಗಿ ಕಾಲೇಜುಗಳಲ್ಲಿ ಕೋಟಿಗಟ್ಟಲೇ ಹಣ ನೀಡಿ, ಪಿಜಿ ಕೋರ್ಸ್ ಮಾಡಲು ಸಾಧ್ಯವಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸರ್ಕಾರಕ್ಕೆ ಒತ್ತಾಯ: ವೈದ್ಯಕೀಯ ಕಾಲೇಜು ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ಮೂಲ ಸೌಲಭ್ಯಗಳ ಆಧಾರದ ಮೇಲೆ ಪಿಜಿ ಕೋರ್ಸ್ಗಳ ಸೀಟುಗಳ ಪ್ರಮಾಣವನ್ನು ನಿಗದಿ ಮಾಡಲಾಗುತ್ತದೆ. ಸರ್ಕಾರ ರಾಜಕೀಯ ಕಾರಣಗಳನ್ನು ಬಿಟ್ಟು ಸರಿಯಾಗಿ ಸೌಲಭ್ಯವನ್ನು ಇಲ್ಲಿನ ಕಾಲೇಜು. ಆಸ್ಪತ್ರೆಗೆ ಕಲ್ಪಿಸಿದರೆ, 200 ಪಿಜಿ ಸೀಟುಗಳನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಇಂಥಹ ಅವಕಾಶವನ್ನು ಮಿಸ್ ಮಾಡಿಕೊಳ್ಳಬಾರದು. ಮೂಲ ಸೌಲಭ್ಯ ಗಳನ್ನು ಒದಗಿಸುವ ಕಾರ್ಯವನ್ನು ಸಮರೋಪಾದಿಯಲ್ಲಿ ನಡೆಸಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಖಾಸಗಿ ಕೈವಾಡ?
ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯಕೀಯ ಆಸ್ಪತ್ರೆಗಳು ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗದಂತೆ ಪರಿಸ್ಥಿತಿ ನಿರ್ಮಾಣ ಮಾಡಿರುವ ಹಿಂದೆ ಖಾಸಗಿಗೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಕೈವಾಡ ಇರಬಹುದು ಎಂದು ರೇವಣ್ಣ ಶಂಕಿಸಿದರು.