ಯಗಚಿ ಏತ ನೀರಾವರಿ ಮಾ. 30ರೊಳಗೆ ಪೂರ್ಣ
ಕ.ಪ್ರ. ವಾರ್ತೆ ಟಿ ಹಾಸನ ಟಿ ಜ. 25
ಹಳೇಬೀಡು- ಮಾದಿಹಳ್ಳಿ ಏತ ನೀರಾವರಿ ಕಾಮಗಾರಿ ಮಾ. 30ರೊಳಗೆ ಪೂರ್ಣಗೊಳಿಸಿ ನೀರು ಹರಿಸುವಂತೆ ಸಭೆಯಲ್ಲಿ ಶನಿವಾರ ತೀರ್ಮಾನಕೈಗೊಳ್ಳಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಹಾಗೂ ಯಗಚಿ ಹೋರಾಟ ಸಮಿತಿ, ರಾಜ್ಯ ರೈತ ಸಂಘ ಸೇರಿದಗಂತೆ ನಾನಾ ಸಂಘಟನೆಗಳ ಸಭೆ ನಡೆಸಲಾಯಿತು.
ನಂತರ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಮಾತನಾಡಿ, ಅರಣ್ಯ ಭೂಮಿಯಲ್ಲಿ ಕೇವಲ 900 ಮೀಟರ್ನಷ್ಟು ಮಾತ್ರ ಕಾಲುವೆ ಹಾದು ಹೋಗಲಿರುವುದರಿಂದ ಆ ಭೂಮಿ ಸ್ವಾಧೀನಕ್ಕೆ ಅರಣ್ಯ ಇಲಾಖೆಗೆ ಬೇರೆಡೆ 10 ಎಕರೆ ಜಾಗವನ್ನು 7 ದಿನಗಳ ಒಳಗಾಗಿ ನೀಡಲಾಗುತ್ತದೆ. ನಂತರ ಅಲ್ಲಿ ಕಾಮಗಾರಿ ಪ್ರಾರಂಭಿಸಲು ಎಂಜಿಯರ್ಗೆ ಅನುಮತಿ ನೀಡಲಾಗುತ್ತದೆ. 10 ಎಕರೆಗೂ ಮೇಲ್ಪಿಟ್ಟು ಜಾಗ ನೀಡಲು ಸರ್ಕಾರದ ಅನುಮತಿ ಬೇಕಾಗುತ್ತದೆ. ಇದು 10 ಎಕರೆ ಒಳಗೆ ಆಗಿರುವುದರಿಂದ ಅದು ಜಿಲ್ಲಾಡಳಿತಕ್ಕೆ ನೀಡುವ ಅವಕಾಶವಿದೆ ಎಂದರು.
ಮಾ. 30ರೊಳಗೆ ಕಾಮಗಾರಿ: ಕೆಪಿಟಿಸಿಎಲ್ ಹಾಗೂ ಚೆಸ್ಕಾಂ ಅಧಿಕಾರಿಗಳು ಫೆ. 28ರೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವುದಾಗಿ ತಿಳಿಸಿದ್ದಾರೆ ಎಂದ ಅವರು, ಜೊತೆಗೆ ಸರ್ಕಾರಿ ಕೆಲಸ ಕಾರ್ಯಗಳಿಗೆ ಅವಶ್ಯಕವಾಗಿರುವಷ್ಟು ಮರಳು ಮತ್ತು ಜಲ್ಲಿಯನ್ನು ಜಿಲ್ಲಾಡಳಿತ ಒದಗಿಸಲು ಸಿದ್ಧವಿದ್ದು, ಗುತ್ತಿಗೆದಾರರು ಅರ್ಜಿಯನ್ನು ಸಲ್ಲಿಸಬೇಕು. ಆದರೆ, ಸರ್ಕಾರಿ ಕೆಲಸ ಕಾರ್ಯಗಳಿಗೆ ಬಿಟ್ಟು ಬೇರೆಯವರಿಗೆ ಮರಳು ಮತ್ತು ಜಲ್ಲಿಯನ್ನು ಮಾರಾಟ ಮಾಡಬಾರದು. ಆದ್ದರಿಂದ ಮಾ. 30ರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.
ಎಚ್ಚರಿಕೆ: ಕಾಮಗಾರಿಯನ್ನು ಬೇಗ ಪೂರ್ಣಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ ಅಂತ ಅಧಿಕಾರಿಗಳು ಗುಣಮಟ್ಟವನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು. ಅಂತಿಮದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವ ಮೂಲಕ ಮಾತಿಗೆ ಬದ್ಧರಾಗಬೇಕು. ಇಲ್ಲವಾದರೆ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿ ಮಾಡುವುದಾಗಿ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಭರವಸೆ: ಕಾಮಗಾರಿ ಪೂರ್ಣಗೊಳ್ಳಲು ಅರಣ್ಯ ಇಲಾಖೆ, ವಿದ್ಯುತ್ ಇಲಾಖೆ, ಹೆದ್ದಾರಿ ಇಲಾಖೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಜಿಲ್ಲಾಡಳಿತ ಬಗೆಹರಿಸಿಕೊಟ್ಟರೆ ಮಾಚ್.30ರೊಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಹಳೇಬೀಡು ಮತ್ತು ಮಾದಿಹಳ್ಳಿ ಹೋಬಳಿಗಳಿಗೆ ನೀರು ಹರಿಸುವುದಾಗಿ ನೀರಾವರಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ರಾಜಶೇಖರ್ ಅವರು ಭರವಸೆ ನೀಡಿದರು.
ಪೂರ್ಣಗೊಂಡಿಲ್ಲ: ಇದಕ್ಕೂ ಮೊದಲು ರೈತ ಮುಖಂಡ ಕೆ.ಎಂ. ರಾಜೇಗೌಡ ಮಾತನಾಡಿ, ಬರಗಾಲದಿಂದ ತತ್ತರಿಸುತ್ತಿರುವ ಹಳೇಬೀಡು, ಮಾದೀಹಳ್ಳಿ ಹಾಗೂ ಜಾವಗಲ್ ಹೋಬಳಿಗೆ ಯಗಚಿ ಜಲಾಶಯದಿಂದ ನೀರಿನ ಸೌಲಭ್ಯ ಕಲ್ಪಿಸಲು ಆರಂಭಿಸಿರುವ ಏತ ನೀರಾವರಿ ಕಾಮಗಾರಿ ವಿಳಂಬವಾಗಿದೆ. ರು. 11 ಕೋಟಿಗಳ ಯೋಜನೆಯಾಗಿದ್ದು, ಕಳೆದ ಡಿಸೆಂಬರ್ನಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಲಾಗಿತ್ತು. ಆದರೂ ಸಹ ಕಾಮಗಾರಿ ಪೂರ್ಣಗೊಂಡಿಲ್ಲ.
ಮಾಹಿತಿ ನೀಡಲು ಸೂಚನೆ: ಅರಣ್ಯ ಇಲಾಖೆ, ಹೆದ್ದಾರಿ ಹಾಗೂ ವಿದ್ಯುತ್ ಇಲಾಖೆಯ ಕಾಮಗಾರಿಗಳು ಬಾಕಿ ಉಳಿದಿದೆ. ಈ ಇಲಾಖೆಗಳು ಸರಿಯಾಗಿ ಗುತ್ತಿಗೆದಾರರಿಗೆ ಸ್ಪಂದಿಸುತ್ತಿಲ್ಲ ಎಂಬ ದೂರು ಕೇಳಿಬಂದಿದ್ದು, ಅಧಿಕಾರಿಗಳು ಅಸಹಕಾರರಾಗಿದ್ದಾರೆ.
ಆದ್ದರಿಂದ 1 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿದ ಅವರು, 10 ದಿನಗಳಿಗೊಮ್ಮೆ ಕಾಮಗಾರಿಯ ಬಗ್ಗೆ ಮಾಹಿತಿ ನೀಡುವಂತೆ ಹೇಳಿದರು.
ಶಾಸಕರ ಎಚ್ಚರಿಕೆ: ಶಾಸಕ ವೈ.ಎನ್.ರುದ್ರೇಶ್ ಗೌಡ ಮಾತನಾಡಿ, ಈ ಕಾಮಗಾರಿ ತಡವಾಗಲು ಕಾರಣ ಹಿಂದಿನ ಅಧಿಕಾರಿಗಳು ಸರಿಯಾಗಿ ಕೊನೆ ದಿನ ಹೇಳಿರಲ್ಲಿ.
ಜೊತೆಗೆ ನೀರು ಅರಣ್ಯ ಇಲಾಖೆಯ ಜಾಗದಲ್ಲಿ ಹರಿಯುತ್ತದೆ ಎಂಬ ಮಾಹಿತಿಯನ್ನು ಹಿಂದಿನ ಅಧಿಕಾರಿಗಳು ನೀಡಿರಲಿಲ್ಲ. ಈಗಿನ ನೀರಾವರಿ ಅಧಿಕಾರಿಗಳು ಮಾ. 30ರೊಳಗೆ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸುವುದಾಗಿ ಹೇಳಿದ್ದಾರೆ.
ಆದ್ದರಿಂದ ಅಧಿಕಾರಿಗಳು ಯಾವುದೇ ಕಾರಣಕ್ಕೂ ಮಾತಿಗೆ ತಪ್ಪಬಾರದು ಎಂದು ಎಚ್ಚರಿಕೆ ನೀಡಿದರು.
ಭರವಸೆ: ಜೊತೆಗೆ ಜಾವಗಲ್ಗೆ ನೀರನ್ನು ಹರಿಸುವ ಬಗ್ಗೆ ಸಚಿವರೊಂದಿಗೆ ಮಾತನಾಡಿದ್ದು, ಅದರ ಅಂದಾಜು ಪಟ್ಟಿ ಸಿದ್ದವಾಗಿದೆ.
ಮುಂದಿನ ವಾರದಲ್ಲಿ ಸಚಿವರು ಸಭೆಯನ್ನು ಕರೆದಿದ್ದು, ಆ ಬಗ್ಗೆ ಅನುಮತಿ ನೀಡುವ ಬಗ್ಗೆ ಭರವಸೆ ಇದೆ ಎಂದರು.
ಮಾಹಿತಿ: ನೀರಾವರಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ರಾಜಶೇಖರ್ ಮಾತನಾಡಿ, ಹಳೇಬೀಡು-ಮಾದಿಹಳ್ಳಿ ಏತ ನೀರಾವರಿಗೆ ರು. 11 ಕೋಟಿ ಯೋಜನೆಯಾಗಿದ್ದು, 6.20 ಕೋಟಿ ರು.ಗಳ ಕಾಮಗಾರಿ ಪ್ರಗತಿಯಾಗಿದೆ. ಕೆಲ ತಾಂತ್ರಿಕ ಕಾರಣಗಳಿಂದ ತಡವಾಗಿದೆ ಎಂದು ಮಾಹಿತಿ ನೀಡಿದರು.
ಕೆಪಿಟಿಸಿಎಲ್ ಹಾಗೂ ಚೆಸ್ಕಾಂ ಅಧಿಕಾರಿಗಳು ಮಾತನಾಡಿ, ಫೆ. 28ರೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬೇಕಾದಂತಹ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿಕೊಡಲಾಗುತ್ತದೆ. ಈಗಾಗಲೇ ಆಡಳಿತ ಅನುಮೋದನೆ ಕೂಡ ಆಗಿದೆ ಎಂದು ಮಾಹಿತಿ ನೀಡಿದರು.
28ರಂದು ಡಿಸಿ ಭೇಟಿ, ಪರಿಶೀಲನೆ
ಮುಂದಿನ ಮಂಗಳವಾರ ನಾನೇ ಖುದ್ದಾಗಿ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಗುತ್ತದೆ. ಆದ್ದರಿಂದ ಅಧಿಕಾರಿಗಳು ಏನೇ ಸಮಸ್ಯೆ ಇದ್ದರೂ ಅದನ್ನು ನೇರವಾಗಿ ನನ್ನ ಬಳಿ ಹೇಳುವಂತೆ ಸೂಚಿಸಿದರು ಅವರು, ರೈತ ಮುಖಂಡರು ಇಲ್ಲಿರುವುದರಿಂದ ಅವರ ಬೇಡಿಕೆಗಳಾದ ಪಹಣಿ ತಿದ್ದುಪಡಿ ಕಾರ್ಯ ನಡೆಯುತ್ತಿದ್ದು, ಈಗಾಗಲೇ 6 ಸಾವರಿ ಪಹಣಿ ತಿದ್ದುಪಡಿಯಾಗಿದೆ. ಇನ್ನು 6 ಸಾವಿರ ಪಹಣಿಗಳು ತಿದ್ದುಪಡಿ ಕಾರ್ಯ ನಡೆಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್, ಹೆಚ್ಚುವರಿ ಜಿಲ್ಲಾಧಿಕಾರಿ ಗೋಪಾಲಕೃಷ್ಣ ಹಾಗೂ ಇತರರು ಇದ್ದರು.