ಲೋಕಾಯುಕ್ತ ಎಸ್ಪಿ ದಿಢೀರ್ ಭೇಟಿ: ಪರಿಶೀಲನೆ
ಚನ್ನರಾಯಪಟ್ಟಣ: ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ಅವರು ಪಟ್ಟಣದ ಪುರಸಭೆ ಹಾಗೂ ತಾಲೂಕು ಕಚೇಗೆ ದಿಢೀರ್ ಭೇಟಿ ನೀಡಿ ಸಾರ್ವಜನಿಕರಿಂದ ದೂರುಗಳ ವಿವರ ಪಡೆದರು. ಸಾರ್ವಜನಿಕರು ಪಟ್ಟಣದ ಪುರಸಭೆಯಲ್ಲಿ ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಸುತ್ತಿ ಸಾಕಾಗಿ ಬಗೆಹರಿಯದ ಕಾರಣ ಲೋಕಾಯುಕ್ತರಿಗೆ ನೀಡಿದ್ದ ಹಲವು ದೂರುಗಳ ಪಟ್ಟಿಯೊಂದಿಗೆ ಜಿಲ್ಲಾ ಎಸ್ಪಿ ವೇದಮೂರ್ತಿ ಈ ಭೇಟಿ ನೀಡಿದ್ದರು.
ಪುರಸಭಾ ಮುಖ್ಯಾಧಿಕಾರಿ ಚಂದ್ರಶೇಖರ್ ಹಾಸನದ ಜಿಲ್ಲಾಧಿಕಾರಿಗಳು ಕರೆದಿದ್ದ ಸಭೆಗೆ ತೆರಳಿದ್ದ ಕಾರಣ ಲೋಕಾಯುಕ್ತರಿಗೆ ಸಮಗ್ರ ಮಾಹಿತಿ ದೊರೆಯದಿದ್ದರೂ ಹಲವು ದೂರುಗಳ ಬಗ್ಗೆ ದಾಖಲಾತಿಗಳನ್ನು ಪರಿಶೀಲಿಸಿದರು.
ತರಾಟೆಗೆ: ಪಟ್ಟಣದಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದವರಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಸಂಗ್ರಹಿಸಿ ಅದನ್ನು ಇಲಾಖೆಗೆ ಸಂದಾಯ ಮಾಡದೆ ದುರುಪಯೋಗಪಡಿಸಿಕೊಂಡಿದ್ದ ಬಿಲ್ ಕಲೆಕ್ಟರ್, ದುರ್ಗಾಪ್ರಸಾದ್ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಹಾಗೂ ಸರ್ಕಾರಕ್ಕೆ ಆತನಿಂದ ಸಲ್ಲಬೇಕಾಗಿದ್ದ ರು. 11 ಲಕ್ಷ ಹಣವನ್ನು ವಸೂಲಿ ಮಾಡುವ ಮಾರ್ಗದ ಬಗ್ಗೆ ಪುರಸಭಾ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು. ಹಣ ದುರುಪಯೋಗ ಮಾಡಿಕೊಂಡಿರುವ ದುರ್ಗಾಪ್ರಸಾದ್ನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದ ಪುರಸಭಾ ಅಧಿಕಾರಿಗಳ ಉತ್ತರಕ್ಕೆ ಬೇಸರಗೊಂಡು ಆತನ ವಿರುದ್ಧ ಪೊಲೀಸ್ ಎಪ್ಐಆರ್ ದಾಖಲಿಸಿ, ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಸೂಚನೆ ನೀಡಿದರು. ಪಟ್ಟಣದ ಮೈಸೂರು ರಸ್ತೆಯ ಜಗದೀಶ್ ಅವರಿಗೆ ಸೇರಿದ ಆಸ್ತಿಯನ್ನು ಒತ್ತುವರಿ ಮಾಡಿಸಿ ಮೂಲ ದಾಖಲಾತಿಯನ್ನು ತಿದ್ದಿ, ಜಯಚಂದ್ರ ಗುಪ್ತಾ ಅವರಿಗೆ ಖಾತೆ ಮಾಡಲಾಗಿದೆ. ಅದನ್ನು ತಮಗೆ ವಾಪಸ್ ಕೊಡಿಸಬೇಕಾಗಿ ಕೋರಿ ಲೋಕಾಯುಕ್ತರಿಗೆ ಸಲ್ಲಿಸಿದ ಅರ್ಜಿಗೆ ಕಾರಣ ಕೇಳಿ ಜ. 2ರಲ್ಲಿ ಪತ್ರ ಬರೆದಿದ್ದರೂ ಯಾವುದೇ ವಿವರ ನೀಡದಿರುವುದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿ ಒಂದು ವಾರದೊಳಗೆ ವಿವರ ನೀಡುವಂತೆ ಅವರು ಎಂದು ಆದೇಶಿಸಿದರು. ನಂತರ ತಾಲೂಕು ಕಚೇರಿಗೆ ಬೇಟಿ ನೀಡಿ ವಿವಿದ ದಾಖಲೆಗಳನ್ನು ಪರಿಶೀಲಿಸಿದ ಅವರು, ಎಲ್ಲಾ ದಾಖಲೆಗಳು ಸರಿಯಾಗಿದ್ದ ಕಾರಣ ತಹಸೀಲ್ದಾರ್ ಡಾ. ನಾಗರಾಜು ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.