ಸನ್ನಿವೇಶಕ್ಕೆ ತಕ್ಕಂತೆ ಬ್ರಾಹ್ಮಣರೂ ಬದಲಾಗಬೇಕು'
ಅರಸೀಕೆರೆ: ಅನಾದಿಕಾಲದಿಂದಲೂ ಬ್ರಾಹ್ಮಣ ಸಮಾಜ ಮುಂಚೂಣಿಯಲ್ಲಿ ನಿಂತು ಇತರರಿಗೆ ಮಾರ್ಗದರ್ಶನ ನೀಡುತ್ತಿದ್ದು, ಆದರೆ ಬದಲಾದ ಪರಿಸ್ಥಿತಿಯಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಹೊಂದಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ. ರಮೇಶ್ ತಿಳಿಸಿದರು.
ಸನ್ನಿವೇಶಕ್ಕೆ ಹೊಂದಿಕೊಳ್ಳಬೇಕು: ಗ್ರಂಥಾಲಯ ರಸ್ತೆಯಲ್ಲಿರುವ ಸೀತಾರಾಮಕಲ್ಯಾಣ ಮಂದಿರದಲ್ಲಿ ಮಂಗಳವಾರ ನಡೆದ ತಾಲೂಕು ಬ್ರಾಹ್ಮಣ ಸಂಘದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಹಿಂದೆ ಬ್ರಾಹ್ಮಣರನ್ನು ಶ್ರೇಷ್ಠತೆಯ ಸಾಲಿನಲ್ಲಿ ಕಾಣುವ ಮೂಲಕ ಗೌರವ ನೀಡುವ ಪದ್ಧತಿ ಅನುಷ್ಠಾನದಲ್ಲಿತ್ತು. ಆದರೆ ಬದಲಾದ ವಿದ್ಯಮಾನದಲ್ಲಿ ವಿಪ್ರ ಸಮುದಾಯವು ಸಮಾಜದ ಸನ್ನಿವೇಶಕ್ಕೆ ಹೊಂದಿಕೊಂಡು ಹೋಗುವಂತಹ ಸ್ಥಿತಿ ಇದ್ದು ಇದಕ್ಕಾಗಿ ಯಾರೂ ಆತಂಕಪಡಬೇಕಿಲ್ಲ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಹಾಗೂ ಸಂಸ್ಕಾರ ನೀಡಿ ಒಳ್ಳೆಯ ಪ್ರಜೆಗಳನ್ನಾಗಿ ಮಾಡುವ ಮೂಲಕ ಪ್ರಸಕ್ತ ಸನ್ನಿವೇಶಕ್ಕೆ ಹೊಂದಿಕೊಳ್ಳಬೇಕೆಂದು ಕರೆ ನೀಡಿದರು.
ಜನಮನ ಸೆಳೆದ ಸೀತಾ ದರ್ಶನ ನಾಟಕ
ಹಾರನಹಳ್ಳಿ: ತಿಪಟೂರು ಹೇಮಲತಾ ಕಲಾತಂಡ ತಿಪಟೂರು, ಕನ್ನಡ ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಮುದ್ರಿಕ ಪ್ರಧಾನ (ಸೀತಾ ದರ್ಶನ) ಪೌರಾಣಿಕ ನಾಟಕ ಇತ್ತೀಚೆಗೆ ಹಾರನಹಳ್ಳಿಯ ಚನ್ನಕೇಶವ ದೇವಾಲಯದ ಮುಂಭಾಗದಲ್ಲಿ ಇತ್ತೀಚೆಗೆ ನಾಟಕ ಪ್ರದರ್ಶನ ನಡೆಯಿತು. ನಾಟಕ ಪ್ರದರ್ಶನವನ್ನು ಡಾ. ರಾಮಣ್ಣ ಉದ್ಘಾಟಿಸಿದರು. ನಂತರ ನಿವೃತ್ತ ಶಿಕ್ಷಕ ಹೆಚ್.ಬಿ. ಬಸವಲಿಂಗಪ್ಪ ಮಾತನಾಡಿ, ಜೀವನ ರಂಗವೇ ನಾಟಕವಿದ್ದ ಹಾಗೆ. ಸಮಸ್ಯೆಗಳನ್ನು ಎದುರಿಸಿ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕೆಂದರು. ಹಿನ್ನೆಲೆ ಸಂಗೀತವನ್ನು ಹಾರ್ಮೋನಿಯಂ ವೆಂಕಟೇಶ್, ಕ್ಯಾಸಿಯೋ ಗಂಗಾಧರ್, ಜಿ.ಎಲ್. ಗುರುಮೂರ್ತಿ, ತಬಲ ವಾದನ ನಾಟಕಕ್ಕೆ ವಿಶೇಷವಾಗಿ ಪಕ್ಕಾವಾದ್ಯಗಳು ಮೆರಗು ನೀಡಿತು. ಬಿ.ಕೆ. ರಾಮಯ್ಯ, ಕಲಾವಿದರಾದ ಹೆಚ್.ಎಂ.ಪ್ರಕಾಶ್, ಕೆಂಪರಾಜು ರಂಗಗೀತೆ ಹಾಡಿದರು. ಚಿನ್ಮಯ ಭಾರದ್ವಾಜ್ ಪ್ರಾರ್ಥನೆಯೊಂದಿಗೆ ನಾಟಕ ಆರಂಭವಾಯಿತು.