ಹಿರಿಬೇನೆ ರೋಗದ ಬಗ್ಗೆ ಜಾಗೃತಿ ವಹಿಸಿ
ಅರಸೀಕೆರೆ: ಸಾಮಾನ್ಯವಾಗಿ ಆಡುಗಳಲ್ಲಿ ಕಾಣುವ ಹಿರಿಬೇನೆ (ಪಿ.ಪಿ.ಆರ್) ಕಾಯಿಲೆಯು ಸರ್ವ ಕಾಲದಲ್ಲೂ ಆಡುಗಳಲ್ಲಿ ಕಂಡು ಬರುತ್ತಿದ್ದು, ಇದು ಸೂಕ್ಷ್ಮ ವೈರಾಣುಗಳಿಂದ ಹರಡುವ ಸಾಂಕ್ರಾಮಿಕ ರೋಗ ಆಗಿರುವ ಕಾರಣ ರೈತರು ಅತ್ಯಂತ ಜಾಗರೂಕತೆ ವಹಿಸುವುದು ಸೂಕ್ತ ಎಂದು ಪಶುವೈದ್ಯ ಇಲಾಖೆ ಅಧಿಕಾರಿ ರಾಜು ತಿಳಿಸಿದರು.
ಪಟ್ಟಣದ ಸಮೀಪದ ಕಾರೇಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಪಶುಸಂಗೋಪನಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಎರ್ಪಡಿಸಿದ್ದ ಹಿರಿಬೇನೆ (ಪಿ.ಪಿ.ಆರ್.) ಲಸಿಕಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಸಲಹೆ: ಈ ಮಾರಕ ರೋಗ ನಿಯಂತ್ರಣಕ್ಕೆ ರೈತರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿದ ಅವರು, ರೋಗಗ್ರಸ್ಥ ಆಡುಗಳನ್ನು ಗುಂಪಿನಿಂದ ಪ್ರತ್ಯೇಕಿಸಿ ಪಶುವೈದ್ಯರ ಸಲಹೆ ಪಡೆಯುವುದು ಹಾಗೂ ರೋಗ ನಿರೋಧಕ ಪಿ.ಪಿ.ಆರ್. ಲಸಿಕೆಯನ್ನು ಪಶುವೈದ್ಯರಿಂದ ಹಾಕಿಸಬೇಕೆಂದು ಸಲಹೆ ನೀಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪಿ.ಚನ್ನಪ್ಪಗೌಡ, ಹಿರಿಯ ಪಶುವೈದ್ಯಕೀಯ ಪರೀಕ್ಷಕರಾದ ಬಿ.ಎನ್. ನಾಗರಾಜು, ಬಿ.ಎಂ. ಶಿವಕುಮಾರ್, ಎಚ್.ಡಿ. ಮಹಾಲಿಂಗಪ್ಪ ಭಾಗವಹಿಸಿದ್ದರು.
ಕಸಬಾ ವಲಯದ ಮೇಲ್ವಿಚಾರಕಿಯಾದ ಗೀತಾ ನಿರೂಪಿಸಿದರು. ಹೈನುಗಾರಿಕೆ ಮೇಲ್ವಿಚಾರಕ ಶ್ರೀನಿವಾಸ್ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಅನಿತಾ ವಂದಿಸಿದರು. ಕಾರ್ಯಕ್ರಮದಲ್ಲಿ ಒಟ್ಟು 600 ಆಡುಗಳಿಗೆ ಲಸಿಕೆಗಳನ್ನು ಹಾಕಲಾಯಿತು.
ಲಕ್ಷಣಗಳು
ಆಡುಗಳಲ್ಲಿ ಕಂಡು ಬರುವ ಈ ಸಾಂಕ್ರಾಮಿಕ ರೋಗದ ಲಕ್ಷಣಗಳು ಅತಿಯಾದ ಜ್ವರವಿದ್ದು, ಕಣ್ಣು ಕೆಂಪಾಗಿ, ನೀರು ಸೋರುವುದು, ತದನಂತರ ಬಾಯಲ್ಲಿ ಹುಣ್ಣಾಗಿ ನೊರೆಯಕ್ತ ಜೊಲ್ಲನ್ನು ಸುರಿಸುವ ಆಡುಗಳು ಮೇವು ಬಿಟ್ಟು ನಿಶಕ್ತಿಯಿಂದ ಮಂಕಾಗುವುದಲ್ಲದೇ ಉಸಿರಾಟ ತೊಂದರೆಗೆ ಒಳಗಾಗುತ್ತವೆ. ಜ್ವರ ಕಡಿಮೆಯಾಗುತ್ತಿದಂತೆ ಬೇಧಿ ಕಾಣಿಸಿಕೊಂಡು ನಿತ್ರಾಣಗೊಂಡ ಆಡು ಕಡೆಗೆ ಸಾಯುತ್ತವೆ ಎಂದು ತಿಳಿಸಿದರು.