ಕೆರೆಗಳಿಗೆ ತಡೆಗೋಡೆ ನಿರ್ಮಿಸಿ
ಬೇಲೂರು ಪಟ್ಟಣದ ಸಮೀಪದ ವಿಷ್ಣು ಸಮುದ್ರ ಕೆರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಉರುಳಿ ಸಾಕಷ್ಟು ಸಾವು ನೋವುಗಳು ಉಂಟಾಗಿತ್ತು. ತಕ್ಷಣವೇ ಎಲ್ಲಾ ಕೆರೆಗಳ ಏರಿ ಮೇಲೆ ತಡೆಗೋಡೆ ನಿರ್ಮಿಸಬೇಕೆಂದು ಬೇಲೂರು ಬಂದ್ ಮಾಡಿ ಪ್ರತಿಭಟನೆ ನಡೆಸಿದಾಗ ಕೆಲ ದಿನಗಳಲ್ಲಿ ವಿಷ್ಣು ಸಮುದ್ರ ಕೆರೆ ಮತ್ತು ಚಿಕ್ಕಬ್ಯಾಡಿಗೆರೆ ಕೆರೆಗಳಿಗೆ ಮಾತ್ರ ತಡೆಗೋಡೆ ನಿರ್ಮಿಸಿ, ಉಳಿದ ಕೆರೆಗಳ ಏರಿಗಳಿಗೆ ತಡೆಗೋಡೆ ನಿರ್ಮಿಸಿಲ್ಲ. ಪರಿಣಾಮ ಪಟ್ಟಣದ ಸಮೀಪವಿರುವ ಮೂಡಿಗೆರೆ ರಸ್ತೆಯ ಕಳಸಿನ ಕೆರೆಯ ಪಕ್ಕದ ಹೊಂಡಕ್ಕೆ ಆಟೋಮೊಂದು ಬಿದ್ದು ಅದರಲ್ಲಿದ್ದ ಪ್ರಯಾಣಿಕರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ರೀತಿ ತಾಲೂಕಿನಲ್ಲಿ ಸಾಕಷ್ಟು ಪ್ರಕರಣಗಳು ಸಂಭವಿಸುತಿದ್ದರೂ ಗಮನಹರಿಸದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಗಮನಹರಿಸಬೇಕು.
- ಸೋಮೇಶ್, ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ
ಅಕ್ಕಿರಾಜು, ತಾಲೂಕು ಉಪಾಧ್ಯಕ್ಷ, ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷ
ಪ್ರಯಾಣಿಕರ ಒತ್ತಾಯ
ಅರಸೀಕೆರೆ ಪಟ್ಟಣದಿಂದ ಬಾಣಾವರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ 206ರ ಎಡ, ಬಲ ಬದಿಗಳಲ್ಲಿ ರಸ್ತೆಯ ಸಮೀಪವೇ ಹಣ್ಣುಗಳ ಅಂಗಡಿಗಳನ್ನು ತೆರೆದಿರುವುದು ಅಪಘಾತಕ್ಕೆ ಕಾರಣವಾಗಿದೆ. ಕೂಡಲೇ ಅಂಗಡಿಗಳನ್ನು ತೆರವುಗೊಳಿಸಿ. ಕಳೆದ ಕೆಲವು ತಿಂಗಳುಗಳಿಂದ ತಾಲೂಕಿನ ಕಲ್ಲುನಾಯಕನಹಳ್ಳಿ ಗೇಟ್, ಬೆಂಡೇಕೆರೆ, ಗವಿಮಠ ಸೇರಿದಂತೆ ಕೆಲ ಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ರಸ್ತೆಯ ಸಮೀಪವೇ ನಾನಾ ವಿಧದ ಹಣ್ಣಿನ ಅಂಗಡಿಗಳನ್ನು ತೆರೆದು ವ್ಯಾಪಾರಿಗಳು ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರನ್ನು ಕೂಗಿ ಕರೆಯುವುದರಿಂದ ವಾಹನ ಚಾಲಕರ ಗಮನವನ್ನು ತಮ್ಮತ್ತ ಸೆಳೆದು ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದಾರೆ. ಅಲ್ಲದೇ ರಸ್ತೆಯ ಸಮೀಪವೇ ಅಂಗಡಿಗಳನ್ನು ನಿರ್ಮಿಸಿರುವುದರಿಂದ ವಾಹನ ಸವಾರರು ರಸ್ತೆಯ ಮಧ್ಯಭಾಗದಲ್ಲಿ ವಾಹನ ನಿಲುಗಡೆ ಮಾಡಿ ಖರೀದಿಗೆ ಮುಂದಾಗ ತೊಡಗಿದ್ದಾರೆ. ಇದರಿಂದಾಗಿ ವಾಹನ ದಟ್ಟಣೆ ಹೆಚ್ಚುವುದಲ್ಲದೆ ವೇಗವಾಗಿ ಬರುವ ವಾಹನಗಳಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ತಕ್ಷಣವೇ ಅಂಗಡಿಗಳನ್ನು ತೆರವುಗೊಳಿಸಿ.
- ರಾಜಪ್ಪ, ಗುರು ಸಿದ್ದೇಶ್, ಸಿದ್ದೇಗೌಡ
ನೀರಿಗೆ ಹಾಹಾಕಾರ
ಸಕಲೇಶಪುರ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ಕುಡಿಯುವ ನೀರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಚೆಸ್ಕಾಂ ಇಲಾಖೆ ನಿರ್ಲಕ್ಷ್ಯ ವಹಿಸಿರುವ ಪರಿಣಾಮ ಕುಡಿಯುವ ನೀರಿಗಾಗಿ ಸಂಕಷ್ಟ ಎದುರಿಸ ಬೇಕಾಗಿದೆ. 2011-12 ನೇ ಸಾಲಿನಲ್ಲಿ ಗ್ರಾಮದ ಕುಡಿಯುವ ನೀರಿಗಾಗಿ ಜಿ.ಪಂನಿಂದ ತೆರೆದ ಬಾವಿ ನಿರ್ಮಿಸಿ, ಪೈಪ್ಲೈನ್ ಆಳವಡಿಸಿದ್ದು ಮೋಟರ್ ಸಹ ಜೋಡಿಸಲಾಗಿದೆ. ಆದರೆ ಇದಕ್ಕೆ ಅಗತ್ಯವಿರುವ ವಿದ್ಯುತ್ ಸಂಪರ್ಕವಿಲ್ಲದ ಕಾರಣ ಗ್ರಾಮದ ಜನತೆ ದೂರದಿಂದ ನೀರು ತರಬೇಕಾಗಿದೆ. ಗ್ರಾಮದಲ್ಲಿ ಬಹುತೇಕ ಮಧ್ಯಮ ವರ್ಗದ ಜನರಿದ್ದು ಜಮೀನಿನ ಕೆಲಸ ಮಾಡಿದ ನಂತರ ಕುಡಿಯುವ ನೀರು ತರಲು ಹೋಗಬೇಕಾಗಿದೆ. ಆದರೆ ಕಾಡಾನೆ ಹಾವಳಿ ಹೆಚ್ಚಿರುವ ಗ್ರಾಮದಲ್ಲಿ ಕತ್ತಲಾದ ನಂತರ ನೀರು ತರಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಯವಿಟ್ಟು ಗಮನಹರಿಸಿ.
- ಸಂದೇಶ್, ರಾಜೇಶ್, ಗ್ರಾಮಸ್ಥರು
ಅಡುಗೆ ಕೊಠಡಿ ಪೂರ್ಣಗೊಳಿಸಿ
ಜಾವಗಲ್ ಹೋಬಳಿ ಬಂದೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅಡುಗೆ ಕೊಠಡಿ ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ನೂರಾರು ವಿದ್ಯಾರ್ಥಿಗಳು ಪ್ರತಿನಿತ್ಯ ಬಿಸಿ ಊಟಕ್ಕಾಗಿ ಶಾಲೆಯಿಂದ 1 ಕಿ.ಮೀ ದೂರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಡೆದುಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ. ಶಾಲೆಯ ಅಡುಗೆ ಮನೆಯ ಕೊಠಡಿ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿ 8 ತಿಂಗಳುಗಳಾದರೂರು ಪೂರ್ಣಗೊಂಡಿಲ್ಲ. ಬೇಸಿಗೆ ಕಾಲವಾಗಿರುವುದರಿಂದ ಪ್ರತಿನಿತ್ಯ ಮಧ್ಯಾಹ್ನದ ಸಮಯದಲ್ಲಿ 2 ಕಿ.ಮೀ ದೂರದಷ್ಟು ನಡೆದುಕೊಂಡು ಹೋಗುವುದು ತ್ರಾಸದಾಯಕವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಅನುಕೂಲ ಮಾಡಿಕೊಡಬೇಕು.
- ಭಾಗ್ಯಮ್ಣ. ಗ್ರಾಪಂ ಮಾಜಿ ಸದಸ್ಯೆ
ಅರ್ಧಕ್ಕೆ ನಿಂತ ಬಸ್ ನಿಲ್ದಾಣ ಕಾಮಗಾರಿ
8 ವರ್ಷಗಳ ಹಿಂದೆ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ ನಾರ್ವೆ ಗ್ರಾಪಂ ವ್ಯಾಪ್ತಿಯ ಅಬ್ಬಿಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಗೆ ಅನುಕೂಲವಾಗುವ ಉದ್ದೇಶದಿಂದ ಗ್ರಾಪಂ ವತಿಯಿಂದ ವರ್ಗ 1ರ ನಿಧಿಯಿಂದ 40 ಸಾವಿರ ವೆಚ್ಚದಲ್ಲಿ ಬಸ್ನಿಲ್ದಾಣ ಕಾಮಗಾರಿ ಪ್ರಾರಂಭಿಸಿದ್ದರು. ಆದರೆ ಬಸ್ ನಿಲ್ದಾಣಕ್ಕೆ ಹಣ ಸಾಕಾಗುವುದಿಲ್ಲ ಎಂದು 8 ವರ್ಷಗಳ ಹಿಂದೆ ಗೋಡೆ ಮಾತ್ರ ಕಟ್ಟಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಕುರಿತು ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಕೂಡಲೇ ಬಸ್ ನಿಲ್ದಾಣ ಪೂರ್ಣಗೊಳಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು.
- ಅಬ್ಬಿಹಳ್ಳಿ ಗ್ರಾಮಸ್ಥರು