ಪ್ರಗತಿಗೆ ರಾಜಕೀಯ ನಿರ್ಧಾರ ಅಡ್ಡಗಾಲು: ಶಿವಲಿಂಗೇಗೌಡ
ಅರಸೀಕೆರೆ: ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಎಲ್ಲ ಧರ್ಮ, ಜಾತಿ-ಜನಾಂಗಗಳಿಗೆ ಒಪ್ಪುವ ಸಂವಿಧಾನವನ್ನು ರಚನೆ ಮಾಡಿಕೊಂಡು ಅನೇಕ ರಂಗಗಳಲ್ಲಿ ತನ್ನ ಛಾಪನ್ನು ಮೂಡಿಸಿ ಮುನ್ನಡೆ ಸಾಧಿಸಿದ್ದರೂ ಕೆಲವೊಮ್ಮೆ ರಾಜಕೀಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿನ್ನಡೆ ಸಾಧಿಸುತ್ತಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.
ಪಟ್ಟಣದ ಜೇನುಕಲ್ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಭಾನುವಾರ ಏರ್ಪಡಿಸಿದ್ದ 65ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭವ್ಯ ಭಾರತದ ಕನಸು ನನಸಾಗಲು ಬಹಳ ಮಟ್ಟಿಗೆ ಹೋರಾಟ ಮಾಡಿ ಮಾಹಿತಿ ತಂತ್ರಜ್ಞಾನ ಸೇರಿದಂತೆ ನಾನಾ ರಂಗಗಳಲ್ಲಿ ಯಶಸ್ಸು ಕಾಣುತ್ತಿದ್ದರೂ ರಾಜಕೀಯ ವ್ಯವಸ್ಥೆಯಲ್ಲಿರುವ ಲೋಪದೋಷ ಸರಿಪಡಿಸಿಕೊಳ್ಳುವಲ್ಲಿ ದೇಶವನ್ನಾಳುತ್ತಿರುವ ನಾಯಕರು ಪ್ರಯತ್ನ ನಡೆಸಬೇಕಾಗಿದೆ ಎಂದರು.
ತಹಸೀಲ್ದಾರ್ ಕೇಶವಮೂರ್ತಿ ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ ಚೆನ್ನೈನಲ್ಲಿ ನಡೆದ ಪ್ರೌಢಶಾಲಾ ಮಟ್ಟದ ದಕ್ಷಿಣ ರಾಜ್ಯಗಳ ವಲಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ವಿಭಾಗದಲ್ಲಿ ಸ್ಪರ್ಧಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡ ಡೆಮಾನ್ಸ್ಟ್ರೇಷನ್ ಶಾಲೆಯ ವಿದ್ಯಾರ್ಥಿಗಳು, ವಿಜ್ಞಾನ ಶಿಕ್ಷಕ ದಯಾನಂದ್, ಆದಿಚುಂಚನಗಿರಿ ಶಾಲೆಯ ನಿತೀಶ್, ಸ್ಕೌಟ್ಸ್ ಮತ್ತು ಗೈಡ್ ವಿಭಾಗದಲ್ಲಿ ಸೇವೆ ಸಲ್ಲಿಸಿದ ವಿದ್ಯಾರ್ಥಿಗಳು ಹಾಗೂ ಮಾಜಿ ಸೈನಿಕರನ್ನು ಇದೇ ವೇಳೆ ತಾಲೂಕು ಆಡಳಿತದ ವತಿಯಿಂದ ಗೌರವಿಸಲಾಯಿತು.
ತಾಪಂ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ, ಪುರಸಭೆ ಅಧ್ಯಕ್ಷ ಮೋಹನ್ಕುಮಾರ್, ಉಪಾಧ್ಯಕ್ಷೆ ಭಾಗ್ಯಲತಾ ಮಂಜು, ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ, ತಾಪಂ ಇಒ ಟಿ.ಎನ್.ಮೂರ್ತಿ, ಡಿವೈಎಸ್ಪಿ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ನಟರಾಜ್, ಸಮಾಜ ಸೇವಕ ರೇಲ್ವೆ ಮಹದೇವ್ ಇತರರು ಇದ್ದರು.