ಮತದಾರರು ಹಕ್ಕು ಚಲಾಯಿಸಬೇಕು: ನ್ಯಾ. ಬೋಪಯ್ಯ
ಕ.ಪ್ರ.ವಾರ್ತೆ ಹಾಸನ ಜ 26
ಪ್ರತಿ ಚುನಾವಣೆಯಲ್ಲಿಯೂ ಮತದಾರರು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿ.ಜಿ.ಬೋಪಯ್ಯ ಕರೆ ನೀಡಿದರು.
ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಭಾರತ ಚುನಾವಣಾ ಆಯೋಗದ ವತಿಯಿಂದ ಶನಿವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮತನಾಡಿ, ದೇಶದಲ್ಲಿ ಸಂವಿಧಾನವನ್ನು ಬಲಪಡಿಸಲು ಮತದಾರರ ಸಕ್ರಿಯ ಪಾಲ್ಗೊಳ್ಳುವಿಕೆ ಮುಖ್ಯ. ಪ್ರಜಾಪ್ರಭುತ್ವ ದೇಶದಲ್ಲಿ ಮತದಾರರು ತಮಗೆ ಇಷ್ಟ ಬಂದ ವ್ಯಕ್ತಿಗೆ ಮತ ಹಾಕಲು ಅವಕಾಶ ಮತ್ತು ಹಕ್ಕನ್ನು ಕಲ್ಪಿಸಲಾಗಿದೆ. ಕರ್ತವ್ಯ ಪಾಲನೆಯೂ ಹಕ್ಕಿನಷ್ಟೇ ಪ್ರಾಮುಖ್ಯತೆ ಪಡೆದಿರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಮಾತನಾಡಿ, ಯುವ ಜನತೆ ಮತ್ತು ನಗರ ಪ್ರದೇಶದ ಶುಶಿಕ್ಷಿತ ಮತದಾರರು ಮತದಾನದಿಂದ ದೂರ ಉಳಿಯಬಾರದು. ಮತದಾನದ ಮಹತ್ವದ ಬಗ್ಗೆ ಜಾಗೃತಿಯನ್ನು ಮೂಡಿಸಲು ಸಹಕರಿಸಬೇಕೆಂದರು.
ಮತದಾರರ ಪಟ್ಟಿ ಪರಿಷ್ಕರಣೆ ನಿರಂತರ ಪ್ರಕ್ರಿಯೆಯಾಗಿದ್ದು 18 ವರ್ಷ ತುಂಬಿದವರೆಲ್ಲರೂ ಮತದಾರರ ಗುರುತಿನ ಚೀಟಿ ಪಡೆದು, ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು. ಸ್ಥಳೀಯ ನಾಡ ಕಚೇರಿ ಅಥವಾ ಬೂತ್ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ನಿಗದಿತ ನಮೂನೆಯುಲ್ಲಿ ಅರ್ಜಿ ಸಲ್ಲಿಸಿ ಹೆಸರು ಸೇರ್ಪಡೆ, ತೆಗೆದು ಹಾಕುವುದು, ಮಾರ್ಪಾಡು ಅಥವಾ ತಿದ್ದುಪಡಿ ಮಾಡಬಹುದು ಎಂದರು.
ಸುಶಿಕ್ಷಿತರು ಅರಿವು ಮೂಡಿಸಲಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಮಾತನಾಡಿ, ಗಣರಾಜ್ಯ ವ್ಯವಸ್ಥೆಯಲ್ಲಿ ಸಂವಿಧಾನ ಮಹತ್ತರವಾದದ್ದು. ಪ್ರತಿಯೊಬ್ಬ ಅರ್ಹನೂ ಮತದಾನದಲ್ಲಿ ಪಾಲ್ಗೊಂಡಾಗ ಅದರ ಆಶಯ ಅರಿತಂತಾಗುತ್ತದೆ. ಅದರ ಈಡೇರಿಕೆಗೆ ಸಹಭಾಗಿಗಳಾದಂತಾಗುತ್ತದೆ. ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿರುವ ಸುಶಿಕ್ಷಿತರು ಮಾಹಿತಿ ಇಲ್ಲದವರಿಗೆ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಜಿಪಂ ಸಿಇಒ ಹಾಗೂ ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ಅಧ್ಯಕ್ಷರೂ ಆಗಿರುವ ಉಪೇಂದ್ರ ಪ್ರತಾಪ್ ಸಿಂಗ್ ಮಾತನಾಡಿ, ಪ್ರತಿಯೊಬ್ಬ ಮತದಾರರಿಗೂ ತಮ್ಮ ಹಕ್ಕಿನಷ್ಟೇ ಜವಾಬ್ದಾರಿಗಳಿವೆ. ಅದನ್ನು ಪ್ರದರ್ಶಿಸಬೇಕೆಂದರು.
ಭಾರತೀಯ ಚುನಾವಣಾ ಆಯೋಗ ಎಲ್ಲ ಮತದಾರರನ್ನು ಚುನಾವಣಾ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ಅನೇಕ ಚಟುವಟಿಕೆಗಳನ್ನು ನಡೆಸುತ್ತಿದೆ. ಹೊಸದಾಗಿ ನೋಂದಣಿ ಮಾಡಿಕೊಳ್ಳಲಾದ ಮತದಾರರಿಗೆ ಹಾಗೂ 18 ವರ್ಷ ತುಂಬಿದ ಯುವ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಅನ್ಬುಕುಮಾರ್, ಉಪೇಂದ್ರ ಪ್ರತಾಪ್ ಸಿಂಗ್, ಉಪವಿಭಾಗಾಧಿಕಾರಿ ಶರತ್ ಕೂಡ ಜಿಲ್ಲೆಯ ಮತದಾರರಾಗಿ ಗುರುತಿನ ಚೀಟಿ ಪಡೆದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಅವರು ಸ್ವಾಗತಿಸಿದರು.
ಪ್ರತಿಜ್ಞಾವಿಧಿ ಸ್ವೀಕಾರ
ಈ ಸಂದರ್ಭದಲ್ಲಿ 'ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆ ಮತ್ತು ಪ್ರತಿಯೊಂದೂ ಚುನಾವಣೆಯನ್ನು ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರಭಾವ, ದಾಕ್ಷಿಣ್ಯಗಳಿಗೆ ಒಳಗಾಗದೆ ಮತ ಚಲಾಯಿಸುತ್ತೇವೆ' ಎಂದು ಎಲ್ಲರೂ ಪ್ರತಿಜ್ಞೆ ಸ್ವೀಕರಿಸಿದರು. ಇದೇ ವೇಳೆ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ನಡೆಸಲಾದ ನಾನಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.