ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಧ್ಯಾಹ್ನದ ವೇಳೆಗೆ ಕಳಚಿ ಬಿದ್ದ ರಾಷ್ಟ್ರಧ್ವಜ!

Rashmi Kasaragodu
Updated On : 27 Jan 2014, 1:18 am

ಹೊಳೆನರಸೀಪುರ: ಗಣರಾಜ್ಯೋತ್ಸವ ಆಚರಣೆಯ ಅಂಗವಾಗಿ ತಾಲೂಕು ಆಡಳಿತವು ಇಲ್ಲಿನ ಬಯಲು ರಂಗ ಮಂದಿರ ಮೈದಾನದಲ್ಲಿ ಹಾರಿಸಲಾಗಿದ್ದ ರಾಷ್ಟ್ರಧ್ವಜವು ಮಧ್ಯಾಹ್ನದ ವೇಳೆಗೆ ಧ್ವಜಸ್ಥಂಭದಿಂದ ಕಳಚಿ ಬಿದ್ದಿದೆ.
ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ರಾಷ್ಟ್ರಧ್ವಜವು ಅನಾಥವಾಗಿ ಬಿದ್ದಿರುವ ವಿಷಯ ತಿಳಿದ ಎಬಿವಿಪಿ ಹಾಗೂ ರಕ್ಷಣಾ ವೇದಿಕೆ ಸದಸ್ಯರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ಪಟ್ಟಣದಲ್ಲಿ ನಡೆದಿದೆ.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ಸಂಪ್ರದಾಯದಂತೆ ಗಣರಾಜ್ಯೋತ್ಸವದ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸಿ, ತಾಲೂಕು ದಂಡಾಧಿಕಾರಿಗಳೂ ಆದ ತಹಸೀಲ್ದಾರರು ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಿದ್ದರು. ನಂತರ ನಾನಾ ಶಾಲಾ ಮಕ್ಕಳಿಂದ ಪಥಸಂಚಲನ, ಕವಾಯಿತು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದವು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಎಚ್.ಡಿ.ರೇವಣ್ಣ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮಗಳು ನಡೆದ ನಂತರ ಪಥಸಂಚಲನ, ಸ್ಥಬ್ಧಚಿತ್ರಗಳ ಮೆರವಣಿಗೆಯಲ್ಲಿ ಬಹುಮಾನ ಗಳಿಸಿದ ಶಾಲೆಗಳಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮಗಳು ಬೇರೆಡೆಯಲ್ಲಿ ಮಧ್ಯಾಹ್ನ 12 ಗಂಟೆಯ ನಂತರ ನಡೆದಿತ್ತು. ಆದರೆ ಮಧ್ಯಾಹ್ನ 3 ಗಂಟೆ ವೇಳೆಗೆ ತಾಲೂಕು ಆಡಳಿತದಿಂದ ಹಾರಿಸಲಾಗಿದ್ದ ರಾಷ್ಟ್ರಧ್ವಜ ಕೆಳಗುರುಳಿ ಧ್ವಜಕಟ್ಟೆಯ ಮೇಲೆ ಬಿದ್ದಿದೆ. ಇದನ್ನು ಕಂಡ ನಾಗರಿಕರು, ಎಬಿವಿಪಿ ಹಾಗೂ ಕರವೇ ಕಾರ್ಯಕರ್ತರು ಸ್ಥಳದಲ್ಲಿಯೇ ಪ್ರತಿಭಟನೆಗಿಳಿದರು.
ವಿಷಯ ತಿಳಿದ ಕೂಡಲೇ ಪೊಲೀಸರು ಹಾಗೂ ತಾಲೂಕು ಕಚೇರಿಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಆನಂತರ ಸಾರ್ವಜನಿಕರೇ ಕೆಳಗುರುಳಿ ಬಿದ್ದಿದ್ದ ರಾಷ್ಟ್ರಧ್ವಜವನ್ನು ಮರಳಿ ಧ್ವಜಕ್ಕೆ ಏರಿಸಿ ಕಟ್ಟಿದರು. ಆ ವೇಳೆಗಾಗಲೇ ಸ್ಥಳದಲ್ಲಿ ಜಮಾಯಿಸಿದ್ದ ಎಬಿವಿಪಿ ಕಾರ್ಯಕರ್ತರು ಕರ್ತವ್ಯ ಲೋಪ ಖಂಡಿಸಿ ಕೂಡಲೇ ತಪ್ಪಿತಸ್ಥರನ್ನು ಅಮಾನತುಗೊಳಿಸುವಂತೆ ಪ್ರತಿಭಟನೆ ನಡೆಸಿದರು.
ಎಬಿವಿಪಿ ಕಾರ್ಯಕರ್ತರು ಈ ಘಟನೆಯನ್ನು ಖಂಡಿಸಿ ಸೋಮವಾರ ಮಧ್ಯಾಹ್ನದ ವೇಳೆಗೆ ತಪ್ಪಿತಸ್ಥರ ಹೆಸರನ್ನು ಬಹಿರಂಗಪಡಿಸಿ, ಅವರ ವಿರುದ್ಧ ಕ್ರಮ ಜರುಗಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಮನವಿ ಸಲ್ಲಿಸಿದ್ದಾರೆ. ರಾಷ್ಟ್ರಧ್ವಜ ಕೆಳಗುರುಳಿ ಬೀಳಲು ಯಾರು ಕಾರಣ, ಆಗಿರುವ ಲೋಪಕ್ಕೆ ಯಾರು ಹೊಣೆ ಎಂಬುದನ್ನು ತನಿಖೆ ನಡೆಸಿ ವರದಿ ನೀಡುವಂತೆ ಪೊಲೀಸರಿಗೆ ಖುದ್ದಾಗಿ ದೂರು ನೀಡುವುದಾಗಿ ತಹಸೀಲ್ದಾರ್ ಆರ್.ಬಿ.ಶಿವಶಂಕರಪ್ಪ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement