ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸ್ವಸ್ಥ ಸಮಾಜಕ್ಕೆ ಉತ್ತಮ ಯುವಶಕ್ತಿ ಅಗತ್ಯ: ಮಂಜುನಾಥ್

Rashmi Kasaragodu
Updated On : 27 Jan 2014, 1:21 am

ಹೊಳೆನರಸೀಪುರ: ಚಿಂತನೆ-ವಿವೇಚನೆ ವ್ಯಕ್ತಿತ್ವವುಳ್ಳ ಯುವ ಶಕ್ತಿಯಿಂದ ದೇಶವನ್ನು ಕಟ್ಟುವ ಅದಮ್ಯ ಗುರಿಯನ್ನು ಹೊಂದಿದ್ದ ಸ್ವಾಮಿ ವಿವೇಕಾನಂದರ ಬದುಕಿನ ಯಶೋಗಾಥೆ ಇಂದಿನ ಮತ್ತು ಮುಂದಿನ ಯುವಸಮುದಾಯಕ್ಕೆ ಆದರ್ಶವಾಗಲಿ ಎಂದು ಹಾಸನದ ತಹಸೀಲ್ದಾರ್ ಮಂಜುನಾಥ್ ಅಭಿಪ್ರಾಯಪಟ್ಟರು.
ಆಧ್ಯಾತ್ಮಿಕ ಕನ್ನಡ ಪ್ರಗತಿಪರ ಒಕ್ಕೂಟದ ಆಶಯಗಳುಳ್ಳ ಸ್ವಾಮಿ ವಿವೇಕಾನಂದ ಯುವ ವೇದಿಕೆ ಹಾಗೂ ವಿವೇಕ ಜಾಗೃತ ಬಳಗದ ಆಶ್ರಯದಲ್ಲಿ ಪಟ್ಟಣದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಸ್ವಾಮಿ ವಿವೇಕಾನಂದರ 151ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿವೇಕಾನಂದರ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಎಂದೆಂದಿಗೂ ದಾರಿದೀಪವಾಗಿವೆ ಎಂದರು.
ಸಪ್ತ ಸಾಗರಗಳಾಚೆಗೂ ಭಾರತೀಯ ಸಂಸ್ಕೃತಿ-ಆಧ್ಯಾತ್ಮಿಕತೆ-ಪರಂಪರೆ ಹಾಗೂ ಧಾರ್ಮಿಕತೆಯನ್ನು ಸಾರಿದ ಮಹಾನ್ ಸಂತ ವಿವೇಕಾನಂದರು. ಭಾರತೀಯ ಯುವ ಪರಂಪರೆಯು ಆಧ್ಯಾತ್ಮಿಕ ಪಥವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ದೇಶದಲ್ಲಿನ ಯುವ ಜನರ ಭವಿಷ್ಯ ಉಜ್ವಲವಾಗುವುದರಲ್ಲಿ ಸಂಶಯವಿಲ್ಲ ಎಂದರು.
ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಲಕ್ಷ್ಮೀನಾರಾಯಣಭಟ್ಟ ಮಾತನಾಡಿ, ಒಂದು ದೇಶವು ಭದ್ರ ಬುನಾದಿಯ ಮೇಲೆ ನಿರ್ಮಾಣವಾಗಲು, ಸ್ವಸ್ಥ ಸಮಾಜದ ನಿರ್ಮಾಣವಾಗಲು ಆ ದೇಶದಲ್ಲಿ ಸಾಮಾಜಿಕ-ಬೌದ್ಧಿಕ ಮತ್ತು ಆಧ್ಯಾತ್ಮಿಕ ನೆಲೆಗಳಲ್ಲಿ ಸಮಾನತೆ ಸೃಷ್ಟಿಯಾದಲ್ಲಿ ಮಾತ್ರವೇ ದೇಶದ ಭವಿಷ್ಯ ಉಜ್ವಲಗೊಳ್ಳಲು ಸಾಧ್ಯ ಎಂಬ ಅಂಶವನ್ನು ಮನಗಂಡಿದ್ದ ಮಹಾನ್ ಚಿಂತನಕಾರ ದೇಶಪ್ರೇಮಿ ಸ್ವಾಮಿ ವಿವೇಕಾನಂದರು ಎಂದರು.
ಸ್ವಾಮಿ ವಿವೇಕಾನಂದ ಯುವ ವೇದಿಕೆಯ ಅಧ್ಯಕ್ಷ ಎಂ.ಎಂ.ಎ.ರೆಹಮಾನ್ ಮಾತನಾಡಿ, ದೇಶದಲ್ಲಿ ಶೇ.70ರಷ್ಟು ಯುವಕರಿದ್ದರೂ ಇಂದಿನ ದಿನಗಳಲ್ಲಿ ನಡೆಯುತ್ತಿರುವ ಸಮಾಜ ದ್ರೋಹಿ ಚಟುವಟಿಕೆಗಳು, ಅನೈತಿಕ ಚಟುವಟಿಕೆಗಳು ಮೊದಲಾದ ದೇಶವಿರೋಧಿ ಚಟುವಟಿಕೆಗಳಲ್ಲಿ ಯುವಕರೇ ತೊಡಗಿರುವುದು ಅಘಾತಕಾರಿ ಅಂಶ. ವೇದಿಕೆಯು ಕಳೆದ ಐದು ವರ್ಷಗಳಿಂದಲೂ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಸೇವೆಗೆ ಮುಂದಾದಾಗ ಸಾರ್ವಜನಿಕರಿಂದ ದೊರೆತಿರುವ ಅಪಾರ ಬೆಂಬಲಕ್ಕೆ ವೇದಿಕೆ ಚಿರಋಣಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಟಿ.ಎಸ್.ಲಕ್ಷ್ಮೀಕಾಂತ್ ಮಾತನಾಡಿ, ಯುಶಕ್ತಿ ಒಗ್ಗೂಡಿ ಮನಸ್ಸು ಮಾಡಿದಲ್ಲಿ ಎಂತಹ ಸಾಧನೆಯನ್ನಾದರೂ ಸಾಧಿಸಬಹುದು. ಆದರೂ ಇಂದು ಯುವಜನತೆಯು ಜೀವನದಲ್ಲಿ ಗುರಿಗಳಿಲ್ಲದೇ ಸಾಗುತ್ತಿರುವುದು ವಿಷಾದನೀಯ ಎಂದರು.
ಚಿತ್ರಕಲಾ ಶಿಕ್ಷಕರಾದ ಚಂದ್ರಶೇಖರ್, ಪತ್ರಿಕಾ ಕ್ಷೇತ್ರದಲ್ಲಿನ ಸೇವೆಗಾಗಿ ಆರ್.ರಂಗಸ್ವಾಮಿ, ಶುಶ್ರೂಷಕ ಸೇವೆಗಾಗಿ ಜಗದೀಶ್ ಹಾಗೂ ಸರ್ಕಾರಿ ಸೇವೆಗಾಗಿ ಚಾಲಕ ಲಿಂಗಮೂರ್ತಿ ಅವರನ್ನು ವೇದಿಕೆಯ ವತಿಯಿಂದ ಸನ್ಮಾನಿಸಲಾಯಿತು.
ತಾಪಂ ಸದಸ್ಯ ಸಿ.ಆರ್.ಮಂಜುನಾಥ್, ತಹಸೀಲ್ದಾರ್ ಆರ್.ಬಿ.ಶಿವಶಂಕರಪ್ಪ, ವಿವೇಕ ಜಾಗೃತ ಬಳಗದ ಅಧ್ಯಕ್ಷ ಕಮಲಾಕ್ಷ, ವೇದಿಕೆಯ ಗೌರವಾಧ್ಯಕ್ಷ ಎಚ್.ಆರ್.ಪ್ರದೀಪ್ಕುಮಾರ್, ಪ್ರಧಾನ ಕಾರ್ಯದರ್ಶಿ ಕಡವಿನಕೋಟೆ ಚಂದ್ರು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement