29ರಂದು 'ಜೆಡಿಎಸ್ ಬೆಳೆಸೋಣ' ಸಮಾವೇಶ
ಹಾಸನ: ಜೆಡಿಎಸ್ ಬೆಳೆಸೋಣ ದೇಶ ಉಳಿಸೋಣ ಸಮಾವೇಶ ಜ. 29ರಂದು ಬೆಂಗಳೂರಿನ ಅರಮನೆ ಆವರಣದಲ್ಲಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಯುವ ಚೇತನಾ ಬೈಕ್ ರ್ಯಾಲಿಯಲ್ಲಿ 1 ಲಕ್ಷಕ್ಕೂ ಅಧಿಕ ಬೈಕ್ಗಳಲ್ಲಿ ಯುವ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಜೆಡಿಎಸ್ ಯುವ ಮುಖಂಡ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ.
ಅಂದಿನ ಸಮಾವೇಶಕ್ಕೆ ರಾಜ್ಯದ ಎಲ್ಲೆಡೆಗಳಿಂದ ಯುವಕರು ಅತ್ಯುತ್ಸಾಹದಿಂದ ಬೈಕ್ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಸಮಾಜವನ್ನು ಅಧೋಗತಿಗೆ ಕೊಂಡೊಯ್ಯುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ರಾಜ್ಯ ಮತ್ತು ದೇಶವನ್ನು ರಕ್ಷಿಸಬೇಕಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಪ್ರಬಲ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಅನ್ನು ಇನ್ನಷ್ಟು ಬಲಗೊಳಿಸುವ ಅಗತ್ಯವಿದ್ದು, ಇದಕ್ಕೆ ಯುವಕರು ಕೈಜೋಡಿಸುವಂತೆ ಅವರು ಮನವಿ ಮಾಡಿದ್ದಾರೆ.
ಕೃತಜ್ಞತೆ: ರಾಜ್ಯದ ಪ್ರತಿ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಸಂಘಟನೆಗೆ ಯುವಕರ ಪಾತ್ರ ಅಮೋಘವಾದುದು. ಈ ಹಿನ್ನೆಲೆಯಲ್ಲಿ ಪಕ್ಷದ ಏಳಿಗೆಗೆ ದುಡಿಯುತ್ತಿರುವ ಯುವಕ ಮಿತ್ರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಹೀನಾಯ ಪರಿಸ್ಥಿತಿ: ಮಿತಿ ಮೀರಿದ ಭ್ರಷ್ಟಾಚಾರದಿಂದಾಗಿ ರಾಜ್ಯ ಮತ್ತು ದೇಶದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಜಾತಿ-ಜಾತಿ ಮತ್ತು ಧರ್ಮ- ಧರ್ಮಗಳ ನಡುವೆ ವಿಷ ಬೀಜಬಿತ್ತುವ ಅಶಾಂತಿ ಕೆಲಸ ನಿರಂತರವಾಗಿ ನಡೆಯುತ್ತಿದೆ. ಬಡವರ್ಗದವರ ಅಳಲನ್ನು ಆಡಳಿತ ನಡೆಸುತ್ತಿರುವವರು ಕೇಳುತ್ತಿಲ್ಲ. ಬೆಳೆದ ಬೆಲೆಗೆ ಸೂಕ್ತ ಬೆಲೆ ಇಲ್ಲದೆ ಅನ್ನದಾತ ಆಳುವ ದೊರೆಗಳ ಮನೆ ಮುಂದೆ ಸಾವಿಗೆ ಕೊರಳೊಡ್ಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆಶಾಕಿರಣ: ಇಂಥ ಆಡಳಿತ ವೈಖರಿಯಿಂದಾಗಿ ಬೇಸತ್ತಿರುವ ನಾಡಿನ ಜನತೆಗೆ ಹಿಂದಿನಿಂದಲೂ ಜನರ ನಡುವೆ ನಿಂತು, ಜನಪರವಾದ ಹೋರಾಟ ಮಾಡುತ್ತಾ ಬಂದಿರುವ ಜೆಡಿಎಸ್ ಪಕ್ಷ ಒಂದು ಆಶಾಕಿರಣವಾಗಿದೆ ಎಂದಿದ್ದಾರೆ.
ಮನವಿ: ಮುಖ್ಯಮಂತ್ರಿಯಾಗಿ, ದೇಶದ ಮೊದಲ ಕನ್ನಡಿಗ ಪ್ರಧಾನಿಯಾಗಿ ಎಚ್.ಡಿ.ದೇವೇಗೌಡರು ಕೃಷಿ, ನೀರಾವರಿ, ಮೂಲಭೂತ ಸೌಕರ್ಯ ಅಭಿವೃದ್ಧಿಗೆ ರಾಜ್ಯ, ದೇಶದ ಜನ ನೆನೆಯುವ ಕೆಲಸ ಮಾಡಿದ್ದಾರೆ. ಅಲ್ಲದೇ ಕೇವಲ 20 ತಿಂಗಳ ಜೆಡಿಎಸ್ ಅಧಿಕಾರಾವಧಿಯಲ್ಲಿ ರಾಜ್ಯದ ಅಭಿವೃದ್ಧಿ ಚಿತ್ರಣವೇ ಬದಲಾಗಿತ್ತು.
ಜೆಡಿಎಸ್ನ ಈ ತತ್ವ-ಸಿದ್ಧಾಂತ ಮನಗಂಡು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕಿದೆ. ಇದಕ್ಕಾಗಿ ಪ್ರತಿಯೊಬ್ಬರೂ ಕೈಜೋಡಿಸಿ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಸಿದ್ಧಾಂತ ಹೊಂದಿರುವ ಜೆಡಿಎಸ್ಗೆ ಶಕ್ತಿ ತುಂಬಿ ಎಂದು ಅವರು ಮನವಿ ಮಾಡಿದ್ದಾರೆ