ಕಳಪೆ ಕಾಮಗಾರಿ ಕುರಿತು ಆಕ್ಷೇಪ
ರಾಮನಾಥಪುರ: ಇಲ್ಲಿಗೆ ಸಮೀಪದ ಕಟ್ಟೇಪುರದ ಕಾವೇರಿ ನದಿಯ ಎಡದಂಡೆ ಮತ್ತು ಬಲದಂಡೆಯ ನಾಲಾ ಕಾಮಗಾರಿಯನ್ನು ಎಸ್.ಎನ್.ಸಿ. ಪವರ್ ಕಾರ್ಪೊರೇಷನ್ ಕಂಪನಿಯವರು ನಿರ್ವಹಿಸುತ್ತಿದೆ.
ಈ ಕಾಮಗಾರಿಯನ್ನು ಆರಂಭಿಸಿದಾಗಿನಿಂದಲೂ ಅನೇಕ ಕಡೆ ನಾಲೆಯ ಸಿಮೆಂಟ್ ಲೈನಿಂಗ್ ಕುಸಿದು ಹೋಗಿರುವ ಆರೋಪಗಳು ಕೇಳಿ ಬರುತ್ತಿರುವುದರ ಜತೆಗೆ ಇತ್ತೀಚೆಗೆ ರುದ್ರಪಟ್ಟಣದ ಬಳಿ ನಿರ್ಮಿಸಿದ ಬಲದಂಡೆ ನಾಲೆ ಸಿಮೆಂಟ್ ಲೈನಿಂಗ್ ಕೂಡ ಕುಸಿದು ಹೋಗಿರುವುದು ಈ ಕಂಪನಿಯವರು ನಿರ್ವಹಿಸುತ್ತಿರುವ ಕಳಪೆ ಕಾಮಗಾರಿಯ ಅಸಲಿ ಬಣ್ಣ ಬಯಲಾಗಿದೆ ಎಂದು ಸ್ಥಳೀಯ ಗ್ರಾಮಸ್ಥ ರೇವಣ್ಣ ಆರೋಪಿಸಿದ್ದಾರೆ.
ನಾಲೆಯ ಸಿಮೆಂಟ್ ಲೈನಿಂಗ್ ಎಸ್.ಎನ್.ಸಿ. ಕಂಪನಿಯವರ ಕಳಪೆ ಮತ್ತು ಬೇಜವಾಬ್ದಾರಿಯಿಂದಾಗಿ ಈ ರೀತಿ ಅಲ್ಲಲ್ಲಿ ಕುಸಿದು ಹೋಗಲು ಕಾರಣವಾಗಿದೆ. ನಾಲಾ ಕಾಮಗಾರಿಯ ನಿರ್ವಹಣೆಯನ್ನು ವಜಾಗೊಳಿಸಿ ಈ ಕಾಮಗಾರಿ ಕುರಿತು ಜನಪರ ಸಂಘಟನೆಗಳು ಮುಂದಾಗಿ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿದರು.