ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ; ನಾನಾ ಕಾಮಗಾರಿ ಶಂಕುಸ್ಥಾಪನೆ ರದ್ದು
ಕ.ಪ್ರ. ವಾರ್ತೆ ಟಿ ಬೇಲೂರು ಟಿ ಜ. 27
ಪಟ್ಟಣ ಪುರಸಭೆಯಿಂದ ಹಮ್ಮಿಕೊಂಡಿದ್ದ ರು. 5 ಕೋಟಿ ವೆಚ್ಚದ ನಾನಾ ಕಾಮಗಾರಿ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಹಾಗೂ ಒತ್ತಾಯದ ಮೇರೆಗೆ ರದ್ದುಗೊಳಿಸಿದ ಘಟನೆ ಸೋಮವಾರ ನಡೆಯಿತು.
ಇಲ್ಲಿನ ಗುರುಪ್ಪಗೌಡರ ಬೀದಿಯಲ್ಲಿ ಪುರಸಭೆಯಿಂದ ಬೃಹತ್ ವೇದಿಕೆಯನ್ನು ಸಿದ್ದಪಡಿಸಿ 5 ಕೋಟಿ ರು. ವೆಚ್ಚದ ವಿವಿಧ ಕಾಮಗಾರಿಗೆ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಎಂದು ಕರಪತ್ರದಲ್ಲಿ ಮುದ್ರಿಸಲಾಗಿತ್ತು. 12 ಗಂಟೆಯಾದರೂ ಶಾಸಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಭೆಯಲ್ಲಿ ಪತ್ತೆಯಾಗಲಿಲ್ಲ.
ತೀವ್ರ ತರಾಟೆಗೆ: ಇದೇ ಸಂದರ್ಭದಲ್ಲಿ ಸಭೆ ಆಗಮಿಸಿದ ಮಾಜಿ ಪುರಸಭೆ ಅಧ್ಯಕ್ಷ ಹಾಲಿ ಸದಸ್ಯ ಎಂ.ಆರ್. ವೆಂಕಟೇಶ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪುನಿತ್, ದಾನಿ, ಪ್ರಸನ್ನ, ಎಂ. ಜಿ. ವೆಂಕಟೇಶ್, ತೀರ್ಥಂಕರ್, ಜುಬೇರ್ ಹಾಗೂ ಇತರೆ ಕಾಂಗ್ರೆಸ್ ಕಾರ್ಯಕರ್ತರು ಪುರಸಭೆ ಮುಖ್ಯಾಧಿಕಾರಿ ಬಸವರಾಜು ಅವರನ್ನು ತೀವ್ರ ತರಾಟೆ ತೆಗದುಕೊಂಡರು.
ಪುರಸಭೆ ಸದಸ್ಯ ಎಂ.ಆರ್. ವೆಂಕಟೇಶ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ, ಸರ್ಕಾರ ರು. 5 ಕೋಟಿ ಅನುದಾನವನ್ನು ಪಟ್ಟಣ ಪುರಸಭೆಗೆ ನೀಡಿದೆ, ಆದರೆ ಅದೇ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರನ್ನು, ವಾರ್ಡಿನ ಸದಸ್ಯರನ್ನು ಸರ್ಕಾರಿ ಕಾರ್ಯಕ್ರಮಕ್ಕೆ ಆಹ್ವಾನಿಸದಿರುವುದು, ಆಹ್ವಾನ ಪತ್ರಿಕೆಯನ್ನು ಮುದ್ರಿಸದಿರುವುದು ಪುರಸಭೆ ಅಧಿಕಾರಿಗಳ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿದೆ ಎಂದ ಕಿಡಿಕಾರಿದರಲ್ಲದೆ ಪುರಸಭೆ ಅಧಿಕಾರಿಗಳು ಶಾಸಕರಿಗೆ ಸುಳ್ಳು ಮಾಹಿತಿಯನ್ನು ನೀಡಿ ದಾರಿ ತಪ್ಪಿಸುವ ಮೂಲಕ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಣವಿಲ್ಲವೇ?: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಅವರನ್ನು ಸೌಜನ್ಯಕ್ಕೂ ಆಹ್ವಾನಿಸದಿರುವುದು ಪುರಸಭೆ ಅಧಿಕಾರಿಗಳ ದಲಿತ ವಿರೋಧ ನೀತಿಯನ್ನು ಎತ್ತಿತೋರಿಸುತ್ತಿದೆ. ಅಲ್ಲದೆ 5 ಕೋಟಿ ರು. ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆಗೆ ಹೆಚ್ಚು ಪ್ರಚಾರವನ್ನು ಕೊಡದೆ ತರಾತುರಿಯಲ್ಲಿ ಸಮಾರಂಭವನ್ನು ಆಯೋಜಿಸಲಾಗಿದೆ. ಆಹ್ವಾನ ಪತ್ರಿಕೆಯನ್ನು ಮುದ್ರಣ ಮಾಡಲು ಪುರಸಭೆಯಲ್ಲಿ ಹಣವಿಲ್ಲವೇ ಎಂದು ಪ್ರಶ್ನಿಸಿದರು.
ಒತ್ತಾಯ: ಆಹ್ವಾನ ಪತ್ರಿಕೆ ಎಂದು ಕರಪತ್ರ ಮುದ್ರಣ ಮಾಡಿದ್ದು ಅದರಲ್ಲೂ ಶಿಷ್ಟಾಚಾರವನ್ನು ಉಲ್ಲಂಘಿಸಲಾಗಿದೆ. ಪುರಸಭೆ ಆಡಳಿತಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಮಧುಕೇಶ್ವರ್ ಫುಟ್ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸುವಲ್ಲಿ ತೋರುವ ಉತ್ಸಾಹವನ್ನು ಪುರಸಭೆಯ ಆಡಳಿತದಲ್ಲೂ ತೋರಬೇಕಿದೆ. ಏಕೆಂದರೆ, ಪರಸಭೆಯ ಆಡಳಿತದ ದುರಾಡಳಿತ ಮುಗಿಲು ಮುಟ್ಟಿದ್ದು ಎಲ್ಲಾ ಕಾಮಗಾರಿಯಲ್ಲೂ ಗೋಲ್ ಮಾಲ್ ನಡೆಯುತ್ತಿದ್ದು ಲೋಕಾಯುಕ್ತರಿಗೆ ದೂರನ್ನು ನೀಡುವುದಾಗಿ ಹೇಳಿದರಲ್ಲದೆ ಕೂಡಲೇ ಮುಖ್ಯಾಧಿಕಾರಿ ಶಂಕುಸ್ಥಾಪನಾ ಸಮಾರಂಭವನ್ನು ರದ್ದುಗೊಳಸುವಂತೆ ಒತ್ತಾಯಿಸಿದರು.
ಮುಖ್ಯಾಧಿಕಾರಿ ಬಸವರಾಜು ಮಾತನಾಡಿ, ಉಪವಿಭಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ಶಾಸಕರ ಸೂಚನೆ ಮೇರೆಗೆ ಈದಿನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲಾ ತಾಲೂಕು ಕೇಂದ್ರದಲ್ಲಿ ನಡೆದ ಸಮಾರಂಭದಂತೆ ಇಲ್ಲಿ ನಡೆಯುತ್ತಿದೆ. ಮಳೆಗಾಲ ಹತ್ತಿರವಿದ್ದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಬಿಡುವಿಲ್ಲ ಕಾರಣ, ಶಂಕುಸ್ಥಾಪನೆ ಕಾರ್ಯಕ್ರಮ ಏರ್ಪಡಿಸುವಂತೆ ಡಿ.ಸಿ ಅವರ ಆದೇಶದ ಮೇರೆಗೆ ಶಾಸಕರು ಸೂಚನೆ ನೀಡಿದ್ದರಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಕೆಲವು ಕಾಂಗ್ರೆಸ್ ರ್ತರು ಸಮಾರಂಭ ನಡೆಸದಂತೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಉಪವಿಭಾಧಿಕಾರಿಗಳಿಗೆ ದೂರವಾಣಿ ಕರೆಮಾಡಿ ಸಂದರ್ಭವನ್ನು ವಿವರಿಸಿದ್ದು ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದರು.